More

    ಮಾದಕ ವಸ್ತು ದಂಧೆ ತಡೆಗೆ ಕೋಟತಟ್ಟು ಗ್ರಾಪಂ ಗ್ರಾಮಸಭೆಯಲ್ಲಿ ಒತ್ತಾಯ

    ಕೋಟ: ಕೋಟತಟ್ಟು ವ್ಯಾಪ್ತಿಯಲ್ಲಿ ಡ್ರಗ್ಸ್, ಗಾಂಜಾ ಹಾವಳಿ ಮಿತಿಮೀರಿದ್ದು, ಹಲವಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ, ವಕೀಲ ಪ್ರಮೋದ್ ಹಂದೆ ಆರೋಪಿಸಿದರು.

    ದೂರುದಾರರ ಸಂಪೂರ್ಣ ಮಾಹಿತಿ ಅಕ್ರಮದಲ್ಲಿ ತೊಡಗಿಕೊಂಡಿರುವವರಿಗೆ ಸೋರಿಕೆಯಾಗುತ್ತಿದೆ. ಹೀಗಾಗಿ ಈ ಬಗ್ಗೆ ತಿಳಿಸಲು ಭಯಪಡಬೇಕಿದೆ. ಮಾದಕ ವ್ಯಸನದಿಂದ ನೊಂದಿರುವ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

    ಮಾದಕ ವ್ಯಸನ ಮುಂತಾದ ಅಕ್ರಮ ಚಟುವಟಿಕೆಗಳನ್ನು ಸಮರ್ಥವಾಗಿ ಮಟ್ಟಹಾಕಬೇಕಾದರೆ ಪೊಲೀಸರ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಎಲ್ಲ ಪೊಲೀಸರು ಮಾಹಿತಿ ಸೋರಿಕೆ ಮಾಡುವುದಿಲ್ಲ. ಈ ರೀತಿ ಸೋರಿಕೆ ಮಾಡುವವರ ವಿರುದ್ಧ ದೂರು ನೀಡಿದರೆ ಕ್ರಮಕೈಗೊಳ್ಳುವ ವ್ಯವಸ್ಥೆ ಇದೆ. ಅಕ್ರಮದ ಕುರಿತು ಮುಂದೆ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಎ.ಎಸ್.ಐ. ಮುಕ್ತಾ ಬಾ ತಿಳಿಸಿದರು.

    ಪ್ರವಾಸೋದ್ಯಮ ಅಭಿವೃದ್ಧಿಗೆ ಮನವಿ: ಗ್ರಾಪಂ ವ್ಯಾಪ್ತಿಯ ಪಡುಕರೆ, ಮಣೂರು ಬೀಚ್‌ಗಳನ್ನು ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಪಟ್ಟಿಗೆ ಸೇರಿಸುವಂತೆ ಈ ಹಿಂದೆ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಆದರೆ ಇಲಾಖೆ ಗುರುತಿಸಿರುವ ಜಿಲ್ಲೆಯ 84 ಸ್ಥಳಗಳಲ್ಲಿ ಇವನ್ನು ಗುರುತಿಸಿಲ್ಲ. ಈ ಕುರಿತು ಸೂಕ್ತ ಹೋರಾಟ ಅಗತ್ಯವಿದೆ ಎಂದು ರಂಜಿತ್ ಬಾರಿಕೆರೆ ತಿಳಿಸಿದರು. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ಭರವಸೆ ಕೇಳಿಬಂತು.
    ಗ್ರಾಪಂ ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇಲಾಖೆ ಅಧಿಕಾರಿಗಳು ಇಲಾಖಾ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಮಾಜಿ ಅಧ್ಯಕ್ಷ ರಘು ತಿಂಗಳಾಯ, ಮಾಜಿ ಸದಸ್ಯ ಜಯಪ್ರಕಾಶ್, ವಾಸು ಪೂಜಾರಿ, ಸರಸ್ವತಿ, ಸುಜಾತಾ, ಪಾರ್ವತಿ, ಸ್ಥಳೀಯರಾದ ವಿವೇಕ್ ಸುವರ್ಣ, ಪ್ರಭಾಕರ ಕಾಂಚನ್ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts