More

    ನಾಲ್ಕನೇ ಅಲೆ ಭಯ ಬೇಡ, ಜಾಗೃತರಾಗಿರಿ: ಕೊಪ್ಪಳ ಡಿಸಿ ಎಂ.ಸುಂದರೇಶ ಬಾಬು ಮನವಿ

    ಕೊಪ್ಪಳ: ಜಿಲ್ಲೆಯಲ್ಲಿ ಸಂಭಾವ್ಯ ಕೋವಿಡ್ 4ನೇ ಅಲೆಯ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
    ಸಂಭಾವ್ಯ 4ನೇ ಅಲೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲೆಯ ಆಸ್ಪತ್ರೆಗಳಲ್ಲಿ ಕುಡಿವ ನೀರು, ಸ್ವಚ್ಛತೆ, ಊಟದ ವ್ಯವಸ್ಥೆ, ಬಿಸಿ ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಆಕ್ಸಿಜನ್ ಸಿಲಿಂಡರ್, ಡ್ಯೂರಾ, ಜಂಬೋ, ಸಣ್ಣ ಆಕ್ಸಿಜನ್ ಸಿಲಿಂಡರ್‌ಗಳು, ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್‌, ಆಕ್ಸಿಜನ್ ಉತ್ಪಾದಕಾ ಘಟಕಗಳನ್ನು ಪರಿಶೀಲಿಸಬೇಕು. ಬೆಡ್, ಔಷಧ, ಮಾಸ್ಕ್, ಪಿಪಿಇ ಕಿಟ್ ವ್ಯವಸ್ಥೆ ಜತೆಗೆ ವೆಂಟಿಲೇಟರ್ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿ, ವೈದ್ಯಾಧಿಕಾರಿಗಳನ್ನು ನಿಯೋಜಿಸಬೇಕು ಎಂದು ತಿಳಿಸಿದರು.
    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ ಮಾತನಾಡಿ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗೆ ಒಂದರಂತೆ 4 ಪಿಎಸ್‌ಎ ಪ್ಲಾಂಟ್‌ಗಳಿವೆ. ಜಿಲ್ಲಾಸ್ಪತ್ರೆಯಲ್ಲಿ ಒಂದು ಆರ್‌ಕೆಎಲ್‌ಎಂಒ ಟ್ಯಾಂಕಿದೆ. 11 ಡ್ಯೂರಾ ಸಿಲಿಂಡರ್, 513 ಜಂಬೋ, 204 ಸಣ್ಣ ಆಕ್ಸಿಜನ್ ಸಿಲಿಂಡರ್‌ಗಳು, 483 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳಿವೆ. ಚಿಕಿತ್ಸೆಗೆ ಅಗತ್ಯ ಔಷಧಗಳಿದ್ದು, ಹೆಚ್ಚಿನ ದಾಸ್ತಾನಿಗಾಗಿ ಇಂಡೆಂಟ್ ಕಳಿಸಲಾಗುವುದು. ನಿತ್ಯ 150 ಮಾದರಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 11,55,459 ಮೊದಲ ಡೋಸ್, 11,58,491 ಎರಡನೇ ಮತ್ತು 3,03,040 ಬೂಸ್ಟರ್ ಲಸಿಕೆ ನೀಡಲಾಗಿದೆ ಎಂದರು. ಜಿಪಂ ಸಿಇಒ ಫೌಜಿಯಾ ತರನ್ನುಮ್, ಎಡಿಸಿ ಸಾವಿತ್ರಿ ಕಡಿ, ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ, ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ ಇಟಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಈಶ್ವರ ಸವಡಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ರಮೇಶ ಮೂಲಿಮನಿ ಇತರರಿದ್ದರು.
    ಜಿಲ್ಲಾಡಳಿತ ಸಜ್ಜು: ಸಂಭಾವ್ಯ 4ನೇ ಅಲೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 1374 ಬೆಡ್‌ಗಳಿದ್ದು, 654 ಹಾಸಿಗೆಗಳಿಗೆ ಆಕ್ಸಿಜನ್ ಸೌಲಭ್ಯವಿದೆ. 173 ವೆಂಟಿಲೇಟರ್‌ಗಳಲ್ಲಿ ಮಕ್ಕಳಿಗಾಗಿ 35 ಕಾಯ್ದಿರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 427 ಬೆಡ್‌ಗಳಿದ್ದು, 293 ಆಕ್ಸಿಜನ್ ಸೌಲಭ್ಯ ಹೊಂದಿವೆ. 42 ವೆಂಟಿಲೇಟರ್‌ಗಳಿದ್ದು, ಚಿಕಿತ್ಸೆಗೆ ಯಾವುದೇ ಕೊರತೆ ಇಲ್ಲ. ಸಾರ್ವಜನಿಕರು ಕೋವಿಡ್‌ಗೆ ಭಯ ಪಡದೆ ಜಾಗೃತರಾಗಿರುವಂತೆ ಡಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
    ಹೊಸ ವರ್ಷಾಚರಣೆ ನಿಯಮ ಪಾಲಿಸಿ: ಕೊಪ್ಪಳ: ಹೊಸ ವರ್ಷ ಆಚರಣೆಗೆ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಅನುಸರಿಸುವಂತೆ ಎಸ್ಪಿ ಅರುಣಾಂಗ್ಷು ಗಿರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಧ್ಯರಾತ್ರಿ 1 ಗಂಟೆಯೊಳಗೆ ಆಚರಣೆ ಮುಗಿಸಬೇಕು. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸುರಕ್ಷತಾ ಕ್ರಮ ಅನುಸರಿಸಬೇಕು.ಯಾವುದೇ ಮಾದಕ ವಸ್ತುಗಳನ್ನು ಬಳಸುವಂತಿಲ್ಲ. ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗುವಂತಿಲ್ಲ. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಮಾಸ್ಕ್ ಧರಿಸಬೇಕು. ಹೋಟೆಲ್, ಕ್ಲಬ್, ರೆಸ್ಟೊರೆಂಟ್, ಹೊಂ ಸ್ಟೇಗಳಲ್ಲಿ ಸಾರ್ವಜನಿಕರಿಗೆ ಕೋವಿಡ್ ನಿಯಮ ಪಾಲನೆ ಸೂಚನಾ ಫಲಕ ಜತೆಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ವೃದ್ಧರು, ಗರ್ಭಿಣಿಯರು ಮತ್ತು ಮಕ್ಕಳು ಹೊಸ ವರ್ಷ ಆಚರಣೆಯಲ್ಲಿ ಭಾಗವಹಿಸುವುದರಿಂದ ದೂರ ಇರುವುದು ಉತ್ತಮ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts