More

    ಕುಕನೂರು ಬಳಿ ಮಿನಿಬಸ್-ಬೈಕ್ ಡಿಕ್ಕಿ; ನಾಲ್ವರ ಸಾವು

    ಬೈಕ್ ಸವಾರ ಕಾಪಾಡಲು ಹೋಗಿ ನಿಯಂತ್ರಣ ತಪ್ಪಿದ ಮಿನಿಬಸ್ | ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನಲ್ಲಿ ದುರ್ಘಟನೆ

    ಕೊಪ್ಪಳ: ಬೈಕ್ ಸವಾರನನ್ನು ಕಾಪಾಡಲು ಹೋಗಿ ನಿಯಂತ್ರಣ ಕಳೆದುಕೊಂಡ ಮಿನಿಬಸ್ ಮರಕ್ಕೆ ಡಿಕ್ಕಿಯಾಗಿದ್ದರಿಂದ ಸ್ಥಳದಲ್ಲೇ ನಾಲ್ವರು ಶುಕ್ರವಾರ ಸಾವಿಗೀಡಾಗಿದ್ದಾರೆ. ಹೋಳಿಗೆ ಊಟ (ನಿಶ್ಚಿತಾರ್ಥ) ಸವಿಯಲು ಹೋಗಬೇಕೆಂದಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಅಗಸನಕೊಪ್ಪದ ಮೂವರು ಮಸಣ ಸೇರಿದ್ದಾರೆ. ಇತ್ತ ಬೈಕ್ ಸವಾರನೂ ಉಳಿಯಲಿಲ್ಲ. ಜಿಲ್ಲೆಯ ಕುಕನೂರು ತಾಲೂಕು ನಿಟ್ಟಾಲಿ ಕ್ರಾಸ್ ಬಳಿ ಈ ಅಪಘಾತ ನಡೆದಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ.

    ಬೈಕ್ ಸವಾರ ಬೆಣಕಲ್ ಗ್ರಾಮದ ಸಂತೋಷ ಉಂಕಿ (22), ಮಿನಿಬಸ್‌ನಲ್ಲಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಅಗಸನಕೊಪ್ಪ ಗ್ರಾಮದ ರಂಗಪ್ಪ ನಾಗಣ್ಣನವರ್(80), ಭೀಮವ್ವ ಗೋಡಿ (70) ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಶಿವಾನಂದಪ್ಪ (60) ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಸಂಗಪ್ಪ, ಕಳಸವ್ವ, ಬಸಪ್ಪ, ಶಾಂತವ್ವ ಹಾಗೂ ಅನ್ನಪೂರ್ಣಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬಾದಾಮಿಯಿಂದ ಕೊಪ್ಪಳಕ್ಕೆ ಮಿನಿಬಸ್‌ನಲ್ಲಿ ಬರುವಾಗ ಕುಕನೂರು ತಾಲೂಕಿನ ನಿಟ್ಟಾಲಿ ಕ್ರಾಸ್ ಬಳಿ ಯುವಕನೊಬ್ಬ ಅಡ್ಡ ಬಂದಿದ್ದಾನೆ. ಯುವಕನನ್ನು ಅಪಾಯದಿಂದ ಪಾರು ಮಾಡುವ ಭರದಲ್ಲಿ ಬಸ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಬಸ್ ನುಗ್ಗಿಸಿದ್ದು, ಮರಕ್ಕೆ ವಾಹನ ಡಿಕ್ಕಿ ಹೊಡೆದಿದೆ. ಮಿನಿಬಸ್‌ನಲ್ಲಿ ಸುಮಾರು 25 ಜನರು ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಬಸ್ ಮಾಲೀಕನೇ ಚಾಲಕನಾಗಿದ್ದು, ಪರಾರಿಯಾಗಿದ್ದಾನೆ.

    ಅಗಸನಕೊಪ್ಪ ಗ್ರಾಮದ ವಿನೋದಾ ಎಂಬ ಯುವತಿ ಹಾಗೂ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಪುಟ್ಟರಾಜಗೆ ಮದುವೆ ನಿಶ್ಚಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಯುವಕನ ಮನೆಗೆ ನಿಶ್ಚಿತಾರ್ಥ (ಹೋಳಿಗೆ ಊಟ) ಕಾರ್ಯಕ್ರಮಕ್ಕೆ ಯುವತಿ ಕುಟುಂಬದವರು ಹಾಗೂ ಸಂಬಂಧಿಗಳು ಹೋಗುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts