More

    ವೋಟರ್ ಐಡಿಗೆ ಆಧಾರ್ ಜೋಡಣೆಗೆ ಬೂತ್‌ಮಟ್ಟದ ಏಜೆಂಟರಿಂದ ಅರಿವು ಮೂಡಿಸಿ

    ಕೊಪ್ಪಳ: ವೋಟರ್ ಐಡಿಗೆ ಆಧಾರ್ ಜೋಡಿಸುವ ಕುರಿತು ಬೂತ್ ಮಟ್ಟದ ಏಜೆಂಟ್‌ಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಎಡಿಸಿ ಸಾವಿತ್ರಿ ಬಿ.ಕಡಿ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತಗಟ್ಟೆಗಳ ಮರು ವಿಂಗಡಣೆ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯ ಡೇಟಾ ಸಂಗ್ರಹ ಕುರಿತು ರಾಜಕೀಯ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಸೋಮವಾರ ಮಾತನಾಡಿದರು. ಚುನಾವಣಾ ಆಯೋಗದ ನಿರ್ದೇಶನದನ್ವಯ ಮತದಾರರು ಮತದಾರ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಿಸಬೇಕು. ಜಿಲ್ಲೆಯ ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟರ ಮೂಲಕ ಸಾರ್ವಜನಿರಕರಿಗೆ ಜಾಗೃತಿ ಮೂಡಿಸಬೇಕು.

    ಮತಗಟ್ಟೆಗಳ ಮರು ವಿಂಗಡಣೆ ಕೈಗೊಳ್ಳಲಾಗುತ್ತಿದ್ದು, ಭೌತಿಕ ಪರಿಶೀಲನೆ ನಡೆಸಲಾಗುತ್ತಿದೆ. 1500ಕ್ಕಿಂತ ಹೆಚ್ಚಿನ ಮತದಾರಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮತಗಟ್ಟೆ ಸ್ಥಾಪಿಸಬೇಕು. 300ಕ್ಕಿಂತ ಹೆಚ್ಚು ಮತದಾರರಿದ್ದು, ಸದ್ಯ ಇರುವ ಮತಗಟ್ಟೆಗಳಿಗೆ 2 ಕಿಮೀಗಿಂತ ಹೆಚ್ಚು ಪ್ರಯಾಣಿಸಬೇಕಾದಲ್ಲಿ ಹೊಸ ಮತಗಟ್ಟೆ ಸ್ಥಾಪಿಸಲಾಗುವುದು. ಮತದಾನ ಕೇಂದ್ರಗಳು ಶಿಥಿಲಗೊಂಡಿದ್ದಲ್ಲಿ ಅಥವಾ ತೆರವುಗೊಳಿಸಿದ್ದಲ್ಲಿ ಸಮೀಪದಲ್ಲಿರುವ ಸುಸಜ್ಜಿತ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಯಾವುದೇ ಮತಗಟ್ಟೆಗಳ ಬದಲಾವಣೆ ಅವಶ್ಯವಿದ್ದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲಾ ಚುನಾವಣಾ ಶಾಖೆಗೆ ಮಾಹಿತಿ ನೀಡಬೇಕು ಎಂದರು.

    ಜಿಲ್ಲೆಯ ಕೆಲವೆಡೆ ಗುಡ್ಡದಲ್ಲಿರುವ ಶಾಲೆಗಳಲ್ಲಿ ಮತಗಟ್ಟೆಗಳಿದ್ದು, ಹಿರಿಯರು, ಅಂಗವಿಕಲರಿಗೆ ತೊಂದರೆಯಾಗುತ್ತಿದೆ. ಇಂತಹ ಮತಗಟ್ಟೆಗಳನ್ನು ಸ್ಥಳಾಂತರಿಸುವಂತೆ ರಾಜಕೀಯ ಪಕ್ಷಗಳ ಮುಖಂಡರು ಸಲಹೆ ನೀಡಿದರು. ಮುಖಂಡರಾದ ಮಂಜುನಾಥ ಸೊರಟೂರ, ರಮೇಶ ನಾಡಿಗೇರ, ರಾಜು ಬಾಕಳೆ, ಕೃಷ್ಣ ಇಟ್ಟಂಗಿ, ಮೆಹಬೂಬ್ ಖಾನ್ ಇತರರಿದ್ದರು.

    ಮತಗಟ್ಟೆಗಳ ವಿವರ
    ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 1,14,050 ಪುರುಷ, 1,12,002 ಮಹಿಳಾ ಹಾಗೂ ಇತರೆ 13 ಸೇರಿ ಒಟ್ಟು 2,26,065 ಮತದಾರರಿದ್ದು, 272 ಮತಗಟ್ಟೆಗಳಿವೆ. ಕನಕಗಿರಿಯಲ್ಲಿ 1,08,285 ಪುರುಷ, 1,10,989 ಮಹಿಳೆ ಹಾಗೂ ಇತರೆ 6 ಸೇರಿ 2,19,280 ಮತದಾರರಿದ್ದು, 261 ಬೂತ್‌ಗಳಿವೆ. ಗಂಗಾವತಿಯಲ್ಲಿ 98,263 ಪುರುಷ, 99,641 ಮಹಿಳಾ ಹಾಗೂ ಇತರೆ 8 ಸೇರಿ 1,97,912 ಮತದಾರರಿದ್ದು, 233 ಮತ ಕೇಂದ್ರಗಳಿವೆ. ಯಲಬುರ್ಗಾದಲ್ಲಿ 1,08,400 ಪುರುಷ, 1,07,005 ಮಹಿಳಾ ಹಾಗೂ ಇತರೆ 7 ಸೇರಿ ಒಟ್ಟು 2,15,412 ಮತದಾರರಿದ್ದು, 253 ಮತಗಟ್ಟೆಗಳಿವೆ. ಕೊಪ್ಪಳದಲ್ಲಿ 1,22,528 ಪುರುಷ, 1,23,682 ಮಹಿಳಾ ಹಾಗೂ ಇತರೆ 11 ಸೇರಿ ಒಟ್ಟು 2,46,221 ಮತದಾರರಿದ್ದು, 288 ಮತಗಟ್ಟೆಗಳಿವೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 5,51,526 ಪುರುಷರು ಹಾಗೂ 5,53,319 ಮಹಿಳಾ ಹಾಗೂ ಇತರೆ 45 ಸೇರಿ ಒಟ್ಟು 11,04,890 ಮತದಾರರಿದ್ದು, ಒಟ್ಟು 1307 ಮತಗಟ್ಟೆಗಳಿವೆ ಎಂದು ಎಡಿಸಿ ಸಾವಿತ್ರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts