More

    ಸುಜ್ಲಾನ್ ಪುನರ್ವಸತಿ ಕಾಲನಿ ಸಮೀಪದ ಕೊರಗ ಕುಟುಂಬಗಳ ಅತಂತ್ರ ಜೀವನಕ್ಕೆ ಸಿಕ್ತು ಮುಕ್ತಿ

    ಪಡುಬಿದ್ರಿ: ಇಲ್ಲಿನ ಸುಜ್ಲಾನ್ ಪುನರ್ವಸತಿ ಕಾಲನಿ ಸಮೀಪ ಕಳೆದ 6 ವರ್ಷಗಳಿಂದ ಅತಂತ್ರರಾಗಿ ಜೀವನ ಸಾಗಿಸುತ್ತಿದ್ದ ಕೊರಗ ಕುಟುಂಬಗಳಿಗೆ ಪಾದೆಬೆಟ್ಟು ಗ್ರಾಮದ ಜಮೀನಿನಲ್ಲಿ ನಿರ್ಮಿಸಿರುವ 18 ಮನೆಗಳ ಗೃಹಪ್ರವೇಶದ ಧಾರ್ಮಿಕ ವಿಧಿ ವಿಧಾನಗಳು ಫೆ.4ರಂದು ಬೆಳಗ್ಗೆ ನಡೆಯಲಿದೆ. ಪಾದೆಬೆಟ್ಟು ಶಾಲೆ ಬಳಿಯಿರುವ ಡಿಸಿ ಮನ್ನಾ ಜಮೀನಿನಲ್ಲಿ ಸುಮಾರು 95 ಸೆಂಟ್ಸ್ ಜಾಗ ಗೊತ್ತುಪಡಿಸಿ, 19 ಕೊರಗ ಕುಟುಂಬಗಳಿಗೆ ಮಂಜೂರಾತಿ ಮಾಡಿ ಹಕ್ಕುಪತ್ರ ನೀಡಲಾಗಿದೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ತಲಾ 2.10 ಲಕ್ಷ ರೂ. ಹಾಗೂ ಸಿಂಡಿಕೇಟ್ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ತಲಾ 10 ಸಾವಿರ ರೂ. ಮೊತ್ತ ಸೇರಿಸಿ 18 ಮನೆ ನಿರ್ಮಿಸಲು ಚಾಲನೆ ನೀಡಲಾಗಿತ್ತು. ಈಗ ಮನೆಗಳ ಕೆಲಸ ಪೂರ್ಣಗೊಂಡು ಗೃಹಪ್ರವೇಶಕ್ಕೆ ಸಿದ್ಧತೆಗಳು ನಡೆದಿವೆ.

    ಸಿದ್ಧಗೊಂಡ 18 ಮನೆಗಳು: ಶೀಲಾ, ಕೂಕ್ರ, ಗೋಪಾಲ, ಮೆನ್ಪ, ಹಣ್ಣು, ವಿಜಯ, ಸೀಗೆ, ಪುದ್ದಾ, ಸುನೀತಾ, ಮಲ್ಲಿಕಾ, ವಸಂತಿ, ಗೀತಾ, ಶಶಿಕಲಾ, ಸುರೇಶ್, ತುಕಾರಾಮ, ಮನೋಹರ, ಸುಮತಿ, ದಯಾನಂದ ಎಂಬುವರ ಮನೆಗಳು ಸಿದ್ಧವಾಗಿವೆ. ಈ ಕುಟುಂಬಗಳ ಸದಸ್ಯರು ಮನೆ ನಿರ್ಮಾಣ ಕಾಮಗಾರಿಯಲ್ಲಿ ತಾವೇ ಕೆಲಸ ನಿರ್ವಹಿಸಿದ್ದರು. ಜಯಂತಿ ಎಂಬುವರ ಕುಟುಂಬದ ಮನೆ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಿದ್ದರೂ, ಅವರು ನಿರ್ಮಾಣ ಕಾರ್ಯದಲ್ಲಿ ಉತ್ಸುಕತೆ ತೋರದೆ ಜಾಗ ಖಾಲಿ ಉಳಿದಿದೆ. ತಲಾ 2.20 ಲಕ್ಷ ರೂ. ವೆಚ್ಚದಲ್ಲಿ ಹಾಲ್, ಬೆಡ್‌ರೂಂ, ಅಡುಗೆ ಕೋಣೆ, ಡೈನಿಂಗ್ ಹಾಲ್, ಬಾತ್‌ರೂಂ ಹಾಗೂ ಶೌಚಗೃಹ ಸಹಿತ ಸುಣ್ಣ ಬಣ್ಣ ಬಳಿದು ಮನೆಗಳು ಸಿದ್ಧಗೊಂಡಿವೆ. ಕೊಳವೆಬಾವಿ ಕೊರೆದು ಪಂಪ್ ಅಳವಡಿಸಿ ಓವರ್‌ಹೆಡ್ ಟ್ಯಾಂಕ್ ಮೂಲಕ ಎಲ್ಲ ಮನೆಗಳಿಗೂ ನೀರಿನ ಸಂಪರ್ಕ ಕಲ್ಪಿಸುವ ಕೆಲಸ ಸಾಗುತ್ತಿದೆ. ಶಾಸಕ ಲಾಲಾಜಿ ಆರ್.ಮೆಂಡನ್ ಪ್ರಸ್ತಾವನೆಯಲ್ಲಿ 7.32 ಲಕ್ಷ ರೂ. ವೆಚ್ಚದಲ್ಲಿ ಕಾಲನಿಯೊಳಗೆ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗಿದೆ. ಮನೆಗಳ ಕಿಟಕಿ ಬಾಗಿಲು ಇನ್ನಷ್ಟೇ ನಿರ್ಮಾಣವಾಗಬೇಕಿದೆ. ಈ ಎಲ್ಲ ಕುಟುಂಬಗಳಿಗೆ ಯಾರೊಬ್ಬರಿಗೂ ಅನಿಲ ಸಂಪರ್ಕವಿಲ್ಲವಾಗಿದ್ದು, ಸೌದೆಯನ್ನೇ ಅವಲಂಬಿಸುವಂತಾಗಿದೆ. ಅದಕ್ಕೂ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ.

    6 ವರ್ಷಗಳ ಗುಡಿಸಲು ವಾಸ: ಸುಜ್ಲಾನ್ ಯೋಜನಾ ಪ್ರದೇಶದ ಜಮೀನಿನಲ್ಲಿ ಗುಡಿಸಲು ನಿರ್ಮಿಸಿ ಪುಟ್ಟ ಮಕ್ಕಳೊಂದಿಗೆ 6 ವರ್ಷಗಳಲ್ಲಿ ಜೀವನ ಸಾಗಿಸುತ್ತಿದ್ದ 19 ಕೊರಗ ಕುಟುಂಬಗಳ ದುಸ್ಥಿತಿ ಕಂಡ ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪಾದೆಬೆಟ್ಟಿನಲ್ಲಿ ಜಮೀನು ಮಂಜೂರು ಮಾಡಿದ್ದರು. ಸದ್ಯ ಮನೆ ನಿರ್ಮಾಣದ ಮೂಲಕ ಅದಕ್ಕೆ ಮುಕ್ತಿ ಲಭಿಸಿದೆ. ಮನೆ ನಿರ್ಮಾಣ ಕಾಮಗಾರಿ ಬಗ್ಗೆ ಫಲಾನುಭವಿಗಳೂ ಸಂತಸ ವ್ಯಕ್ತಪಡಿಸಿದ್ದಾರೆ.

    ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮನೆ ನಿರ್ಮಿಸಲಾಗಿದೆ. ಹೆಚ್ಚಿನ ಕೆಲಸ ಪೂರ್ಣಗೊಂಡಿದ್ದು, ಪ್ರವೇಶ ಭಾಗದಲ್ಲೂ ರಸ್ತೆ ಕಾಂಕ್ರೀಟ್‌ಗೆ ಅನುದಾನ ಬಿಡುಗಡೆಯಾಗಿದೆ. ಮನೆ ಮನೆಗೆ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ಫೆ.7ರೊಳಗೆ ಪೂರ್ಣಗೊಳಿಸಲಾಗುವುದು. ಸರ್ಕಾರದ ಉಜ್ವಲಾ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಲಾಗುವುದು. ಈ ಮನೆಗಳವರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಲ್ಲಿಗೆ ಕೃಷಿ ಹಾಗೂ ಹಣ್ಣಿನ ಗಿಡ ನೆಡುವ ಕಾರ್ಯ ತೋಟಗಾರಿಕಾ ಇಲಾಖೆ ಮೂಲಕ ಮಳೆಗಾಲದಲ್ಲಿ ಆರಂಭಿಸಲಾಗುವುದು.
    ವಿಶ್ವನಾಥ್, ತನಿಖಾ ಸಹಾಯಕ, ಐಟಿಡಿಪಿ ಉಡುಪಿ

    ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ, ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು, ಜಿಲ್ಲಾಡಳಿತ ಉಡುಪಿ, ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ ಬೆಂಗಳೂರು, ಕಾರ್ಮಿಕ ಇಲಾಖೆ ಹಾಗೂ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಫಲಾನುಭವಿ ಕುಟುಂಬದ 25 ಸದಸ್ಯರು ಸೇರಿದಂತೆ 60 ಮಂದಿ ಮನೆ ನಿರ್ಮಾಣ ಕಾರ್ಯದ ತರಬೇತಿ ಪಡೆದಿದ್ದಾರೆ. ತರಬೇತಿ ಪಡೆದ ಈ 60 ಮಂದಿ ನಿರ್ಮಾಣ ಕಾರ್ಯದಲ್ಲಿ ಭಾಗಿಗಳಾಗಿದ್ದರು.
    ಅರುಣ್ ಕುಮಾರ್, ಯೋಜನಾ ನಿರ್ದೇಶಕ ನಿರ್ಮಿತಿ ಕೇಂದ್ರ ಉಡುಪಿ

     

    ಹೇಮನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts