More

    ಮಹೋತ್ಸವದಿಂದ ಸಾಮರಸ್ಯ ಸಾಧ್ಯ- ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ

    ಕೊಟ್ಟೂರು: ಜಾತಿ ವ್ಯವಸ್ಥೆ ನಿರ್ಮೂಲನಕ್ಕೆ ಶರಣರು, ಸಂತರು ಬದುಕು ಸವೆಸಿದ್ದಾರೆ. ನಾವೂ ಸಹ ಸಮುದಾಯ ಸಮುದಾಯಗಳ ನಡುವೆ ಗಟ್ಟಿಯಾದ ಸಾಮರಸ್ಯ, ಸೌಹಾರ್ದ, ಸಹಬಾಳ್ವೆ ಬೆಸುಗೆ ಸೃಷ್ಟಿಸಬೇಕಿದೆ ಎಂದು ಸಿರಿಗೆರೆ ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ಜ.28ರಿಂದ ನಡೆಯಲಿರುವ ತರಳುಬಾಳು ಹುಣ್ಣಿಮೆ ಮಹೋತ್ಸವದ ನಿಮಿತ್ತ ಶುಕ್ರವಾರ ಸಮುದಾಯಗಳ ಪ್ರಮುಖ ಸಭೆಯಲ್ಲಿ ಮಾತನಾಡಿದರು. ತರಳುಬಾಳು ಹುಣ್ಣಿಮೆ ಒಂದೇ ಸಮುದಾಯಕ್ಕೆ ಸೇರಿಲ್ಲ. ಎಲ್ಲ ಸಮುದಾಯಗಳ ಸಹಭಾಗಿತ್ವ, ಸಹಕಾರದೊಂದಿಗೆ ನಡೆಯುವ ಕಾರ್ಯಕ್ರಮವಿದು. ಕರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ನಡೆದಿಲ್ಲ. ಈ ವರ್ಷವೂ ಕರೊನಾದ ಕರಿನೆರಳು ರಾಜ್ಯ ಮತ್ತು ಹುಣ್ಣಿಮೆ ಮೇಲೆ ಬೀಳದಿರಲಿ ಎಂದರು.

    ಇದೇ ಸಂದರ್ಭ ಮಂಟಪ, ವಸತಿ, ವಾಹನ, ನೀರು, ವಿದ್ಯುತ್, ದಾಸೋಹ, ಆರೋಗ್ಯ, ವಸ್ತು ಪ್ರದರ್ಶನ, ಲೆಕ್ಕ ಪತ್ರ ಪರಿಶೀಲನಾ, ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ, ಚರ್ಚಾ ಸ್ಪರ್ಧೆ, ಸ್ವಚ್ಛತಾ ಸಮಿತಿಗಳನ್ನು ರಚನೆ ಮಾಡಲಾಯಿತು. ಸಭೆಯಲ್ಲಿ ಹಾಜರಿದ್ದ ಸಮುದಾಯಗಳ ಮುಖಂಡರ ಅಭಿಪ್ರಾಯದಂತೆ ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಕೊಪ್ಪಳ ಗವಿಶ್ರೀ, ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯರು, ಶ್ರೀ ನಿರಂಜನಾನಂದ ಸ್ವಾಮೀಜಿ, ಶ್ರೀ ಪ್ರಸನ್ನನಂದಾ ಪುರಿ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ, ಶ್ರೀ ಅನ್ನದಾನಿ ಭಾರತೀ ಹಡಪದ ಅಪ್ಪಣ್ಣ ಸ್ವಾಮೀಜಿ, ಶ್ರೀ ಡಾ. ಬಸವ ಮಾಚೀದೇವಿ ಸ್ವಾಮೀಜಿ, ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಶ್ರೀ ಸಚ್ಚಿದಾನಂದ ಸರಸ್ವತಿ, ಶ್ರೀ ಡಾ. ಜಯಬಸವ ಕುಮಾರ ಸ್ವಾಮೀಜಿ ಇವರನ್ನು ಮಹೋತ್ಸವಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು.

    ಪ್ರಮುಖರಾದ ಡಾ. ಬಿ.ಸಿ. ಮೂಗಪ್ಪ, ಪಿ.ಎಚ್. ದೊಡ್ಡ ರಾಮಣ್ಣ, ಪತ್ತಿಕೊಂಡ ಶಂಬುನಾಥ ಶೆಟ್ರು. ಉಜ್ಜಿನಿ ಶಾಂತನಹಳ್ಳಿ ಕೊಡದಪ್ಪ, ಅಡಕಿ ಮಂಜುನಾಥ್, ಮರಿಸ್ವಾಮಿ, ಬಿ.ಎಸ್. ವೀರೇಶ, ಕಾಮಶೆಟ್ಟಿ ಕೊಟ್ರೇಶ, ಚಾಪಿ ಚಂದ್ರಪ್ಪ, ತೋಟದ ರಾಮಣ್ಣ, ಚಿರಬಿ ಕೊಟ್ರೇಶ, ಮಾ.ಗು. ಗುರುಸಿದ್ದನಗೌಡ, ಡಿ. ಮೂಗಪ್ಪ, ಕುಂಬಾರ ಕೊಟ್ರೇಶ, ಅಯೂಬ್ ಸಾಹೇಬ್, ಬೋರ್‌ವೆಲ್ ತಿಪ್ಪೇಸ್ವಾಮಿ, ಅಲಬೂರು ಶಾಂತಕುಮಾರ್, ಗುರು ಬಸವರಾಜ್, ಚಿರಬಿ ಪ್ರಕಾಶ, ಬುಗ್ಗಳಿ ಕೊಟ್ರೇಶ, ಮಂಡಕ್ಕಿ ಪ್ರಕಾಶ, ಎಂ. ಭೀಮೇಶ, ಕುಂಬಾರ ನಾಗರಾಜ್, ಉಜ್ಜಿನಿ ಸಿದ್ದಲಿಂಗ ಸ್ವಾಮಿ ಇನ್ನು ಮುಂತಾದವರಿದ್ದರು.

    ನೀರಾವರಿ ಯೋಜನೆಗೆ ಸಮ್ಮತಿ
    ಕೊಟ್ಟೂರು: ಪಟ್ಟಣ ಹಾಗೂ ತಾಲೂಕಿನ ಕೆರೆಗಳು ಸೇರಿದಂತೆ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸುವ ಯೋಜನೆ ಕುರಿತಂತೆ ಡಾ. ಶಿವಮೂರ್ತಿ ಶಿವಾಚಾರ್ಯರು ಸಿಹಿಸುದ್ದಿ ನೀಡಿದರು.

    ಹುಣ್ಣಿಮೆ ಮಹೋತ್ಸವದ ಅಂಗವಾಗಿ ಕಳೆದ ಬಾರಿ ಈ ಭಾಗದಿಂದ ಕರೆದಿದ್ದ ಸಭೆಯಲ್ಲಿ ಕೊಟ್ಟೂರು ಕೆರೆಗೆ ನೀರು ತುಂಬಿಸುವ ಯೋಜನೆ ಕುರಿತು ಶ್ರೀಗಳ ಗಮನಕ್ಕೆ ತರಲಾಗಿತ್ತು. ಈ ಕುರಿತು ಶುಕ್ರವಾರದ ಕರೆದಿದ್ದ ಸಭೆಯಲ್ಲಿ ಮತ್ತೊಮ್ಮೆ ಪ್ರಸ್ತಾಪವಾಯಿತು. ರಾಜವಾಳದಿಂದ ಕೊಟ್ಟೂರು ತಾಲೂಕು ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸುವ 380 ಕೋಟಿ ರೂ. ಯೋಜನೆ ಅನುಷ್ಠಾನವಾಗುವುದು ಸ್ವಲ್ಪ ತ್ರಾಸು. ಆ ಯೋಜನೆ ಅನುಷ್ಠಾನಕ್ಕೆ ಕೆಲ ವರ್ಷಗಳು ಬೇಕಾಗಬಹುದು ಎಂದು ಸಭೆಗೆ ಶ್ರೀಗಳು ಮನವರಿಕೆ ಮಾಡಿದರು.

    ಈಗಾಗಲೇ ರಾಜವಾಳದಿಂದ ಕೊಟ್ಟೂರು ಮಾರ್ಗವಾಗಿ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ಬೃಹತ್ ನೀರಿನ ಪೈಪ್ ಹಾದು ಹೋಗಿವೆ. ಕೊಟ್ಟೂರಿನಿಂದ ಎಂಟು ಕಿಮೀ ದೂರದ ಬೈರಿದೇವರಗುಡ್ಡದ ಕೆರೆ ಸಮೀಪದಲ್ಲಿ ನೀರು ಸಂಗ್ರಹಿಸಿ, ಅಲ್ಲಿಂದ ಕೂಡ್ಲಿಗಿ ತಾಲೂಕಿನ ಇತರೆ ಕೆರೆಗಳಿಗೆ ನೀರು ಹರಿಸುವುದು ಈ ಯೋಜನೆ ಎಂದರು.

    ಸಭೆ ನಡೆಯುತ್ತಿರುವಾಗಲೇ ರಾಜ್ಯ ನೀರಾವರಿ ಇಲಾಖೆ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿ, ಅವರೊಂದಿಗೆ ನೀರಿನ ಯೋಜನೆ ಕುರಿತು ಚರ್ಚಿಸಿದರು. ಈ ವಿಚಾರಕ್ಕೆ ನೀರಾವರಿ ಇಲಾಖೆ ಮುಖ್ಯಸ್ಥರು ಸಮ್ಮತಿಸಿದರು. ಬೈರಿದೇವರ ಗುಡ್ಡದ ಕೆರೆಯಿಂದ ಕೊಟ್ಟೂರು ಕೆರೆಗೆ ನೀರು ತರಲು ಕೇವಲ 20 ಕೋಟಿ ರೂ. ಖರ್ಚಾಗುತ್ತದೆ ಎಂದು ರಾಜ್ಯ ನೀರಾವರಿ ಇಲಾಖೆ ಮುಖ್ಯಸ್ಥರು ಶ್ರೀಗಳಿಗೆ ವಿವರಿಸಿದರು. ಇದಕ್ಕೆ ಉತ್ತರಿಸಿದ ಶ್ರೀಗಳು, ಇದೇ ಯೋಜನೆ ಸೂಕ್ತ ಮತ್ತು ಸುಲಭವಾಗಿದೆ. ಇದೇ ಯೋಜನೆಯನ್ನು ಜಾರಿಗೆ ತರಲು ತ್ವರಿತವಾಗಿ ಸಿದ್ಧತೆಗಳಾಗಲಿ ಎಂದು ಶ್ರೀಗಳು ಹೇಳಿದರು.

    ಪಾಣಿನಿ ಮಹರ್ಷಿ ಸೂತ್ರದ ಸಮಸ್ಯೆಗೆ ಕೇಂಬ್ರಿಡ್ಜ್ ವಿವಿಯ ಪಿಎಚ್.ಡಿ ವಿದ್ಯಾರ್ಥಿ ರಿಷಿ ರಾಜ್ ಪೊಪಟ್ ಪರಿಹಾರ ಹುಡುಕಿದ್ದಾರೆನ್ನುವುದು ತರ್ಕಬದ್ಧವಲ್ಲದ ಅಮಾನ್ಯ ಮತ್ತು ತಪ್ಪು ದಾರಿಗೆಳೆಯುವಂತಾಗಿದೆ. ಪಾಣಿನಿ ಮಹರ್ಷಿಯ ಅಷ್ಟಾಧ್ಯಾಯಿ ಸಂಸ್ಕೃತ ವ್ಯಾಕರಣ ಗ್ರಂಥವನ್ನು ಅಳವಾಗಿ ಅಧ್ಯಯನಮಾಡಿ, ಜಗತ್ತಿನಲ್ಲೇ ಮೊದಲು ಸಾಫ್ಟ್‌ವೇರ್ ರೂಪಿಸಿದ್ದು ನಾವೇ. ಆದರೆ, ರಿಷಿ ರಾಜ್ ಪೊಪಟ್ ಅವರ ಪ್ರತಿಶೋಧ ಆಘಾತ ಉಂಟುಮಾಡಿದೆ. ಪೊಪಟ್ ತನ್ನ ಅನುಕೂಲಕ್ಕೆ ತಕ್ಕಂತೆ ತಪ್ಪಾಗಿ ಅಥೈಸಿಕೊಂಡಿದ್ದಾರೆ. ಕೇಂಬ್ರಿಡ್ಜ್ ವಿವಿಗೆ ಸಲ್ಲಿಸಿರುವ ಪ್ರಬಂಧವನ್ನು ನಾನು ಪರಿಶೀಲಿಸಿದೆ. ಇದರಲ್ಲಿ ತಪ್ಪುಗಳಿವೆ. ಇದನ್ನು ಅನುಮೋದಿಸುವ ವಿವಿಯ ಮಾರ್ಗದರ್ಶಿಗಳು ಕಾಳಜಿವಹಿಸಬೇಕಿತ್ತು.
    | ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts