More

    ತುಳುನಾಡಿನಲ್ಲೀಗ ಕೊರಗಜ್ಜನದೇ ಸುದ್ದಿ

    ಸುಳ್ಯ: ತಾಲೂಕಿನ ಸಂಪಾಜೆ ಗ್ರಾಮದ ದೊಡ್ಡಡ್ಕ ರಾಜರಾಂಪುರ ಆದಿ ಮುಗೇರ್ಕಳ ದೈವಸ್ಥಾನದ ಕೊರಗಜ್ಜನ ಸನ್ನಿಧಿಯಲ್ಲಿ ವಿಸ್ಮಯ ನಡೆದಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

    ಮಾರ್ಚ್ 21ರಂದು ದೈವಸ್ಥಾನದಲ್ಲಿ 40ನೇ ವರ್ಷದ ವಾರ್ಷಿಕ ಕೋಲ ನಡೆದಿದೆ. ಈ ವೇಳೆ ಒಂದು ವಾರ್ಷಿಕವಾಗಿ ನೀಡುವ ಕೋಲದ ಜತೆಗೆ ಭಕ್ತರು ಹರಕೆಯ ರೂಪದಲ್ಲಿ ನೀಡಿದ 11 ಕೋಲ ಸೇರಿ ಒಟ್ಟು 12 ಕೋಲ ಕೊರಗಜ್ಜನಿಗೆ ನೀಡಲಾಗಿತ್ತು. ಅದರಂತೆ ಅಗೇಲು ತಯಾರಿಸುವಾಗಲೂ 12 ಅಗೇಲು ಬಡಿಸಲಾಗಿತ್ತು. ಪ್ರತೀ ದೈವಕ್ಕೆ ಒಂದರಂತೆ 12 ಮುಟ್ಟಾಳೆ (ಮಡಪ್ಪಾಳೆ/ಗೋಂಪಾರು)ಗಳನ್ನು ಸಿದ್ಧಪಡಿಸಲಾಗಿತ್ತು.

    ಅಗೇಲು ಸ್ವೀಕಾರವಾಗಿ ನರ್ತನ ಸೇವೆ ಪ್ರಾರಂಭವಾದಾಗ ಕೆಲವು ಭಕ್ತರಿಗೆ ಒಟ್ಟು 13 ಕೊರಗಜ್ಜ ದೈವಗಳು ಕಂಡಿವೆ. ಅವುಗಳಲ್ಲಿ 1 ಕೊರಗಜ್ಜನಿಗೆ ಮುಟ್ಟಾಳೆ ಇರಲಿಲ್ಲ. ಆ ದೈವ ಕೇಳಿದಾಗ ಆಡಳಿತ ಮಂಡಳಿಯವರು, ಆಗಲೇ ಕೊಟ್ಟಿರಬೇಕಲ್ಲ ಎಂದು ಇದರ ವ್ಯವಸ್ಥೆ ನೋಡಿಕೊಳ್ಳುವವರನ್ನು ಪ್ರಶ್ನಿಸಿದ್ದರು. ಬಳಿಕ ಮುಟ್ಟಾಳೆ ತಯಾರಿಸಿ 13ನೇ ದೈವಕ್ಕೆ ನೀಡಲಾಗಿತ್ತು. ಬಳಿಕ ನರ್ತನ ಮಾಡುತ್ತಿದ್ದ ಕೊರಗಜ್ಜ ದೈವ ಕೆಲಹೊತ್ತಿನ ನಂತರ ಮಾಯವಾಗಿದೆ. ಎಲ್ಲಿ ಹೋಗಿದೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಭಕ್ತರು ಹೇಳುತ್ತಾರೆ.

    ಭಕ್ತರು ದೈವಸ್ಥಾನದ ಆಡಳಿತ ವರ್ಗದವರಲ್ಲಿ ಕೇಳಿದಾಗ ಹನ್ನೆರಡೇ ದೈವಗಳಿಗೆ ಕೋಲ ನೀಡಿದ್ದು ಎಂದಿದ್ದಾರೆ. ಆಡಳಿತ ಮಂಡಳಿಯವರು ದೈವ ಕಟ್ಟುವವರಲ್ಲಿ ಕೇಳಿದಾಗಲೂ ಅವರು 12 ಜನ ಮಾತ್ರ ದೈವ ಕಟ್ಟಿದ್ದೆಂದು ಸ್ಪಷ್ಟಪಡಿಸಿದ್ದಾರೆ. ಕೇರಳದಿಂದ ದೈವ ನರ್ತನ ಸೇವೆಗಾಗಿ 15 ಮಂದಿ ಬಂದಿದ್ದು, 14 ಮಂದಿಯನ್ನು ಇಲ್ಲಿ ಬಿಟ್ಟು ಓರ್ವ ವಾಹನದೊಂದಿಗೆ ವಾಪಸ್ ಹೋಗಿದ್ದಾನೆ. 14 ಮಂದಿಯಲ್ಲಿ ಇಬ್ಬರು ಸಹಾಯಕರಿದ್ದು, 12 ಮಂದಿ ದೈವ ನರ್ತಕರಿದ್ದರು. ಆದರೆ ನರ್ತನ ವೇಳೆ 13ನೇ ದೈವ ಕಂಡಿರುವುದು ಹೇಗೆ ಎನ್ನುವುದು ಎಲ್ಲರ ಪ್ರಶ್ನೆ. ಈ ಸುದ್ದಿ ಪ್ರಚಾರವಾದಾಗ ನಿಜ ವಿಷಯ ಏನೆಂದು ತಿಳಿಯಲು ತಂತ್ರಿಗಳಲ್ಲಿ ಕೇಳಿದಾಗ, ‘ಅದು ಕೊರಗಜ್ಜನ ಪವಾಡ’ ಎಂದಿದ್ದಾರೆಂದು ದೈವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

    ವಿಡಿಯೋ ಸಾಕ್ಷೃ: ಕೋಲದ ದಿನ ಸುಮಾರು 2 ಸಾವಿರ ಭಕ್ತರು ಸೇರಿದ್ದರು. ಅವರಲ್ಲಿ ಶೇ.80ರಷ್ಟು ಮಂದಿಗೆ 13 ಮಂದಿ ಕೊರಗಜ್ಜ ಕಾಣಿಸಿದ್ದಾರೆ. ಶೇ.20ರಷ್ಟು ಮಂದಿ ತಮಗೆ 12 ಮಂದಿ ಮಾತ್ರ ಕಾಣಿಸಿದ್ದಾರೆ ಎಂದು ಹೇಳುತ್ತಾರೆ. ಕೋಲದ ವಿಡಿಯೋ ಗಮನಿಸಿದಾಗ ಅದರಲ್ಲಿ 13 ಮಂದಿ ಇರುವುದು ಕಾಣಿಸುತ್ತಿದೆ.

    ವರ್ಷಾವಧಿ ಕೋಲದ ಜತೆಗೆ 11 ಹರಕೆಯ ಕೋಲ ಇದ್ದುದರಿಂದ ಕೊರಗಜ್ಜನಿಗೆ ಒಟ್ಟು 12 ಕೋಲ ಕೊಡಲಾಗಿತ್ತು. ಹಲವು ಭಕ್ತರಿಗೆ ದೈವ ನರ್ತನದ ವೇಳೆ ಒಟ್ಟು 13 ದೈವಗಳು ಕಂಡಿವೆ. ವಿಡಿಯೋದಲ್ಲೂ ಒಟ್ಟು 13 ದೈವಗಳು ನರ್ತಿಸುವಂತೆ ಕಂಡಿದೆ. ಇದು ಕೊರಗಜ್ಜನ ಪವಾಡ ಎಂದೇ ನಮ್ಮ ನಂಬಿಕೆ.
     ಚಂದ್ರಶೇಖರ ದೊಡ್ಡಡ್ಕ, ಆಡಳಿತ ಮೊಕ್ತೇಸರ, ಆದಿ ಮುಗೇರ್ಕಳ ದೈವಸ್ಥಾನ, ದೊಡ್ಡಡ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts