More

    ಕೊಟ್ಟೂರಲ್ಲಿ ಕರ್ತವ್ಯ ನಿರತ ಕರೊನಾ ಸೇನಾನಿಗಳ ಮೇಲೆ ಪಾನಮತ್ತ ಪೇದೆ ಹಲ್ಲೆ

    ಕೊಟ್ಟೂರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಕರ್ತವ್ಯ ನಿರತ ಕರೊನಾ ಸೇನಾನಿಗಳ ಮೇಲೆ ಪಾನಮತ್ತ ಮುಖ್ಯಪೇದೆ ಹಲ್ಲೆ ಮಾಡಿದ್ದು, ಪಟ್ಟಣ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

    ನಜೀರ್ ವಾಹಿದ್ ಹಲ್ಲೆ ಮಾಡಿದ ಮುಖ್ಯಪೇದೆ. ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬೇರೆ ಪಟ್ಟಣ ಮತ್ತು ಜಿಲ್ಲೆಗಳಿಂದ ರಾತ್ರಿ ವೇಳೆ ಕೊಟ್ಟೂರಿಗೆ ಆಗಮಿಸುವ ವ್ಯಕ್ತಿಗಳ ವಿವರ ಸಂಗ್ರಹಿಸಲು ಕಂದಾಯ ಇಲಾಖೆ ವಿಎಗಳಾದ ರಮೇಶ, ಕೊಟ್ರೇಶ, ಗ್ರಾಮ ಸಹಾಯಕ ಬಸವರಾಜ್, ಆರೋಗ್ಯ ಇಲಾಖೆಯ ತಿಪ್ಪೇಸ್ವಾಮಿ, ವಿನಯರಾಜ್, ಪ್ರದೀಪ್ ನಾಯ್ಕರನ್ನು ನಿಯೋಜಿಸಲಾಗಿದೆ. ಎಂದಿನಂತೆ ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದಾಗ ಮುಖ್ಯಪೇದೆ ನಜೀರ್ ವಾಹಿದ್ ಪಾನಮತ್ತರಾಗಿ ಸಿಬ್ಬಂದಿ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಗೃಹರಕ್ಷಕ ದಳದ ಸಿಬ್ಬಂದಿ, ಸರ್ಕಾರಿ ನೌಕರರು ಕರ್ತವ್ಯದಲ್ಲಿದ್ದಾರೆಂದು ತಿಳಿಸಿದರೂ ವಿಎ ಬಿ.ಕೊಟ್ರೇಶ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸಿಬ್ಬಂದಿ ಪಟ್ಟಣ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ಎಸಿ, ಡಿಸಿಗೆ ವರದಿ: ಕರೊನಾ ತಡೆ ಕಾರ್ಯದಲ್ಲಿ ನಿರತರಾಗಿದ್ದ ಸರ್ಕಾರಿ ಸಿಬ್ಬಂದಿ ಮೇಲೆ ನಿಂದನೆ ಹಾಗೂ ಹಲ್ಲೆ ನಡೆಸಿದ ಮುಖ್ಯಪೇದೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ ಶುಕ್ರವಾರ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಮನವಿ ಸಲ್ಲಿಸಿತು. ತಹಸೀಲ್ದಾರ್ ಅನಿಲ್‌ಕುಮಾರ್ ಪ್ರತಿಕ್ರಿಯಿಸಿ, ಕರೊನಾದಂತಹ ಸಂಕಷ್ಟ ಸಮಯದಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಪೇದೆ ಕಾರಣವಿಲ್ಲದೆ ನಿಂದಿಸಿ ಹಲ್ಲೆ ಮಾಡಿರುವುದು ಖಂಡನೀಯ. ಈ ಕುರಿತು ಎಸಿ ಹಾಗೂ ಡಿಸಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಜಗದೀಶ, ಉಪಾಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಜಿ.ಸಿದ್ದಪ್ಪ, ಸಹ ಕಾರ್ಯದರ್ಶಿ ಈಶ್ವರಪ್ಪ ತುರುಕಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts