ಕೊಪ್ಪಳ: ಮನುಷ್ಯರೆಲ್ಲ ಪರಸ್ಪರ ಸಹಕಾರದಿಂದ ಬಾಳುವುದೇ ನಿಜವಾದ ಜೀವನ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಜಿಲ್ಲಾ ಸಮಾವೇಶದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಜಗತ್ತೇ ಸೌರ ಮಂಡಲದ ಮೇಲೆ ಅವಲಂಬಿತವಾಗಿದೆ. ಮನುಷ್ಯನೂ ಪರಾವಲಂಬಿ. ಒಂದಕ್ಕೊಂದು ಸಂಬಂಧ, ಅವಲಂಬನೆ ಇರುವುದರಿಂದಲೇ ಜಗತ್ತು ಇಷ್ಟು ಸುಂದರವಾಗಿದೆ. ಪಕೃತಿ ನಮಗೆ ಸಹಕಾರ ನೀಡುತ್ತಿರುವ ಕಾರಣ ಉತ್ತಮ ಜೀವನ ನಡೆಸುತ್ತಿದ್ದೇವೆ. ಒಬ್ಬರನ್ನೊಬ್ಬರು ಪ್ರೀತಿಸುವುದು, ಗೌರವಿಸುವುದು, ಸಹಕರಿಸುವುದು ಜಗದ ನಿಯಮ. ಎಲ್ಲರೂ ಕೂಡಿ ಬದುಕಬೇಕೆಂಬುದೇ ಸಹಕಾರ ಧರ್ಮ. ಜೀವನದಲ್ಲಿ ಎಲ್ಲ ಮುಗಿದ ನಂತರ ಬರಿಗೈಯಲ್ಲಿ ಮಣ್ಣಾಗುತ್ತೇವೆ. ಅದನ್ನು ಅರಿತು ಎಲ್ಲರೂ ಸಹಕಾರದಿಂದ ಬಾಳಬೇಕು ಎಂದು ತಿಳಿಸಿದರು.
ಸಹಕಾರಿ ಧುರೀಣ ರಮೇಶ ವೈದ್ಯ ಮಾತನಾಡಿ, ಸಹಕಾರ ಮತ್ತು ಶಿಕ್ಷಣ ಎರಡೂ ಪವಿತ್ರ ಕ್ಷೇತ್ರಗಳು. ಇವುಗಳಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಸಾಧ್ಯ. ನಮ್ಮ ಸಹಕಾರ ಸಂಘಗಳ ಬಗ್ಗೆ ವಿದೇಶಗಳಲ್ಲಿ ಚರ್ಚೆಯಾಗುತ್ತಿವೆ. ಅದು ನಮ್ಮ ಹೆಮ್ಮೆ. ದೇಶದ ಅಭಿವೃದ್ಧಿಯಲ್ಲಿ ಸಹಕಾರ ರಂಗದ ಪಾತ್ರ ಬಹುಮುಖ್ಯವಾಗಿದೆ ಎಂದರು. ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ಮಾತನಾಡಿದರು. ರಾಜ್ಯ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಎಂ.ಜಿ.ಪಾಟೀಲ್, ಮಲ್ಲಿಕಾರ್ಜುನ, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ರಾಜಶೇಖರ್ ಶೀಲವಂತರ, ಉಪಾಧ್ಯಕ್ಷ ನಾಗಲಿಂಗಪ್ಪ ಪತ್ತಾರ, ಶಶಿಧರ ಶೆಟ್ಟರ ಇತರರಿದ್ದರು.