More

    ಶೇ.4ರಷ್ಟು ಮೀಸಲಾತಿ ಮರು ಕಲ್ಪಿಸಿ

    ಕೊಪ್ಪಳ: ಮುಸ್ಲಿಂ ಸಮುದಾಯವು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಈ ಮೊದಲು ಇದ್ದಂತಹ ಶೇ.4ರಷ್ಟು ಮೀಸಲಾತಿಯನ್ನು ಮರು ಕಲ್ಪಿಸುವಂತೆ ಒತ್ತಾಯಿಸಿ ಮುಸ್ಲಿಂ ಸಮುದಾಯದವರು ಸೋಮವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ರಾಜ್ಯ ಸರ್ಕಾರ ಮುಸ್ಲಿಮರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಸಾಮಾಜಿಕ, ಶೈಕ್ಷಣಿಕವಾಗಿ ಸಮುದಾಯ ಹಿಂದುಳಿದಿದೆ. ಹಲವು ಸಮಿತಿಗಳ ವರದಿ ಆಧರಿಸಿ ಈ ಹಿಂದೆ 2ಬಿ ಮೀಸಲಾತಿ ಕಲ್ಪಿಸಲಾಗಿದೆ. ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಮತ್ತು ಚಿನ್ನಪ್ಪ ರಡ್ಡಿ ಆಯೋಗವು ಧಾರ್ಮಿಕ ಅಲ್ಪಸಂಖ್ಯಾತರೆಂದು ಹಿಂದುಳಿದ ಪಟ್ಟಿಯಿಂದ ತೆಗೆಯಲಾಗುವುದಿಲ್ಲವೆಂದು ಅಭಿಪ್ರಾಯಪಟ್ಟಿವೆ. ನ್ಯಾಯಾಲಯವೂ ಈ ವಾದವನ್ನು ಎತ್ತಿ ಹಿಡಿದಿದೆ. ಹೀಗಿದ್ದರೂ ಸರ್ಕಾರ ನಮ್ಮ ಮೀಸಲು ಕಸಿದುಕೊಂಡು ಅನ್ಯರಿಗೆ ನೀಡಿರುವುದು ನಮಗೆ ಮಾಡಿದ ಅನ್ಯಾಯವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಮೊದಲಿನಂತೆ 2ಬಿ ಅಡಿ ಶೇ.4ರಷ್ಟು ಮೀಸಲಾತಿ ಮರು ಕಲ್ಪಿಸಬೇಕು. ಮುಸ್ಲಿಂ ವಿರೋಧಿ ನಡೆ ಅನುಸರಿಸುವುದನ್ನು ಕೈ ಬಿಡಬೇಕು. ಒಬ್ಬರ ಮೀಸಲಾತಿ ಕಸಿದು ಇನ್ನೊಬ್ಬರಿಗೆ ನೀಡುವುದು ಸರಿಯಾದ ಕ್ರಮವಲ್ಲ. ಇನ್ನೊಂದು ಸಮುದಾಯಕ್ಕೆ ಅನ್ಯಾಯವಾಗದಂತೆ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿದರು. ಯೂಸೂಪಿಯಾ ಮಸೀದಿಯಿಂದ ಅಶೋಕ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಲಾಯಿತು.

    ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನ ಮಠ, ಮುಖಂಡರಾದ ಸಲಿಂ ಮಂಡಲಗೇರಿ, ಸಲಿಂ ಖಾದ್ರಿ , ಸಲಿಂ ಗೊಂಡಬಾಳ, ಯಮನೂರಪ್ಪ ನಾಯಕ, ಎಂ.ಡಿ.ಆಸೀಫ್, ಆರ್.ಎಂ.ರಫಿ, ಶಾಹಿದ್ ತಹಸೀಲ್ದಾರ್, ಅಪ್ಸರ್‌ಸಾಬ್ ಅತ್ತಾರ್, ಬಾಷುಸಾಬ್ ಖತೀಬ್, ಕಾಟನ್ ಪಾಷಾ, ಆದಿಲ್ ಪಟೇಲ್, ಅಯೂಬ್ ಅಡ್ಡೆವಾಲೆ, ಖಾಜಾವಲಿ ಬನ್ನಿಕೊಪ್ಪ, ಮಾನ್ವಿ ಪಾಷಾ, ಅಜೀಂ ಅತ್ತಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts