More

    ಸೌಲಭ್ಯ ಕಲ್ಪಿಸುವ ಸಂಘದ ಅಪಪ್ರಚಾರ ಸಲ್ಲದು: ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಕಿವಿಮಾತು

    ಕೊಪ್ಪಳ: ಸರ್ಕಾರಿ ವೃತ್ತಿ ಶ್ರೇಷ್ಠವಾಗಿದ್ದು, ಪ್ರಾಮಾಣಿಕವಾಗಿ ಜನ ಮೆಚ್ಚುವಂತೆ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

    ನಗರದ ಸಾಹಿತ್ಯ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘಟನೆಗಾಗಿ ಬದುಕನ್ನು ಅರ್ಪಿಸಿದ್ದೇವೆ. ಅಸಮಾಧಾನಗಳಿದ್ದಲ್ಲಿ ವೈಯಕ್ತಿಕವಾಗಿ ವಿರೋಧಿಸಬೇಕು. ಸಂಘಕ್ಕೆ ಅಪಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳಬಾರದು. ಸೌಲಭ್ಯ ಕಲ್ಪಿಸುವ ಸಂಘದ ಅಪಪ್ರಚಾರ ಸಲ್ಲದು ಎಂದ ಅವರು, ಪುಣ್ಯಕೋಟಿ ದತ್ತು ಯೋಜನೆಗೆ ಹಣ ನೀಡುವುದರಿಂದ ಜಾನುವಾರುಗಳು ಕಸಾಯಿಖಾನೆಗೆ ಹೋಗುವುದು ತಪ್ಪುತ್ತದೆ. ನಮ್ಮ ಮಕ್ಕಳಿಗೂ ಪುಣ್ಯ ಲಭಿಸುತ್ತದೆ. ಸ್ವಯಂ ಪ್ರೇರಿತವಾಗಿ ಪತ್ರ ನೀಡಿ ಎಂದು ಮನವಿ ಮಾಡಿದರು.

    ಏಳನೇ ವೇತನ ಆಯೋಗದಲ್ಲಿ ಮತ್ತೆ ವೇತನ ಹೆಚ್ಚಿಸಿಕೊಳ್ಳುವುದು ನಮಗೆ ಗೊತ್ತಿದೆ. ನಂತರ ಎನ್‌ಪಿಎಸ್ ರದ್ದತಿಗೆ ಕೈ ಜೋಡಿಸಲಾಗುವುದು. 13 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಮೂಲಕ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ದೇಶದ ಎರಡನೇ ರಾಜ್ಯ ಕರ್ನಾಟಕ. ಅಭಿವೃದ್ಧಿಯಲ್ಲೂ ರಾಜ್ಯ 5ನೇ ಸ್ಥಾನದಲ್ಲಿದೆ. ಇದಕ್ಕೆ ಸರ್ಕಾರಿ ನೌಕರರ ಶ್ರಮವೇ ಕಾರಣ ಎಂದರು.

    ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶುಂಭುಲಿಂಗನಗೌಡ ಪಾಟೀಲ್ ಹಲಗೇರಿ ಮಾತನಾಡಿ, ಕೆಲವರು ಗೊತ್ತಿಲ್ಲದೆ ಏನನ್ನಾದರೂ ಮಾತನಾಡುತ್ತಾರೆ. ಅದನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಬೇಕು. ನಿವೃತ್ತ ಸರ್ಕಾರಿ ನೌಕರರನ್ನು ಆರೋಗ್ಯ ಸೌಲಭ್ಯ ಯೋಜನೆಗೆ ಒಳಪಡಿಸಬೇಕು ಎಂದರು. ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಕಾರ್ಯದರ್ಶಿ ಸದಾನಂದ, ಜಂಟಿ ಕಾರ್ಯದರ್ಶಿ ಎಸ್.ಎಸ್.ಸುಂಕದ, ರಾಜ್ಯ ವಿಕಲಚೇತನರ ನೌಕರರ ಸಂಘದ ಅಧ್ಯಕ್ಷ ಬೀರಪ್ಪ ಅಂಡಗಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಡಿಡಿಪಿಐ ಮುತ್ತುರಡ್ಡಿ ರಡ್ಡೇರ್ ಇದ್ದರು.

    ನೌಕರರು ರಾಜ್ಯ ಸರ್ಕಾರ ಹಾಗೂ ಸಮಾಜದ ಒಂದು ಭಾಗ. ಎನ್‌ಪಿಎಸ್ ಯೋಜನೆ ಗಂಭೀರವಾದ ವಿಷಯವಾಗಿದೆ. ನೀವು ಸಲ್ಲಿಸುವ ಸೇವೆ ತೃಪ್ತಿ ತಂದಿದೆ. ದೈಹಿಕ, ಚಿತ್ರಕಲಾ ಹಾಗೂ ಸಂಗೀತ ಶಿಕ್ಷಕರ ಬಗ್ಗೆ ಧ್ವನಿ ಎತ್ತುವೆ.
    | ಹೇಮಲತಾ ನಾಯಕ ವಿಧಾನ ಪರಿಷತ್ ಸದಸ್ಯೆ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts