More

    ಮೀನುಗಾರ ಕುಟುಂಬಗಳಿಗೆ ಮನೆ ನಿರ್ಮಾಣ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

    ಕುಂದಾಪುರ: ಪ್ರತಿ ಗ್ರಾಮದಲ್ಲೂ 20 ಮೀನುಗಾರ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುವುದು. ಜಪಾನ್ ಮಾದರಿಯಲ್ಲಿ ಕರಾವಳಿ ತೀರ ಅಭಿವೃದ್ಧಿಪಡಿಸಲಾಗುವುದು ಎಂದು ಹಿಂದು ಧಾರ್ಮಿಕ ದತ್ತಿ ಮತ್ತು ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ರಾಜೀವ ಗಾಂಧಿ ವಸತಿ ಯೋಜನೆ ಮೂಲಕ ಮೀನುಗಾರರಿಗೂ ಮನೆ ನಿರ್ಮಿಸಿಕೊಡಲಾಗುತ್ತಿತ್ತು. ಪ್ರಸ್ತುತ ಮೀನುಗಾರಿಕಾ ಇಲಾಖೆಯಿಂದಲೇ ವಸತಿ ಯೋಜನೆ ಕಲ್ಪಿಸಲಾಗುತ್ತಿದೆ ಎಂದರು.

    ಕೇಂದ್ರ ಜಿಎಸ್‌ಟಿ ಹಣ ಬಿಡುಗಡೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ಹಣ ಬಿಡುಗಡೆ ಮಾಡುವುದರಲ್ಲಿ ಹಿಂದೆ ಮುಂದೆ ಆಗಿರಬಹುದು. ಆದರೆ ಮೋದಿ ಸರ್ಕಾರದ ಬಂದ ನಂತರ ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನ ದುಪ್ಪಟ್ಟಾಗಿದೆ. ಜಿಎಸ್‌ಟಿ ಸಹಿತ ಎಲ್ಲ ಅನುದಾನ ಕೇಂದ್ರ ಕೊಡುತ್ತದೆ ಎಂಬ ಆಶಾಭಾವವಿದೆ ಎಂದು ತಿಳಿಸಿದರು.

    ಕರೊನಾ ನಿರ್ವಹಣೆಗೆ ಹಣಕಾಸಿನ ತೊಂದರೆ ಇಲ್ಲ. ಅಭಿವೃದ್ಧಿ ಕೆಲಸಕ್ಕೆ ತೊಂದರೆ ಆಗಬಾರದು ಎಂದು 33 ಸಾವಿರ ಕೋಟಿ ರೂ. ಸಾಲ ಪಡೆಯಲು ಉದ್ದೇಶಿಸಲಾಗಿದೆ. ಅಂದಮಾತ್ರಕ್ಕೆ ರಾಜ್ಯಕ್ಕೆ ಹಣಕಾಸಿನ ಸಮಸ್ಯೆ ಇದೆ ಎನ್ನುವ ಅರ್ಥವಲ್ಲ ಎಂದರು.
    ಕರೊನಾ ಚಿಕಿತ್ಸೆ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ನಿವಾರಣೆ, ಐಸಿ ವಾರ್ಡ್ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ನೋಂದಣಿ ಮಾಡಿಕೊಂಡು ಚಿಕಿತ್ಸೆ ಕೊಡಬೇಕು. ಹೆಚ್ಚುವರಿ ಹಣ ಪಡೆದ ಖಾಸಗಿ ಆಸ್ಪತ್ರೆ ವಿರುದ್ಧ ತನಿಖೆ ನಡೆಸುವುದಲ್ಲದೆ ಆಯುಷ್ಮಾನ್ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಕುಂದಾಪುರ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಬಿಜೆಪಿ ಮುಖಂಡರಾದ ಸತೀಶ್ ಪೂಜಾರಿ, ಗುಣರತ್ನಾ, ರೂಪಾ ಪೈ ಮುಂತಾದವರು ಇದ್ದರು.

    ನಾಯಕರ ನಿರ್ಧಾರಕ್ಕೆ ಬದ್ಧ: ಸಂಪುಟ ವಿಸ್ತರಣೆ ಕುರಿತು ರಾಜ್ಯ ಹಾಗೂ ರಾಷ್ಟ್ರದ ನಾಯಕರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ರಾಜ್ಯದಲ್ಲಿ ಸಮಗ್ರ ಮೀನುಗಾರಿಕಾ ಇಲಾಖೆ ಅಭಿವೃದ್ಧಿ, ಮೀನುಮರಿಗಳ ಸಾಕಣೆ, ಪಂಜರ ಮೀನು ಕೃಷಿ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲು ದೆಹಲಿಗೆ ಹೋಗಿದ್ದೆ, ರಾಜಕೀಯ ಮಾಡಲು ಅಲ್ಲ ಎಂದು ಸಚಿವರು ಸ್ಪಷ್ಪಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts