More

    ಗ್ರಾಮೀಣ ಕಲೆಗಳಿಗೆ ಬೇಕಿದೆ ಆಧುನಿಕ ಸ್ಪರ್ಶ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಮನದಾಳದ ಮಾತು

    ಕೊಪ್ಪಳ: ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಸಮಿತಿಯೇ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಿದೆ. ಕೊಪ್ಪಳ ಜಿಲ್ಲೆ ವಿವಿಧ ಕಲೆಗಳ ತವರೂರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ನಾಡಿಗೆ ನೀಡಿದೆ. ಬಯಲಾಟದಲ್ಲಿ ಸಾಧನೆಗೈದ ಮೋರನಾಳದ ಶಂಕ್ರಪ್ಪ ಹೊರಪೇಟೆ ಹಾಗೂ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಕಿನ್ನಾಳ ಕಲೆ ಕಲಾವಿದ, ಕಿನ್ನಾಳ ಗ್ರಾಮದ ಸಣ್ಣ ರಂಗಪ್ಪ ಚಿತ್ರಗಾರ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ದೊರೆತಿರುವುದು ಮತ್ತೊಂದು ಹೆಮ್ಮೆಯ ವಿಷಯ. ಅದರಲ್ಲಿ ಕಿನ್ನಾಳ ಕಲೆಗೂ ಭೌಗೋಳಿಕ ಕುರುಹು(ಜಿಯೊಗ್ರಾಫಿಕಲ್ ಇಂಡಿಕೇಷನ್) ಸಿಕ್ಕಿದ್ದು ಜಿಲ್ಲೆಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪಸರಿಸುವಂತಾಗಿದೆ. ರಾಜ್ಯೋತ್ಸವ ಪುರಸ್ಕೃತರಾದ ಜಿಲ್ಲೆಯ ಸಾಧಕರೊಂದಿಗಿನ ಸಣ್ಣ ಮಾತು ಕತೆ ಇಲ್ಲಿದೆ.

    ಸಣ್ಣ ರಂಗಪ್ಪ ಚಿತ್ರಗಾರ (ಕಿನ್ನಾಳ ಕಲೆ)

    ಪ್ರ: ರಾಜ್ಯೋತ್ಸವ ಪುರಸ್ಕೃತರಾಗಿದ್ದಕ್ಕೆ ಏನನ್ನಿಸುತ್ತಿದೆ ?

    ಸ.ರಂ: ನಾನು ಚಿಕ್ಕವನಿದ್ದಾಗಿನಿಂದಲೂ ಕಲೆ ರೂಢಿಸಿಕೊಂಡು ಬಂದವನು. ನಾನಾಯಿತು, ನನ್ನ ಕೆಲಸವಾಯಿತೆಂದು ಇದ್ದೆ. ನನ್ನ ಕಲೆ ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು.

    ಪ್ರ: ಕಿನ್ನಾಳ ಕಲೆ ಸದ್ಯದ ಸ್ಥಿತಿ ಹೇಗಿದೆ ?

    ಸ.ರಂ: ವಿಜಯನಗರ ಅರಸರ ಕಾಲದಲ್ಲಿ ಪ್ರಸಿದ್ಧವಾಗಿದ್ದ ಕಲೆ ಇದು. ಇದನ್ನು ಉಳಿಸಿ ಬೆಳಸಬೇಕಿದೆ. ಸದ್ಯ ಪ್ಲಾಸ್ಟಿಕ್ ಸೇರಿ ಇತರ ಗೊಂಬೆಗಳ ಭರಾಟೆಯಲ್ಲಿ ಮೊದಲಿನ ಬೇಡಿಕೆ, ಮಾರುಕಟ್ಟೆ ಇಲ್ಲದಂತಾಗಿದೆ. ಲಾಭವಿಲ್ಲದ ಕಾರಣ ವೃತ್ತಿಯಿಂದ ವಿಮುಖರಾಗುವಂತಾಗಿದೆ.

    ಪ್ರ: ಕಲೆ ಉಳಿಸುವ ನಿಟ್ಟಿನಲ್ಲಿ ಏನಾಗಬೇಕಿದೆ ?

    ಸ.ರಂ: ಸರ್ಕಾರ ಕಲೆಗೆ ಆಧುನಿಕ ಸ್ಪರ್ಶ ನೀಡುವ ಕೆಲಸ ಮಾಡಬೇಕು. ಆಸಕ್ತ ಯುವಕರಿಗೆ ತರಬೇತಿ ನೀಡಬೇಕು. ಮಾರುಕಟ್ಟೆ ಸೌಲಭ್ಯ ಒದಗಿಸುವ ಅಗತ್ಯವಿದೆ. ಸರ್ಕಾರ ಮೇಕ್ ಇನ್ ಇಂಡಿಯಾ ಎನ್ನುತ್ತದೆ. ಸ್ಥಳೀಯವಾಗಿಯೇ ಇರುವ ದೇಸಿ ಕಲೆಗಳಿಗೆ ಪ್ರೋತ್ಸಾಹ ನೀಡಿ ಉಳಿಸುವ ಕೆಲಸ ಮಾಡಬೇಕು.

    ಪ್ರ: ಯುವ ಕಲಾವಿದರಿಗೆ ಏನು ಹೇಳ ಬಯಸುವಿರಿ ?

    ಸ.ರಂ: ಕಲೆ, ಕಲಾವಿದನಿಗೆ ಸಾವಿಲ್ಲ. ಸರ್ಕಾರ ಕಲಾವಿದರ ನೆರವಿಗಾಗಿ ಯೋಜನೆ ರೂಪಿಸಬೇಕು. ಕಲೆಯಿಂದ ಬದುಕು ರೂಪಗೊಂಡಲ್ಲಿ ಕಲಾವಿದ, ಕಲೆ ಉಳಿಯುತ್ತದೆ. ಇಂದಿನ ಯುವಕರು ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದು, ಅದನ್ನು ಬಳಸಿ ಕಲೆ ಉಳಿಸಲಿ.

    ಪ್ರ: ಕಿನ್ನಾಳ ಕಲೆ ಕಲಾವಿದರ ಸ್ಥಿತಿ-ಗತಿ ಹೇಗಿದೆ ?

    ಸ.ರಂ: ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವಂತೆ ಅವರಿಗಾಗಿ ಯೋಜನೆಗಳನ್ನು ರೂಪಿಸಬೇಕು. ಬದುಕಿಗೆ ನೆರವು ಸಿಕ್ಕಾಗಲೇ ಕಲೆ ಉಳಿಸಲು ಸಾಧ್ಯ.

    ಶಂಕ್ರಪ್ಪ ಹೊರಪೇಟೆ (ಬಯಲಾಟ)

    ಪ್ರ: ರಾಜ್ಯೋತ್ಸವ ಪುರಸ್ಕೃತರಾಗಿದ್ದಕ್ಕೆ ಏನನ್ನಿಸುತ್ತಿದೆ ?

    ಶ.ಹೊ: ಈಗಾಗಲೇ ಬಯಲಾಟ ಅಕಾಡೆಮಿ ನನ್ನ ಕಲೆ ಗುರುತಿಸಿ ಗೌರವಿಸಿದೆ. ಇದೀಗ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಖುಷಿ ಇಮ್ಮಡಿಗೊಳಿಸಿದೆ. ಇದರಿಂದ ಇನ್ನಷ್ಟು ಕಲಾ ಸೇವೆ ಮಾಡಲು ಪ್ರೇರಣೆಯಾಗಿದೆ. ಕೊನೆಯವರೆಗೂ ಕಲೆಗೆ ಮುಡಿಪಾಗಿರುವೆ.

    ಪ್ರ: ಬಯಲಾಟ ಕಲೆ ಸದ್ಯದ ಸ್ಥಿತಿ ಹೇಗಿದೆ ?

    ಶ.ಹೊ: ಇದೊಂದು ಗ್ರಾಮೀಣ ಕಲೆ. ನಾವು ಚಿಕ್ಕವರಿದ್ದಾಗ ಇಂಥ ಕಲೆಗಳೇ ನಮಗೆ ಮನರಂಜನೆ ನೀಡುತ್ತಿದ್ದವು. ಹೆಚ್ಚು ಓದದಿದ್ದರೂ, ಇವುಗಳಿಂದಲೇ ಬದುಕಿನ ಪಾಠ ಕಲಿತಿದ್ದೇವೆ. ಇಂದು ತೀರಾ ಕಡಿಮೆಯಾಗುತ್ತಿದೆ. ಹೆಚ್ಚೆಚ್ಚು ಜನರು ಕಲೆ ಉಳಿಸಿ ಬೆಳೆಸಬೇಕಿದೆ.

    ಪ್ರ: ಕಲೆ ಉಳಿಸುವ ನಿಟ್ಟಿನಲ್ಲಿ ಏನಾಗಬೇಕಿದೆ ?

    ಶ.ಹೊ: ಈ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಇದು ಕೇವಲ ಕಲೆಯಲ್ಲ. ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಅರಿಯಲು ಸಹಕಾರಿಯಾಗಿದೆ. ಶಾಲಾ ಹಂತದಲ್ಲಿ ಇಂಥ ಕಲೆಗಳಲ್ಲಿ ಆಸಕ್ತಿ ಇರುವ ಮಕ್ಕಳಿಗೆ ತರಬೇತಿ ನೀಡಲಿ.

    ಪ್ರ: ಬಯಲಾಟ ಕಲಾವಿದರ ಸ್ಥಿತಿ-ಗತಿ ಹೇಗಿದೆ ?

    ಶ.ಹೊ: ಕಲಾವಿದರು ಬದುಕು ಕಟ್ಟಿಕೊಳ್ಳಲು ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ, ಸಾಲ ಸೌಲಭ್ಯ ಇನ್ನಿತರ ಸೌಕರ್ಯ ನೀಡಬೇಕು. ತರಬೇತಿ ನೀಡುವ ಹಿರಿಯ ಕಲಾವಿದರಿಗೆ ಗೌರವ ಧನ ನೀಡಿದರೆ ಅನುಕೂಲವಾಗಲಿದೆ.

    ಪ್ರ: ಯುವ ಕಲಾವಿದರಿಗೆ ಏನು ಹೇಳ ಬಯಸುವಿರಿ ?

    ಶ.ಹೊ: ನಂಬಿದ ಕಲಾವಿದರನ್ನು ಕಲಾ ಸರಸ್ವತಿ ಕೈ ಬಿಡುವುದಿಲ್ಲ. ಕಲೆ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಸಮಾಜ, ಸರ್ಕಾರ ಇದಕ್ಕೆ ಬೇಕಾದ ನೆರವು, ಸಹಾಯಸ್ತ ಚಾಚಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts