More

    80 ವರ್ಷಗಳಿಂದ ವಾಸವಿದ್ದರೂ ಹಕ್ಕುಪತ್ರವಿಲ್ಲ

    ರವೀಂದ್ರ ಕೋಟ
    ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರಾಡಿಜಡ್ಡು ಕೊರಗ ಕುಟುಂಬದ ಸಮಸ್ಯೆ ಕೇಳುವವರಿಲ್ಲ. ಇಲ್ಲಿನ ಜನ ಹರಕು ಮುರುಕು ಮನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಮೂರು ಕುಟುಂಬಗಳು ವಾಸ್ತವ್ಯ ಹೊಂದಿವೆ. ಅದರಲ್ಲಿ ಜಟ್ಟ ಕೊರಗ, ಪುಟ್ಟಿ, ವಿಶಾಲ ವಾಸ್ತವ್ಯವಿದ್ದು, ಪಂಚಾಯಿತಿ ನಳ್ಳಿ ನೀರಿನ ವ್ಯವಸ್ಥೆ ಇದ್ದು ಮಾಸಿಕ 100 ರೂ. ಕಟ್ಟಬೇಕು. ಇವರ ಆರ್ಥಿಕ ಸ್ಥಿತಿ ತುಂಬ ಹಿಂದುಳಿದಿದೆ. ಬುಟ್ಟಿ ನೇಯುವ ಕಸಬು ಮಾಡಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳ ಬಗ್ಗೆ ಆಲಿಸುವರು ಯಾರೂ ಇಲ್ಲ ಎಂಬ ಗೋಳು ಇವರದ್ದು.
    ಈ ಕುಟುಂಬ 80 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ನೀರಾಡಿಜಡ್ಡು ಪರಿಸರದ 30 ಸೆಂಟ್ಸ್ ಜಾಗದಲ್ಲಿ ವಾಸಿಸುತ್ತಿದ್ದಾರೆ. ಆದರೂ ಹಕ್ಕುಪತ್ರಕ್ಕಾಗಿ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಇಲ್ಲಿನ ಓರ್ವ ವಿದ್ಯಾರ್ಥಿ ಪ್ರಥಮದರ್ಜೆ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಅಲೆದಾಟ ಮಾಡಿಯೂ ಕೆಲಸ ಸಿಕ್ಕಿಲ್ಲ. ಅಧಿಕಾರಿಗಳು ಕೊರಗ ಕುಟುಂಬಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಉತ್ತಮ ಜೀವನ ಸಾಗಿಸಲು ನೆರವು ನೀಡಬೇಕು ಎನ್ನುತ್ತಾರೆ ಇವರು.

    80 ವರ್ಷಗಳಿಂದ ನಿರಾಡಿಜಡ್ಡು ಪರಿಸರದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಕುಂದುಕೊರತೆಗಳ ಬಗ್ಗೆ ಆಲಿಸುವರೇ ಇಲ್ಲದಾಗಿದೆ. ನನಗೆ ಕಣ್ಣಿನ ದೋಷವಿದೆ. ಆದರೂ ಬುಟ್ಟಿ ನೇಯ್ಗೆ ಕಾರ್ಯದಲ್ಲಿ ತೊಡಗಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನಮಗೆ ಸರ್ಕಾರ, ಇಲಾಖೆ ಅಗತ್ಯ ಮೂಲಸೌಕರ್ಯ ಒದಗಿಸಬೇಕಿದೆ.
    ಪುಟ್ಟಿ ಗಿರಿಜನ, ಮೂಲ ನಿವಾಸಿ

    ನೀರಾಡಿಜಡ್ಡುವಿನ ಮೂರು ಕುಟುಂಬಗಳಲ್ಲದೆ ಸಮೀಪದ ಪ್ರೇಮಾ ಗಿರಿಜನ ಎನ್ನುವವರ ಕುಟುಂಬದ ಸ್ಥಳಕ್ಕೂ ನ್ಯಾಯ ದೊರಕಿಲ್ಲ. ಪಂಚಾಯಿತಿ ಪ್ರತಿನಿಧಿಗಳು ಸಾಕಷ್ಟು ಹೋರಾಟ ಮಾಡಿದ್ದೇವೆ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕಾರ್ಯವಾಗಿರುವುದರಿಂದ ಆದಷ್ಟು ಬೇಗ ಆ ಕುಟುಂಬಗಳಿಗೆ ನ್ಯಾಯ ದೊರಕಿಸಬೇಕೆಂಬುದು ನಮ್ಮ ಆಗ್ರಹ.
    ಚಂದ್ರಮೋಹನ್, ಪಾಂಡೇಶ್ವರ ಗ್ರಾಪಂ ಸದಸ್ಯ

    ನಿರಾಡಿಜಡ್ಡು ಕೊರಗ ಕುಟುಂಬ ವಾಸಿಸುವ ಸ್ಥಳ ಪರಿಶೀಲಿಸಬೇಕಿದೆ. ಯಾರ ಸ್ಥಳದಲ್ಲಿ ವಾಸ್ತವ್ಯ ಹೊಂದಿದ್ದಾರೆ ಎಂಬುದನ್ನು ಖಾತ್ರಿ ಮಾಡಬೇಕು. ಅಲ್ಲದೆ ಕೋಟದಲ್ಲಿರುವ ಕೊರಗ ಕುಟುಂಬಗಳ ಬಗ್ಗೆಯೂ ಇಲಾಖೆ ಮಾತುಕತೆ ನಡೆಸಿದೆ. ಸಾಸ್ತಾನದ ನೀರಾಡಿಜಡ್ಡುವಿನ ಜಾಗದ ಸಮಸ್ಯೆ ಕುರಿತಂತೆ ಪೂರ್ವಜರ ಹೆಸರಿನಲ್ಲಿದ್ದರೆ ಮನೆ ಕಟ್ಟಲು ಸಮಸ್ಯೆಯಿಲ್ಲ. ಇಲ್ಲವಾದರೆ ಆ ಸ್ಥಳದ ಮೂಲ ಯಜಮಾನ ಒಪ್ಪಿಗೆ ಸೂಚಿಸಿದರೆ ಹಕ್ಕುಪತ್ರ ನೀಡಬಹುದು ಅಥವಾ ಬೇರೆ ಕಡೆ ಹೊಗುವ ಇಚ್ಛೆ ವ್ಯಕ್ತಪಡಿಸಿದರೆ ನಿವೇಶನ ನೀಡಲಿದ್ದೇವೆ. ಕೂಡಲೇ ಆ ಸ್ಥಳಕ್ಕೆ ನಮ್ಮ ಇಲಾಖೆ ತಂಡ ಭೇಟಿ ನೀಡಲಿದೆ.
    ವಿಶ್ವನಾಥ, ಕಚೇರಿ ಅಧೀಕ್ಷಕ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts