More

    ಕೊರೊನಾ ಬದುಕು ತಲ್ಲಣ; ರಾಜ್ಯಾದ್ಯಂತ ನೆಲಕಚ್ಚಿದ ವ್ಯಾಪಾರ, ಹೋಟೆಲ್, ಮಾಲ್​ಗೂ ಗ್ರಹಚಾರ 

    ಬೆಂಗಳೂರು: ದಿನಗಳೆದಂತೆ ಕೊರೊನಾ ವೈರಸ್ ದುಷ್ಪರಿಣಾಮ ಹೆಚ್ಚುತ್ತಲೇ ಸಾಗಿದ್ದು, ವ್ಯಾಪಾರವಹಿವಾಟಿಗೂ ಗ್ರಹಣ ಕವಿದಿದೆ. ಕರ್ನಾಟಕದ ಹಲವೆಡೆಯೂ ಹೋಟೆಲ್, ಮಾಲ್, ಚಿತ್ರಮಂದಿರಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದರೆ, ಜನರಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು ಖಾಲಿ ಹೊಡೆಯುತ್ತಿವೆ. ಪಬ್​ಗಳು, ಪ್ರವಾಸಿತಾಣಗಳಲ್ಲೂ ಜನರನ್ನು ಹುಡುಕಬೇಕಾದ ಸ್ಥಿತಿ ಇದೆ.

    ಜನರು ದೇಶ-ವಿದೇಶ ಪ್ರವಾಸ ಮೊಟಕುಗೊಳಿಸಿದ ಪರಿಣಾಮ ಸಾರಿಗೆ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಕರೊನಾ ವೈರಸ್ ಪರಿಣಾಮವಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರತಿನಿತ್ಯ ಕೋಟ್ಯಂತರ ರೂ. ನಷ್ಟವಾಗುತ್ತಿದೆ.

    ಕೈಗಾರಿಕಾ ಕ್ಷೇತ್ರದಲ್ಲಿ ಆಮದು, ರಫ್ತು ಸ್ಥಗಿತಗೊಂಡು ಕಂಗಾಲಾಗಿರುವ ಇದೇ ಸಂದರ್ಭದಲ್ಲಿ ಗ್ರಾಹಕರು ಬಾರದೆ ಹೋಟೆಲ್ ಉದ್ಯಮವೊಂದರಲ್ಲೇ ಪ್ರತಿನಿತ್ಯ 1 ಕೋಟಿ ರೂ. ನಷ್ಟವಾಗುತ್ತಿದೆ. ಸಮೂಹ ಸಾರಿಗೆ ವ್ಯವಸ್ಥೆಯ ಬಸ್ಸು, ರೈಲು, ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಶೇ.5ರಿಂದ 8ರವರೆಗೆ ಕಡಿಮೆಯಾಗಿದೆ.

    ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಶೇ.20 ಹಾಗೂ ಏಕಪರದೆ ಚಿತ್ರಮಂದಿರಗಳಲ್ಲಿ ವೀಕ್ಷಕರ ಸಂಖ್ಯೆ ಶೇ.5 ಇಳಿದಿದೆ. ಚಿಕನ್-ಮಟನ್ ಖರೀದಿಸುವ ಗ್ರಾಹಕರ ಸಂಖ್ಯೆ ಶೇ.50 ಕ್ಷೀಣಿಸಿದೆ. ಜನಸಂದಣಿ ಹೆಚ್ಚಿರುವ ಕಡೆ ಓಡಾಡುವುದರಿಂದ ಕರೊನಾ ಸೋಂಕು ತಗುಲಬಹುದು. ಹೀಗಾಗಿ ಸಾಧ್ಯವಾದಷ್ಟು ಜನದಟ್ಟಣೆ ಪ್ರದೇಶಗಳಿಗೆ ಹೋಗುವು ದನ್ನು ತಪ್ಪಿಸಿ ಎಂಬ ಕೇಂದ್ರ ಸರ್ಕಾರದ ಎಚ್ಚರಿಕೆ ಹಿನ್ನೆಲೆಯಲ್ಲಿ ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.

    ಐಸ್, ಬೇಕರಿ ತಿನಿಸು ಬ್ರೇಕ್: ಮಾರ್ಚ್, ಏಪ್ರಿಲ್​ನಲ್ಲಿ ಬಿಸಿಲ ತಾಪ ಹೆಚ್ಚಾಗಿರುತ್ತದೆ. ಮಕ್ಕಳು ಸಹ ಪರೀಕ್ಷೆ ಮುಗಿಸಿ ಮನೆಯಲ್ಲಿಯೇ ಹೆಚ್ಚಾಗಿ ಕಾಲಕಳೆಯುತ್ತಾರೆ. ಈ ವೇಳೆ ಐಸ್ಕ್ರೀಂ ಮತ್ತು ಬೇಕರಿ ತಿನಿಸು ಹೆಚ್ಚಾಗಿ ಸೇಲ್ ಆಗುತ್ತಿತ್ತು. ಆದರೆ, ಕರೊನಾ ತೇವಾಂಶದಲ್ಲಿ ಹೆಚ್ಚುಕಾಲ ಇರುತ್ತದೆ ಹಾಗೂ ಶೀತ, ಕೆಮ್ಮು, ಗಂಟಲು ಬೇನೆಯಿಂದ ದೂರ ಇರಲು ಐಸ್ ಕ್ರೀಂ ಸೇವನೆ ಮತ್ತು ಬೇಕರಿ ಪದಾರ್ಥ ಒಳಿತಲ್ಲ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಬೇಕರಿ ವ್ಯಾಪಾರ ಸಹ ಕುಸಿದಿದೆ.

    ವಿದೇಶಿಗರ ಹಿಂದೇಟು

    ದೇಶಕ್ಕೆ ಬರುವ್ದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಜೆಗಳ ಮೇಲೆ ನಿಗಾ ವಹಿಸಿರುವ ಪರಿಣಾಮ ಅವರು ಬರಲು ಇಚ್ಛಿಸುತ್ತಿಲ್ಲ. ಸ್ಥಳೀಯರೂ ವಿದೇಶಿಗರಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಪ್ರವಾಸಿ ತಾಣಗಳಲ್ಲಿ ವಿದೇಶಿಗರ ಸಂಖ್ಯೆಯಲ್ಲಿ ತೀರ ಇಳಿಮುಖವಾಗಿದೆ. ಸ್ಥಳೀಯರು ಸಹ ಪ್ರವಾಸಿತಾಣ, ರೆಸಾರ್ಟ್ ಸೇರಿ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವ ಯೋಜನೆಗಳನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

    ಎಲ್ಲೆಲ್ಲಿ ಎಫೆಕ್ಟ್?

    ಬೆಂಗಳೂರಿನ 17 ಸಾವಿರ ಹೋಟೆಲ್​ಗಳಲ್ಲಿ 500ಕ್ಕೂ ಹೆಚ್ಚು ಸ್ಟಾರ್ ಹೋಟೆಲ್​ಗಳಿವೆ. ಗ್ರಾಹಕರಿಲ್ಲದೆ ಶೇ.30 ಬುಕಿಂಗ್ ರದ್ದಾಗಿ, ನಿತ್ಯ 1 ಕೋಟಿ ರೂ. ನಷ್ಟವಾಗುತ್ತಿದೆ.

    ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್, ಪಬ್​ಗಳು, ಮಾರುಕಟ್ಟೆಗಳಿಗೆ ಜನ ಹೆಚ್ಚು ಹೋಗುತ್ತಿಲ್ಲ. ಅಗತ್ಯ ವಸ್ತುಗಳನ್ನು ಆನ್​ಲೈನ್​ನಲ್ಲೇ ಖರೀದಿಸುತ್ತಿದ್ದಾರೆ.

    ರಾಜ್ಯದಲ್ಲಿ ಒಟ್ಟಾರೆ ಕೋಳಿ ಮಾರಾಟ ಪ್ರಮಾಣ ಶೇ.50 ಕುಸಿದಿದೆ. ಬಳ್ಳಾರಿಯ ಕೊಟ್ಟೂರಿನಲ್ಲಿ ದಿನಕ್ಕೆ 500ರಿಂದ 1000 ಮಾರಾಟವಾಗುತ್ತಿದ್ದ ಕೋಳಿಗಳ ಸಂಖ್ಯೆ 15 ದಿನದಿಂದ 100ರಿಂದ 150ಕ್ಕೆ ಇಳಿದಿದೆ. 1 ಕೆ.ಜಿ. ಕೋಳಿ ಬೆಲೆ 25 ರಿಂದ 50 ರೂ.ಗೆ ಕುಸಿದಿದೆ.

    ನಂದಿ ಗಿರಿಧಾಮಕ್ಕೆ ನಿತ್ಯ ಕನಿಷ್ಠ 50 ವಿದೇಶಿಗರು ಬರುತ್ತಿದ್ದರು. ಈಗ 30 ರಿಂದ 20ಕ್ಕೆ ಇಳಿದಿದೆ. ಬೆಳಗಿನ ಹೊತ್ತು ಸ್ವೆಟರ್, ಟೋಪಿ ಹಾಕಿಕೊಂಡು ಓಡಾಡು ತ್ತಿದ್ದರು. ಈಗ ಮಾಸ್ಕ್ ಹಾಕಿಕೊಂಡು ಸುತ್ತಾಡುತ್ತಾರೆ. ಸಮೂಹ ಸಾರಿಗೆ ವ್ಯವಸ್ಥೆಯಾದ ಬಸ್ಸು, ರೈಲು, ಆಟೋ, ಕ್ಯಾಬ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಓಲಾ, ಉಬರ್ ಸೇವೆ ಆನ್​ಲೈನ್ ಬುಕಿಂಗ್ ಕ್ಷೀಣಿಸಿದೆ.

    ಸೋಂಕಿತರು 40

    ಕೇರಳದ ಪತ್ತನಂತಿಟ್ಟ ಜಿಲ್ಲೆಯ ಒಂದೇ ಕುಟುಂಬದ ಐದು ಮಂದಿಗೆ ಕರೊನಾ ವೈರಸ್ ಬಾಧಿಸಿರುವುದು ಖಚಿತವಾಗಿದೆ. ಇದರೊಂದಿಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆ ಅದಂ ತಾಗಿದೆ. ಅರುಣಾಚಲ ಪ್ರದೇಶದಲ್ಲಿ ವಿದೇಶಿಯರ ಪ್ರವೇಶಕ್ಕೆ ನಿರ್ಬಂಧ ವಿಧಿಸ ಲಾಗಿದೆ. ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತುರ್ತು ಸ್ಥಿತಿ ಘೋಷಿಸಲಾಗಿದೆ.

    ನಾಟಿ ಔಷಧಿಗೆ ಮುಗಿಬಿದ್ದ ಜನ

    ಸಾಗರ ತಾಲೂಕು ನರಸೀಪುರದಲ್ಲಿ ವಿವಿಧ ಭಾಗಗಳಿಂದ ನಾಟಿ ಔಷಧ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ನಾಟಿ ಔಷಧ ನೀಡದಂತೆ ನರಸೀಪುರದ ನಾಟಿವೈದ್ಯ ನಾರಾಯಣಮೂರ್ತಿ ಅವರಿಗೆ ಸೂಚನೆ ನೀಡಿದೆ.

    ಅದರಂತೆ ನಾಟಿ ವೈದ್ಯರು ಮನೆ ಮುಂಭಾಗದ ಗೇಟ್ ಬಂದ್ ಮಾಡಿ ‘ಔಷಧ ನೀಡುವುದಿಲ್ಲ’ ಎಂದು ಬೋರ್ಡ್ ಹಾಕಿದ್ದರೂ ರಾತ್ರಿಯಿಂದಲೇ ಜನ ಬಂದಿದ್ದರು. ಬಂದವರಿಗೆ ಗ್ರಾಮದ ಬೇರೆ ವ್ಯಕ್ತಿಗಳು ಔಷಧ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿವಿಧ ರಾಜ್ಯಗಳಿಂದ ಔಷಧಕ್ಕಾಗಿ ಖಾಸಗಿ ವಾಹನಗಳಲ್ಲಿ ಬಂದಿದ್ದ ಜನರಿಗೆ ಊರಿಂದ ಹೊರಹೋಗಲು ಬಿಡದಂತೆ ಅವರ ಬಳಿ ಇದ್ದ ಔಷಧ ಪೊಟ್ಟಣಗಳನ್ನು ಕಸಿದುಕೊಂಡು ಗ್ರಾಮಕ್ಕೆ ಬೇರೆ ಊರಿನ ಯಾವುದೇ ವ್ಯಕ್ತಿಗಳು ಬರದಂತೆ ಆಗ್ರಹಿಸಿದ್ದಾರೆ.

    ನಂದಿ ಗಿರಿಧಾಮಕ್ಕೆ ಪ್ರತಿನಿತ್ಯ 50 ವಿದೇಶಿಗರು ಬರುತ್ತಿದ್ದರು. ಕರೊನಾದಿಂದ 30 ರಿಂದ 20ಕ್ಕೆ ಇಳಿದಿದೆ. ಸ್ಥಳೀಯ ಪ್ರವಾಸಿಗರ ಸಂಖ್ಯೆಯಲ್ಲಿಯೂ ವ್ಯತ್ಯಾಸವಾಗಿದೆ.

    |ಎನ್. ಗೋಪಾಲ್- ನಂದಿ ಗಿರಿಧಾಮ ವಿಶೇಷಾಧಿಕಾರಿ

    ಪೌಲ್ಟ್ರಿ ಫಾಮ್ರ್ ಇಟ್ಟು ಇಪ್ಪತ್ತು ವರ್ಷಗಳಾಗಿವೆ. ಈ ರೀತಿಯ ನಷ್ಟವನ್ನು ನಾವೆಂದೂ ಅನುಭವಿಸಿರಲಿಲ್ಲ. ಕೋಳಿ, ಮೊಟ್ಟೆ ತಿನ್ನುವುದರಿಂದ ಕರೊನಾ ಬರುತ್ತೆ ಎಂದು ವೈದ್ಯರು, ವಿಜ್ಞಾನಿಗಳು ಎಲ್ಲಿಯೂ ಹೇಳಿಲ್ಲ. ಸಾಮಾಜಿಕ ಜಾಲತಾಣದಿಂದಾಗಿ ಈ ಸಮಸ್ಯೆ ಉಂಟಾಗಿದೆ.

    | ವಿಜಯಲಕ್ಷ್ಮಿ ಚೌಧರಿ ಮಾಲೀಕರು,
    ಸಿಂಧು ಚೇತನ ಮೊಟ್ಟೆ ಪೌಲ್ಟ್ರಿ ಫಾಮ್ರ್, ಕೊಟ್ಟೂರು 

    https://www.vijayavani.net/corona-virus-private-school-children-training/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts