More

    ಅನುದಾನ ದುರ್ಬಳಕೆ ಅನುಮಾನ;ಸಮಗ್ರ ತನಿಖೆಗೆ ಕುಷ್ಟಗಿ ಪುರಸಭೆ ಸದಸ್ಯರ ಆಗ್ರಹ

    ಕುಷ್ಟಗಿ: ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಖರ್ಚಾದ ಅನುದಾನಕ್ಕೆ ಸಂಬಂಧಿಸಿ ಸಮಗ್ರ ತನಿಖೆ ಕೈಗೊಳ್ಳುವಂತೆ ವಿವಿಧ ವಾರ್ಡ್‌ಗಳ ಸದಸ್ಯರು ಆಗ್ರಹಿಸಿದರು.
    ತಾಪಂ ಸಭಾಂಗಣದಲ್ಲಿ ಮಂಗಳವಾರ ಪುರಸಭೆಯ ಸಾಮಾನ್ಯ ಸಭೆಯಲ್ಲಿ 2021ರ ಡಿಸೆಂಬರ್‌ನಿಂದ 2022ರ ಜೂನ್‌ವರೆಗಿನ ಜಮಾ ಖರ್ಚಿನ ವಿವರಗಳನ್ನು ಓದಿ ಹೇಳುವ ವೇಳೆ ಆಕ್ಷೇಪ ವ್ಯಕ್ತಪಡಿಸಿದ ನಾಗರಾಜ ಹಿರೇಮಠ ಹಾಗೂ ಮೈನುದ್ದೀನ್ ಮುಲ್ಲಾ, ಸೂಕ್ತ ದಾಖಲೆ ಪ್ರದರ್ಶಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಜಿ.ಕೆ.ಹಿರೇಮಠ, ಅನುಮಾನ ಇರುವ ಕಾಮಗಾರಿಗಳನ್ನು ಗುರುತಿಸಿ ಹೇಳಿದರೆ, ಅವುಗಳಿಗೆ ಸಂಬಂಧಿಸಿದ ದಾಖಲೆ ತರಿಸಲಾಗುವುದು ಎಂದು ಹೇಳಿದರು.
    ಈ ವೇಳೆ ಅಧ್ಯಕ್ಷ ಹಾಗೂ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಬಳಿಕ ಊಟದ ವಿರಾಮ ವೇಳೆಗೆ ಕೆಲ ಸದಸ್ಯರು ಹೊರ ನಡೆದಿದ್ದರಿಂದ ಸಭೆ ಮೊಟಕುಗೊಂಡಿತು. ಉಪಾಧ್ಯಕ್ಷೆ ಹನುಮವ್ವ ಕೋರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಪತ್ತಾರ, ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ್ ಇತರರಿದ್ದರು.
    ಸ್ಥಾಯಿ ಸಮಿತಿ ರಚನೆ: ಪುರಸಭೆ ಸ್ಥಾಯಿ ಸಮಿತಿಗೆ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಯಿತು. ರಾಜೇಶ ಪತ್ತಾರ (ಅಧ್ಯಕ್ಷ), ನಾಗರಾಜ ಹಿರೇಮಠ, ರಾಮಣ್ಣ ಬಿನ್ನಾಳ, ಮೆಹಬೂಬ್ ಸಾಬ್ ಕಮ್ಮಾರ, ಅಂಬಣ್ಣ ಭಜಂತ್ರಿ ಹಾಗೂ ವೀರೇಶಗೌಡ ಬೆದವಟ್ಟಿ (ಸದಸ್ಯರು)ಆಯ್ಕೆಯಾದರು.

    ಕಾಣೆಯಾದ ಪತಿ, ಕಣ್ಣೀರಿಟ್ಟ ಕುಟುಂಬ
    ಕುಷ್ಟಗಿ: ಕಾಣೆಯಾದ ಪತಿ ಇನ್ನೂ ಪತ್ತೆಯಾಗಿಲ್ಲ. ಜೀವನೆ ನಿರ್ವಹಣೆ ಕಷ್ಟವಾಗಿದೆ. ಕುಟುಂಬ ಸದಸ್ಯರೊಬ್ಬರಿಗೆ ಪುರಸಭೆಯಲ್ಲಿ ಕೆಲಸ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಕಾಣೆಯಾದ ಪೌರ ಕಾರ್ಮಿಕ ರಾಜಶೇಖರ ನಾಗೂರು ಎಂಬುವರ ಪತ್ನಿ ಹಾಗೂ ಮಕ್ಕಳು ಪುರಸಭೆ ಸಾಮಾನ್ಯ ಸಭೆಯಲ್ಲಿ ಕಣ್ಣೀರಿಟ್ಟರು. ಕೆಲಸಕ್ಕೆ ತೆರಳುವುದಾಗಿ ಹೇಳಿ 6 ತಿಂಗಳ ಹಿಂದೆಯೇ ಹೋದ ಪತಿ ಇನ್ನೂ ಮನೆಗೆ ಬಂದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜವಾಗಿಲ್ಲ. ಪತಿ ತ್ಯಾಜ್ಯ ವಿಲೇವಾರಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಾಣೆಯಾದಾಗಿನಿಂದ ಮೂವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸ್ವಂತ ಮನೆಯೂ ಇಲ್ಲದೆ ಬಾಡಿಗೆ ಪಾವತಿಸಲೂ ಆಗದೇ ಇಡೀ ಕುಟುಂಬ ಬೀದಿಗೆ ಬರುವ ಪರಿಸ್ಥಿತಿ ಇದೆ ಎಂದು ಪತ್ನಿ ರೇಣುಕಾ ನಾಗೂರು ಅಲವತ್ತುಕೊಂಡರು.

    ಖಾಲಿ ಇರುವ ಪೌರ ನೌಕರ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ರಾಜಶೇಖರ ನಾಗೂರು ಕುಟುಂಬದ ಒಬ್ಬರಿಗೆ ಕೆಲಸ ನೀಡಬಹುದು. ಈ ಸಂಬಂಧ ಠರಾವು ಪಾಸ್ ಮಾಡಿ ಕ್ರಮ ಕೈಗೊಳ್ಳಲಾಗುವುದು.
    ಜಿ.ಕೆ.ಹಿರೇಮಠ

    ಪುರಸಭೆ ಅಧ್ಯಕ್ಷ, ಕುಷ್ಟಗಿ

    ಪುರಸಭೆ ನೌಕರ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಪತ್ತೆ ಕಾರ್ಯ ನಡೆದಿದೆ. ಮೊಬೈಲ್ ಮನೆಯಲ್ಲಿ ಬಿಟ್ಟು ಹೋಗಿರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ.
    ನಿಂಗಪ್ಪ ರುದ್ರಪ್ಪಗೋಳ
    ಸಿಪಿಐ, ಕುಷ್ಟಗಿ

    ಅನುದಾನ ದುರ್ಬಳಕೆ ಅನುಮಾನ;ಸಮಗ್ರ ತನಿಖೆಗೆ ಕುಷ್ಟಗಿ ಪುರಸಭೆ ಸದಸ್ಯರ ಆಗ್ರಹ
    ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ಮಿಕ ರಾಜಶೇಖರ ನಾಗೂರು ಪತ್ನಿ ರೇಣುಕಾ ನಾಗೂರು ಹಾಗೂ ಮಕ್ಕಳ ಸಮಸ್ಯೆಯನ್ನು ವಿವರಿಸುತ್ತಿರುವ ಸದಸ್ಯ ವಸಂತಪ್ಪ ಮೇಲಿನಮನಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts