More

    ಸಂಪನ್ಮೂಲ ಬಳಸಿ ಕೊಪ್ಪಳ ಅಭಿವೃದ್ಧಿ ಕಾಣಲಿ

    ಕೊಪ್ಪಳ: ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳಕ್ಕೆ ತನ್ನದೇ ಐತಿಹ್ಯವಿದೆ. ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಗತಿ ಕಾಣಬೇಕಿದೆ. ಈ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಅರ್ಥಪೂರ್ಣ ನಿರ್ಣಯಗಳು, ಚರ್ಚೆಗಳು ಬರಬೇಕಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಶರಣಪ್ಪ ಬಾಚಲಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.

    ತಮ್ಮ ಭಾಷಣದಲ್ಲಿ ಮಾತನಾಡಿ, ಜೈನರ ಕಾಶಿ ಕೊಪ್ಪಳಕ್ಕೆ ತನ್ನದೇ ಶ್ರೀಮಂತಿಕೆಯಿದೆ. ಅಖಂಡ ರಾಯಚೂರಿನಿಂದ ಬೇರ್ಪಟ್ಟ ನಂತರ ಆಗಬೇಕಿದ್ದ ಅಭಿವೃದ್ಧಿ ಆಗಿಲ್ಲ. ತುಂಗಭದ್ರೆ ಇಲ್ಲೇ ಹರಿದರೂ ನಿರೀಕ್ಷಿತ ಮಟ್ಟದಲ್ಲಿ ನೀರಾವರಿಯಾಗಿಲ್ಲ. ಸಿಂಗಟಾಲೂರು, ಕೊಪ್ಪಳ ಏತ ನೀರಾವರಿ ಅನುಷ್ಠಾನವಾಗಿಲ್ಲ. ಹಿರೇಹಳ್ಳ ಯೋಜನೆ ಲೋಕಾರ್ಪಣೆಯಾದರೂ ನೀರಾವರಿ ಸೌಲಭ್ಯ ರೈತರಿಗೆ ದಕ್ಕಿಲ್ಲ. ಸಾಕಷ್ಟು ಕಾರ್ಖಾನೆಗಳಿದ್ದರೂ ಸ್ಥಳೀಯರಿಗೆ ಉದ್ಯೋಗವಕಾಶ ಅಷ್ಟಕ್ಕಷ್ಟೆ ಎಂಬಂತಿದೆ. ರಾಜಕೀಯ ಪ್ರಾತಿನಿಧ್ಯ ಸಿಕ್ಕರೂ ಕೊಪ್ಪಳ ಕ್ಷೇತ್ರದರಿಗೆ ಈವರೆಗೆ ಸಚಿವರಾಗುವ ಯೋಗ ಕೂಡಿ ಬಂದಿಲ್ಲ. ಹೀಗಾಗಿ ಅಭಿವೃದ್ಧಿಗೆ ಹಿನ್ನೆಡೆಯಾಗಿರಬಹುದು ಎಂದರು.

    ಈವರೆಗೆ ಆಯ್ಕೆಯಾದವರೂ ಅನೇಕ ಅಭಿವೃದ್ಧಿ ಕೆಸಲಗಳನ್ನು ಮಾಡಿದ್ದಾರೆ. ಆದರೆ, ಜನರ ನಿರೀಕ್ಷೆಗೆ ತಕ್ಕಂತೆ ಆಗಿಲ್ಲವೆಂಬ ಅಭಿಪ್ರಾಯವಿದೆ. ಮುಂದೆ ಬರುವವರು ಇದನ್ನು ಅರಿತು ನಡೆಯಲಿ. ಕೈಗಾರಿಕೆಗಳಿಗೆ ಜನರಿಂದ ವಶಪಡಿಸಿಕೊಂಡ ಭೂಮಿ ನಿರುಪಯುಕ್ತವಾಗಿದ್ದು, ಅದನ್ನು ರೈತರಿಗೆ ವಾಪಸ್ ಕೊಡಿಸಬೇಕಿದೆ. ಸಾಕಷ್ಟು ಕೋಳಿ ಫಾರ್ಮ್‌ಗಳಿದ್ದು, ಜನರಿಗೆ ನೊಣಗಳ ಕಾಟ ಹೆಚ್ಚಿದೆ. ಇದನ್ನು ನಿಯಂತ್ರಿಸುವ ಕೆಲಸವಾಗಬೇಕಿದೆ. ವೈಭವದ ಇತಿಹಾಸ, ಧಾರ್ಮಿಕ ಸ್ಥಳವಾಗಿರುವ ಕೊಪ್ಪಳ ತಾಲೂಕು ಈಗ ಜಿಲ್ಲಾ ಕೇಂದ್ರವಾಗಿದ್ದು ಇಲ್ಲಿನ ಜನರು ಸ್ನೇಹ ಪರರು. ಹನುಮಸಾಗರದಿಂದ ಬಂದ ನನ್ನನ್ನು ತಮ್ಮವರೇ ಎಂಬಂತೆ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಅವರ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದರು.

    ದ್ವಾರಬಾಗಿಲುಗಳ ಉದ್ಘಾಟನೆ: ಸಾಹಿತ್ಯ ಭವನದ ಆವರಣದಲ್ಲಿ ಬೆಳಗ್ಗೆ ಶಾಸಕ ರಾಘವೇಂದ್ರ ಹಿಟ್ನಾಳ್ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಪರಿಷತ್ತಿನ ಧ್ವಜಾರೋಹಣ, ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಕನ್ನಡ ಧ್ವಜಾರೋಹಣ ನೆರವೇರಿಸಿದರು. ದಿ.ಎಸ್.ಬಿ.ಗೊಂಡಬಾಳ ಮಹಾದ್ವಾರ, ದಿ.ಎಸ್.ಎನ್.ತಿಮ್ಮನಗೌಡ ಮಹಾದ್ವಾರ, ದಿ.ಎಸ್. ಕಾಸೀಂಸಾಬ್, ದಿ.ಶಾಂತಾದೇವಿ ಹಿರೇಮಠ, ದಿ.ಬಿ.ಆರ್.ತುಬಾಕಿ ದ್ವಾರಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಉದ್ಘಾಟಿಸಿದರು.

    ಗಮನ ಸೆಳೆದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ: ಕೊಪ್ಪಳ ನಗರದ ಗಡಿಯಾರ ಕಂಬದಿಂದ ಸಾಹಿತ್ಯ ಭವನದವರೆಗೆ ಭುವನೇಶ್ವರಿ ದೇವಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು. ಬಿಜೆಪಿ ಪ್ರಮುಖ ಸಿ.ವಿ.ಚಂದ್ರಶೇಖರ ಮೆರವಣಿಗೆಗೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ತಾಪಂ ಇಒ ದುಂಡಪ್ಪ ತುರಾದಿ ಇತರರಿದ್ದರು. ಮೆರವಣಿಗೆಯಲ್ಲಿ ಅಳವಂಡಿಯ ಕೆಜಿಬಿವಿ ಶಾಲೆಯ ವಿದ್ಯಾರ್ಥಿನಿಯರಿಂದ ಡೊಳ್ಳು ಕುಣಿತ, ಬಸವರಾಜ ವಿಭೂತಿ ಹಗಲವೇಷ ತಂಡದಿಂದ ಹಗಲು ವೇಷ, ಜಾಂಜ್ ಮೇಳ, ಡೊಳ್ಳು ವಾದನ ತಂಡಗಳ ಭಾಗಯಾಗಿ ಗಮನ ಸೆಳೆದವು. 100 ಮೀಟರ್ ಉದ್ದದ ಕನ್ನಡ ಬಾವುಟವನ್ನು ಹಿಡಿದು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕನ್ನಡ ಗೀತೆ ಗಾಯನ, ಭರತನಾಟ್ಯ, ಸಂಸ್ಕೃತ ಶ್ಲೋಕ ಪಠಣ, ರೇಷ್ಮಾ ವಡ್ಡಟ್ಟಿ ತಂಡದ ಯೋಗ ಪ್ರದರ್ಶನ ನೋಡುಗರ ಗಮನ ಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts