More

    ಬಂಡಾಯದ ತಳಮಳ ಯಾರಿಗೆ ಒಲಿಯಲಿದೆ ಕೊಪ್ಪಳ

    | ವಿ.ಕೆ. ರವೀಂದ್ರಕೊಪ್ಪಳ

    ಬಿಸಿಲ ನಾಡು ಕೊಪ್ಪಳದಲ್ಲಿ ಕೈ-ಕಮಲಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಈಗಾಗಲೆ ಹ್ಯಾಟ್ರಿಕ್ ಬಾರಿಸಿರುವ ಬಿಜೆಪಿಯು ಹೊಸ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರನ್ನು ಕಣಕ್ಕಿಳಿಸಿದ್ದು, ಗೆಲುವಿನ ನಾಗಾಲೋಟ ಮುಂದುವರಿಸಲು ಸಜ್ಜಾಗಿದೆ. ಕ್ಷೇತ್ರ ಮರುವಶಕ್ಕೆ ರಣತಂತ್ರ ಹೆಣೆಯುತ್ತಿರುವ ಕಾಂಗ್ರೆಸ್, ರಾಜಶೇಖರ ಹಿಟ್ನಾಳ ಅವರಿಗೆ ಎರಡನೇ ಬಾರಿ ಅವಕಾಶ ನೀಡಿದೆ.

    ಕ್ಷೇತ್ರದಲ್ಲಿ ಮೊದಲಿಂದಲೂ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಮುಂದುವರಿದ, ಹಿಂದುಳಿದ ಸಮುದಾಯದ ಅಭ್ಯರ್ಥಿಗಳೆಂಬ ಅಂಶ ಚುನಾವಣೆ ಮೇಲೆ ಪ್ರಭಾವ ಬೀರುತ್ತಿದ್ದು, ಈಗಲೂ ಮುಂದುವರಿದಿದೆ. ಪ್ರಧಾನಿ ಮೋದಿ ಅಲೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣ, ಕಳೆದ 10 ವರ್ಷದಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕೆಲಸಗಳು, ಕುಟುಂಬ ರಾಜಕಾರಣದ ಛಾಯೆಯಿಂದ ಹೊರ ಬಂದ ಅಂಶಗಳನ್ನಿಟ್ಟುಕೊಂಡು ಕಮಲಪಡೆ ಪ್ರಚಾರ ತಂತ್ರ ರೂಪಿಸಿದೆ. ಜೆಡಿಎಸ್ ಜತೆಗಿನ ಮೈತ್ರಿ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಬಿಜೆಪಿಗೆ ಪ್ಲಸ್ ಆಗಲಿದೆ.

    ಲೋಕಸಭಾ ಕ್ಷೇತ್ರದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಹಾಲಿ-ಮಾಜಿ ಶಾಸಕರಿಗೆ ಒಂದೊಂದು ಸ್ಥಾನ ಕೊಡಿಸುವ ಮೂಲಕ ಕೈ ನಾಯಕರು ವ್ಯವಸ್ಥಿತ ರಣತಂತ್ರ ಹೆಣೆಯುತ್ತಿದ್ದಾರೆ. ಹಿಟ್ನಾಳ ಕುಟುಂಬಕ್ಕೆ ಮೂರನೇ ಅವಧಿಗೆ ಟಿಕೆಟ್ ಲಭಿಸಿದ್ದು, ಗೆಲುವಿಗೆ ಶತಾಯಗತಾಯ ಯತ್ನಗಳು ನಡೆದಿವೆ. ಪ್ರಚಾರಕ್ಕೆ ಗ್ಯಾರಂಟಿ ಯೋಜನೆಗಳನ್ನೇ ಹೆಚ್ಚು ನೆಚ್ಚಿಕೊಂಡಂತಿದೆ. ಹಿಟ್ನಾಳ ಕುಟುಂಬದ ಸಾಂಪ್ರದಾಯಿಕ ಎದುರಾಳಿ ಕರಡಿ ಕುಟುಂಬ ಚುನಾವಣಾ ಕಣದಿಂದ ದೂರ ಉಳಿದಿದ್ದು, ಸ್ವತಃ ಸಂಗಣ್ಣ ಕರಡಿ ಸಂಸದ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಕಡೆ ವಾಲಿರುವುದು ಹಿಟ್ನಾಳಗೆ ಸಕಾರತ್ಮಕ ಅಂಶ.

    ಕ್ಷೇತ್ರದ ಇತಿಹಾಸ ಗಮನಿಸಿದಾಗ 17 ಚುನಾವಣೆಗಳಲ್ಲಿ ಲಿಂಗಾಯತ ಅಭ್ಯರ್ಥಿಗಳೇ ಹೆಚ್ಚು ಬಾರಿ ಗೆಲುವು ಕಂಡಿದ್ದಾರೆ. ಈವರೆಗೆ ಹಿಂದುಳಿದ ವರ್ಗದ ಇಬ್ಬರು ಮಾತ್ರ ವಿಜಯ ಸಾಧಿಸಿದ್ದಾರೆ.

    ಯುವ, ಮಹಿಳೆಯರೇ ನಿರ್ಣಾಯಕ: ಕ್ಷೇತ್ರದಲ್ಲಿ 18.58 ಲಕ್ಷ ಮತದಾರರಿದ್ದಾರೆ. ಲಿಂಗಾಯತ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಹಾಗೂ ಮುಂದುವರಿದ ಸಮುದಾಯದ ಮತಗಳನ್ನು ಬಿಜೆಪಿ ನೆಚ್ಚಿಕೊಂಡಿದೆ. ಹಿಂದುಳಿದ, ಪಜಾ, ಪಪಂ ಹಾಗೂ ಅಲ್ಪಸಂಖ್ಯಾತ ಮತಗಳು ಕೈ ಹಿಡಿವ ನಿರೀಕ್ಷೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಮಹಿಳಾ ಹಾಗೂ ಯುವ ಮತದಾರರು ಅಧಿಕವಾಗಿದ್ದು, ನಿರ್ಣಾಯಕ ಪಾತ್ರವಹಿಸಲಿದ್ದಾರೆ.

    ಉಭಯ ಪಕ್ಷಗಳಿಗೆ ಒಳೇಟಿನ ಭೀತಿ: ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ತಪ್ಪಿದ್ದು, ಅವರು ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಸಂಗಣ್ಣ ಬೆಂಬಲಿಗರು ಕಾಂಗ್ರೆಸ್ ಸೇರುತ್ತಿದ್ದು, ಕರಡಿ ಕೂಡ ಕೈ ಸೇರ್ಪಡೆಗೆ ಮುಂದಾಗಿದ್ದಾರೆ. ಇದರಿಂದ ಬಿಜೆಪಿಗೆ ನಷ್ಟ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್​ನಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸ್ವಪಕ್ಷದವರ ವಿರುದ್ಧವೇ ಸಮರ ಸಾರಿದ್ದು, ಸಿಎಂ ಸಿದ್ದರಾಮಯ್ಯ ಸಂಧಾನ ಬಳಿಕವೂ ಶಮನವಾಗಿಲ್ಲ. ಹೀಗಾಗಿ ಉಭಯ ಅಭ್ಯರ್ಥಿಗಳಿಗೆ ಒಳೇಟಿನ ಭೀತಿ ಶುರುವಾಗಿದೆ.

    ಡಾ.ಬಸವರಾಜ ಕ್ಯಾವಟರ್ ಪ್ಲಸ್-ಮೈನಸ್

    1. ಹೊಸ ಮುಖ, ಪ್ರಧಾನಿ ಮೋದಿ ಅಲೆ

    2. ಹಾಲಿ, ಮಾಜಿ ಶಾಸಕರು, ಮೂಲ ಬಿಜೆಪಿಗರ ಬೆಂಬಲ

    3. ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಷಯ

    4. ಟಿಕೆಟ್ ಬದಲಾವಣೆ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿರುವುದು

    5. ಸಾರ್ವಜನಿಕ ಕ್ಷೇತ್ರದಲ್ಲಿ ಅಪರಿಚಿತರು

    6. ಚುನಾವಣಾ ರಾಜಕೀಯ ಅನುಭವ ಕೊರತೆ

    ರಾಜಶೇಖರ ಹಿಟ್ನಾಳ ಪ್ಲಸ್-ಮೈನಸ್

    1. ಗ್ಯಾರಂಟಿ ಯೋಜನೆ, ಸಿಎಂ ಸಿದ್ದರಾಮಯ್ಯ ನಾಮಬಲ

    2. ಬಿಜೆಪಿಯಿಂದ ಹೊಸ ಮುಖ ಕಣಕ್ಕಿಳಿದಿರುವುದು

    3. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಬಲ

    4. ಹಿಟ್ನಾಳ ಕುಟುಂಬಕ್ಕೆ ಈ ಬಾರಿಯೂ ಟಿಕೆಟ್ ನೀಡಿರುವ ಬಗ್ಗೆ ಅಸಮಾಧಾನ

    5. ಮಾಜಿ ಸಚಿವ ಅನ್ಸಾರಿ ಮುನಿಸು ಮುಂದುವರಿಕೆ

    6. ಹಿಂದುಳಿದ ಸಮುದಾಯದವರು ಅಧಿಕ ಬಾರಿ ಗೆಲ್ಲದಿರುವುದು

    ಗ್ಯಾರಂಟಿ ಯೋಜನೆಗಳು ನಮಗೆ ಶ್ರೀರಕ್ಷೆಯಾಗಿದ್ದು, ಕ್ಷೇತ್ರದ ಎಲ್ಲ್ಲೆಡೆ ಕಾಂಗ್ರೆಸ್​ಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಬಿಜೆಪಿ ಹಾಗೂ ಇತರ ಪಕ್ಷದವರು ಕಾಂಗ್ರೆಸ್ ಸೇರುತ್ತಿದ್ದಾರೆ. ಅಭಿವೃದ್ಧಿಗಾಗಿ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ.

    | ರಾಜಶೇಖರ ಹಿಟ್ನಾಳ.  ಕಾಂಗ್ರೆಸ್ ಅಭ್ಯರ್ಥಿ

    ಕಳೆದ 10 ವರ್ಷದಲ್ಲಿ ದೇಶದಲ್ಲಿ ಹಾಗೂ ಕೊಪ್ಪಳ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕೆಲಸಗಳು, 3ನೇ ಅವಧಿಗೆ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂಬಅಂಶ ಇಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇವೆ. ಎಲ್ಲರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುವ ಭರವಸೆ ಇದೆ.

    | ಡಾ.ಬಸವರಾಜ ಕ್ಯಾವಟರ್,  ಬಿಜೆಪಿ ಅಭ್ಯರ್ಥಿ

    ಸಾವಿನಲ್ಲೂ ಸಾರ್ಥಕತೆ ಮೆರೆದ ದ್ವಾರಕೀಶ್

    ಮುಂಬೈ: ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts