More

  ನಾಡಿನಲ್ಲಿ ಸಕಾಲಕ್ಕೆ ಮಳೆ, ಬೆಳೆಯಿಂದ ಸಮೃದ್ಧಿ

  ಕೊಟ್ಟೂರು: ಶೋಭಾಕೃತ ನಾಮ ಸಂವತ್ಸರದಲ್ಲಿ ಅನ್ನದಾತ, ವರ್ತಕರಿಗೆ ಶುಭದಾಯಕವಾಗಿದೆ. ನಾಡಿನಲ್ಲಿ ಸಕಾಲಕ್ಕೆ ಮಳೆ, ಬೆಳೆಯಿಂದ ಸಮೃದ್ಧಿ ನೆಲೆಸಲಿದೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ತಿಳಿಸಿದರು.

  ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಬುಧವಾರ ಯುಗಾದಿ ಪ್ರಯುಕ್ತ ಜಗದ್ಗುರುಗಳು ಪಂಚಾಂಗ ಪಠಣ ಮಾಡಿ, ಆಶೀರ್ವಚನ ನೀಡಿದರು. ಖಗೋಳ ಶಾಸ್ತ್ರದಲ್ಲಿ ನಮ್ಮ ಪೂರ್ವಜರು ಅಪಾರ ಜ್ಞಾನ ಹೊಂದಿದ್ದರು. ಸೂರ್ಯ, ಚಂದ್ರ, ನಕ್ಷತ್ರಗಳ ಸ್ಥಾನ ಬದಲಾವಣೆ ಗುರುತಿಸಿ ಅವುಗಳ ಆಧಾರದಲ್ಲಿ ಭವಿಷ್ಯವನ್ನು ಬರೆದ ಜಗತ್ತಿನ ಮೊದಲಿಗರು ನಮ್ಮ ಪೂರ್ವಜರು ಎಂದರು.

  ಉಜ್ಜಿನಿ ಪೀಠದಲ್ಲಿ ಧರ್ಮಬೋಧನೆಯೊಂದಿಗೆ ಖಗೋಳ ಶಾಸ್ತ್ರದ ಅಧ್ಯಯನಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಪೀಠದಲ್ಲಿ ಇಂದಿಗೂ ರಾಶಿ ಚಕ್ರವಿದೆ. ಇದರ ಆಧಾರ ಮೇಲೆ ಶಾಸ್ತ್ರ, ಪಂಚಾಂಗ ಹಾಗೂ ಖಗೋಳ ಅಧ್ಯಯನ ಮಾಡಲಾಗುತ್ತದೆ. ಇಂತಹದೊಂದು ವಿಶಿಷ್ಟತೆ ಇರುವುದು ನಮ್ಮ ಪೀಠದಲ್ಲಿ ಮಾತ್ರ ಎಂದರು.

  ನಮ್ಮಲ್ಲಿ ಚಾಂದ್ರಮಾನ, ಸೂರ್ಯಮಾನ ಪದ್ಧತಿಗಳಿವೆ. ಉತ್ತರ ಭಾರತದಲ್ಲಿ ಸೂರ್ಯನ ಚಲನೆಯನ್ನು ಅವಲಂಬಿಸಿ ಪಂಚಾಂಗವನ್ನು ಸಿದ್ಧಪಡಿಸಲಾಗುತ್ತದೆ. ದಕ್ಷಿಣ ಭಾರತೀಯರಾದ ನಾವು ಚಂದ್ರನ ಚಲನೆಯನ್ನು ನೋಡಿ ಪಂಚಾಂಗ ರಚಿಸುತ್ತೇವೆ. ಎಲ್ಲವೂ ಶೈವ ಪರಂಪರೆಯಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.

  ಪಂಚಾಂಗಗಳು ಗಣಿತದ ಆಧಾರ ಮೇಲೆ ರಚನೆಗೊಳ್ಳುವುದರಿಂದ ಅದರಲ್ಲಿ ಸೂಚಿಸಿರುವ ವಿಷಯಗಳು ಕರಾರುವಕ್ಕಾಗಿರುತ್ತವೆ. ಆದ್ದರಿಂದ, ಬೇರೆಲ್ಲ ಭವಿಷ್ಯಕ್ಕಿಂತ ಪಂಚಾಂಗಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಆದ್ದರಿಂದ ಪ್ರತಿ ವರ್ಷ ಶ್ರೀಪೀಠದಲ್ಲಿ ಯುಗಾದಿ ಸಂದರ್ಭದಲ್ಲಿ ಪಂಚಾಂಗ ಶ್ರವಣ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು. ಮಠದ ಅರ್ಚಕ ವರ್ಗದವರು, ಪೀಠದ ಅಯಾಗಾರರು, ವಿವಿಧ ಸಮುದಾಯ ಪ್ರಮುಖರು ಪೀಠದ ವ್ಯವಸ್ಥಾಪಕ ವೀರೇಶ ಸೇರಿ ಜಂಗಮವಟುಗಳು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts