More

    ಕೊಪ್ಪಳವನ್ನು ಶಿಕ್ಷಣ ಕಾಶಿ ಮಾಡುವೆ, ಸಂಗಣ್ಣ ಕರಡಿ ಹೇಳಿಕೆ

    ಕೊಪ್ಪಳ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿ ಸರ್ಕಾರಿ ಹೈಟೆಕ್ ಶಾಲೆ, ಕಾಲೇಜು ನಿರ್ಮಿಸಿ ಶಿಕ್ಷಣ ಕಾಶಿಯನ್ನಾಗಿ ಮಾಡಲಾಗುವುದು ಎಂದು ಸಂಸದ ಕರಡಿ ಸಂಗಣ್ಣ ಭರವಸೆ ನೀಡಿದರು.

    ತಾಲೂಕಿನ ಹಲಗೇರಿ, ಹಂದ್ರಾಳ, ಹಣವಾಳ ಮತ್ತಿತರ ಗ್ರಾಮಗಳಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಪ್ರಚಾರ ನಡೆಸಿ ಮಾತನಾಡಿದರು.

    ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರಿತ ಗುಣಮಟ್ಟದ ಶಿಕ್ಷಣ ಸಿಗದಿರುವ ಕಾರಣ ಮಕ್ಕಳು ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಂಗಳೂರು ಮಹಾನಗರಗಳಿಗೆ ಹೋಗಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇದರಿಂದ ಪಾಲಕರಿಗೆ ಆರ್ಥಿಕ ಹೊರೆಯಾಗುತ್ತಿದೆ.

    ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯಕ್ಕೆ ಬಂಪರ್

    ಬಿಜೆಪಿ ಸರ್ಕಾರ ಬಂದರೆ, ಕ್ಷೇತ್ರದಲ್ಲಿ ಹೈಟೆಕ್ ಶಾಲೆ- ಕಾಲೇಜುಗಳನ್ನು ನಿರ್ಮಿಸಲಾಗುವುದು. ಕೌಶಲಾಧಾರಿತ ಕೋರ್ಸ್‌ಗಳನ್ನು ಪರಿಚಯಿಸಿ ಕ್ಷೇತ್ರವನ್ನು ಶಿಕ್ಷಣ ಕಾಶಿ ಮಾಡುವುದು ನನ್ನ ಕನಸಾಗಿದೆ ಎಂದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿ ಬಜೆಟ್‌ನಲ್ಲಿ

    ಹೆಚ್ಚಿನ ಪಾಲು ಶಿಕ್ಷಣ ಇಲಾಖೆಗೆ ನೀಡಿದೆ. ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶೌಚಗೃಹ ನಿರ್ಮಾಣ ಮಾಡುತ್ತಿದ್ದು, ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಆದರೆ, ಕ್ಷೇತ್ರದ ಶಾಸಕರಿಗೆ ಇಚ್ಛಾಶಕ್ತಿ ಇಲ್ಲ.

    ಆದ್ದರಿಂದಲೇ ಶಾಲಾ-ಕಾಲೇಜುಗಳ ಸ್ಥಿತಿ ಶೋಚನೀಯ ವಾಗಿವೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ, ಶಾಲಾ- ಕಾಲೇಜು ಅಭಿವೃದ್ಧಿ ಗೆ ಸಹಕರಿಸಿ ಎಂದರು.

    ಕೊಪ್ಪಳದಲ್ಲೇ ವಿವಿ ಕಟ್ಟಡ ನಿರ್ಮಾಣ

    ಬಿಜೆಪಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಕೊಪ್ಪಳಕ್ಕೆ ವಿಶ್ವವಿದ್ಯಾಲಯ ಘೋಷಿಸಿದೆ. ನಗರದಲ್ಲಿ ಕಟ್ಟಡ ಇಲ್ಲದಿರುವ ಕಾರಣ ತಳಕಲ್ ನಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ವಿವಿ ಕಾರ್ಯಾರಂಭ ಮಾಡಿದೆ. ಕೊಪ್ಪಳ ವಿವಿ ಕೊಪ್ಪಳದಲ್ಲೇ ಇರಬೇಕೆಂಬುದು ಕ್ಷೇತ್ರದ ಜನತೆಯ ಅಭಿಮತ.

    ಆದ್ದರಿಂದ ಬಿಜೆಪಿ ಸರ್ಕಾರ ಬಂದ ಕೂಡಲೇ 200 ಎಕರೆ ಪ್ರದೇಶದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ವಿವಿಧ ಕಚೇರಿಗಳ ಕಟ್ಟಡ ನಿರ್ಮಿಸಲಾಗುವುದು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಲ್ಯಾಬ್ ನಿರ್ಮಾಣ ಮಾಡಲಾಗುವುದು. ಕಾಗದ ರಹಿತ ವಿವಿ ಮಾಡುವುದು ನನ್ನ ಗುರಿಯಾಗಿದೆ. ಇದು ನನ್ನ ಭರವಸೆ ಮಾತ್ರವಲ್ಲ ಕರ್ತವ್ಯವಾಗಿದೆ ಎಂದು ಸಂಸದ ಕರಡಿ ಸಂಗಣ್ಣ ನುಡಿದರು.

    ದೀರ್ಘದಂಡ ನಮಸ್ಕಾರ ಹಾಕಿದ ಯುವಕರು

    ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಬೇಕೆಂದು ಲಾಚನಕೇರಿ ಗ್ರಾಮದ ಯುವಕರಾದ ದೇವಪ್ಪ ದೊಡ್ಮನಿ, ಮಂಜಪ್ಪ ದೊಡ್ಮನಿ ಮಂಗಳವಾರ ಹುಲಿಗೆಮ್ಮ ದೇವಿಗೆ ಹರಿಕೆ ಕಟ್ಟಿಕೊಂಡು ದೀರ್ಘದಂಡ ನಮಸ್ಕಾರ ಹಾಕಿದರು.

    ಇದನ್ನೂ ಓದಿ: ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ: ಈಗಾಗಲೇ 3,773 ಮಂದಿ ಮತ ಚಲಾವಣೆ

    ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ಮಾತನಾಡಿ, ಚುನಾವಣೆ ಪ್ರಚಾರದ ವೇಳೆ ಪ್ರತಿ ಗ್ರಾಮದಲ್ಲಿಯೂ ಜನತೆ ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಸಮಸ್ಯೆಗಳನ್ನು ತಿಳಿಸಿದರು.

    ಕ್ಷೇತ್ರದ ಜನತೆಯ ಮನೆಯ ಮಗಳಾಗಿದ್ದೇನೆ. ಹೋದ ಕಡೆಯಲ್ಲಿ ಅತ್ಯುತ್ತಮ ಸ್ಪಂದನೆ ಸಿಗುತ್ತಿದ್ದು, ಬಿಜೆಪಿ ಅಭಿಮಾನಿಗಳು ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಕ್ಕೆ ಅಭಾರಿಯಾಗಿದ್ದೇನೆ. ಮೇ 10 ರಂದು ಬಿಜೆಪಿ ಗುರುತಿಗೆ ಮತ ಹಾಕಿ ಗೆಲ್ಲಿಸಬೇಕು ಎಂದರು.

    ಮುಖಂಡರಾದ ನಾಗಬಸಯ್ಯ ಸಸಿಮಠ, ಪಾಲಾಕ್ಷಪ್ಪ ಗುಂಗಾಡಿ, ಫಕೀರಪ್ಪ ಜಂಗ್ಲಿ , ಯಲ್ಲಪ್ಪ ಹೊಸಳ್ಳಿ ,ಮಂಜಯ್ಯ ಸಸಿಮಠ, ಮಗಳಗೌಡ ಪೊಲೀಸ್ ಪಾಟೀಲ್, ಕೆಂಚಪ್ಪ ಸಾಲುಡಿ, ಉಮೇಶ್ ಹರಿಜನ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts