More

    ಗಣಿಗಾರಿಕೆ ನಿಯಮ ತಿದ್ದುಪಡಿಗೆ 28ರಂದು ಬೆಳಗಾವಿಯಲ್ಲಿ ಸಾಂಕೇತಿಕ ಪ್ರತಿಭಟನೆ: ಎಫ್‌ಕೆಕ್ಯೂಎಸ್‌ಸಿಒಎ ಜಿಲ್ಲಾಧ್ಯಕ್ಷ ಕೊಟ್ರೇಶ ನಾಲ್ವಾಡ ಮಾಹಿತಿ

    ಕೊಪ್ಪಳ: ಗಣಿಗಾರಿಕೆಗೆ ಸಂಬಂಧಿಸಿದಂತೆ ವಿವಿಧ ನಿಯಮ ತಿದ್ದುಪಡಿಗೆ ಆಗ್ರಹಿಸಿ ಡಿ.21ರಿಂದ ರಾಜ್ಯಾದ್ಯಂತ ಎಲ್ಲ ಗಣಿ ಗುತ್ತಿಗೆ ಹಾಗೂ ಕ್ರಷರ್ ಮಾಲೀಕರು ಜಲ್ಲಿ ರಫ್ತು ಸ್ಥಗಿತಗೊಳಿಸಿದ್ದೇವೆ. ಡಿ.28ರಂದು ಬೆಳಗಾವಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುವುದೆಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಹಾಗೂ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ (ಎಫ್‌ಕೆಕ್ಯೂಎಸ್‌ಸಿಒಎ)ಜಿಲ್ಲಾಧ್ಯಕ್ಷ ಕೊಟ್ರೇಶ ನಾಲ್ವಾಡ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸದ್ಯ ರಾಜಧನ ಪಾವತಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಮ್ಮಿಂದ ಒಂದು ದರ ಪಡೆದರೆ, ಗುತ್ತಿಗೆದಾರರಿಂದ ಇಲಾಖೆ ಕಡಿಮೆ ಪಡೆಯುತ್ತದೆ. ಹೀಗಾಗಿ ಗುತ್ತಿಗೆದಾರರು ಆಯಾ ಇಲಾಖೆಯಲ್ಲಿ ಕಾಮಗಾರಿ ಬಿಲ್ ಪಡೆಯುವಾಗ ರಾಜಧನ ಪಾವತಿಸಿ ಬಾಕಿ ಬಿಲ್ ಪಡೆಯುತ್ತಿದ್ದಾರೆ. ಗಣಿ ಗುತ್ತಿಗೆ ನೀಡುವ ಪದ್ಧತಿಯಲ್ಲೂ ಹಲವು ಲೋಪಗಳಿವೆ. ಈ ಬಗ್ಗೆ ಗಣಿ ಸಚಿವ ಹಾಲಪ್ಪ ಆಚಾರ್ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕ್ವಾರಿಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಡಿ.28ಕ್ಕೆ ಜಿಲ್ಲೆಯ 32 ಗಣಿ ಮಾಲೀಕರು, ಕಾರ್ಮಿಕರು ಬೆಳಗಾವಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ ಎಂದರು.

    ಕೆಎಂಎಂಸಿಆರ್-1994 ಹಲವು ನಿಯಮಗಳಿಗೆ ಸಮರ್ಪಕ ತಿದ್ದುಪಡಿಗಳನ್ನು ತರಬೇಕು. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನೀಡಿರುವ ಆದೇಶವನ್ನು ಕೆಎಂಎಂಸಿಆರ್ ಕಾಯ್ದೆ ತಿದ್ದುಪಡಿ ಆದ ನಂತರ ಅನುಷ್ಠಾನಗೊಳಿಸಬೇಕೆಂಬುದು ನಮ್ಮ ಮುಖ್ಯ ಬೇಡಿಕೆ. ಜಲ್ಲಿಕಲ್ಲು ಉತ್ಪಾದನೆ ನಿಲ್ಲಿಸುವುದರಿಂದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಸಾಧನೆಗೆ ಹಿನ್ನಡೆಯಾಗಲಿದೆ. ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಈ ಮೂಲಕವಾದರೂ ಸರ್ಕಾರ ಸ್ಪಂದಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಅಸೋಸಿಯೇಷನ್ ರಾಜ್ಯ ಸದಸ್ಯ ಚಂದ್ರಕಾಂತ ಬಸಯ್ಯ ಮಹಾಂತಯ್ಯನಮಠ, ಜಿಲ್ಲಾ ಘಟಕದ ಸದಸ್ಯರಾದ ಶ್ರೀಧರ ಜಿ., ವೆಂಕಟೇಶ ಸುಂದರಂ, ಜಡಿಯಪ್ಪ ಬಂಗಾಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts