More

    ಕೊಪ್ಪಳಕ್ಕೆ ಮತ್ತೊಂದು ಬೆಳೆ ಆಯ್ಕೆಗೆ ಯತ್ನ; ಸಚಿವ ಆರ್.ಶಂಕರ್ ಭರವಸೆ

    ಪೇರಲ ಬೆಳೆಗಾರರಿಗೆ ಕಾರ್ಯಾಗಾರ

    ಕೊಪ್ಪಳ: ಆತ್ಮ ನಿರ್ಭರ ಭಾರತದಡಿ ಒಂದು ಜಿಲ್ಲೆ, ಒಂದು ಬೆಳೆ ಯೋಜನೆಯನ್ವಯ ಕೊಪ್ಪಳಕ್ಕೆ ಪೇರಲ ಹಣ್ಣು ಆಯ್ಕೆ ಮಾಡಲಾಗಿದೆ. ಇನ್ನೊಂದು ಬೆಳೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದೆಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್.ಶಂಕರ್ ಹೇಳಿದರು.

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ತೋಟಗಾರಿಕೆ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪೇರಲ ಬೆಳೆಗಾರರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಪ್ರತಿ ಜಿಲ್ಲೆಗೆ ಒಂದೊಂದು ಬೆಳೆ ಆಯ್ಕೆ ಮಾಡಲಾಗಿದೆ. ಕೊಪ್ಪಳಕ್ಕೆ ಪೇರಲ ಆಯ್ಕೆ ಮಾಡಿದ್ದು, ಪೇರಲ ಬೆಳೆ ಹಾಗೂ ಅದರ ಉತ್ಪನ್ನಗಳನ್ನು ಪ್ರೋತ್ಸಾಹಿಸಲಾಗುವುದು. ರೈತರೊಂದಿಗೆ ಸಂವಾದ ನಡೆಸಿ, ಮಾಹಿತಿ ಪಡೆದುಕೊಳ್ಳುತಿದ್ದೇನೆ. ಕೊಪ್ಪಳದಲ್ಲಿ ಅನೇಕ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ತೋಟಗಾರಿಕೆ ಕ್ಷೇತ್ರ ವಿಸ್ತರಣೆಗೆ ಸಾಕಷ್ಟು ಅವಕಾಶಗಳಿವೆ. ಪೇರಲ ಹಣ್ಣಷ್ಟೆ ಅಲ್ಲದೆ, ಅದರ ಜ್ಯೂಸ್ ಸೇರಿ ಇತರ ಉಪ ಉತ್ಪನ್ನಗಳನ್ನು ತಯಾರಿಸಿ. ಇದಕ್ಕೆ ಸರ್ಕಾರ ನೆರವು ನೀಡಲಿದೆ. ಬಸಾಪುರ ಬಳಿ ಸಣ್ಣ ಕೈಗಾರಿಕೆ ಕ್ಲಸ್ಟರ್ ಇದ್ದು, ಅಲ್ಲಿಯೇ ಪೇರಲ ಸಂಸ್ಕರಣಾ ಘಟಕ, ಶೈತ್ಯಾಗಾರ, ಜ್ಯೂಸ್ ತಯಾರಿಕಾ ಕೇಂದ್ರಗಳನ್ನು ಆರಂಭಿಸಲು ಯೋಜಿಸುತ್ತಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಎಲ್ಲ ರೈತರು ಯೋಜನೆ ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದರು.

    ಜಿಲ್ಲಾ ತೋಟಗಾರಿಕೆ ಉಪ ನಿದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಜಿಲ್ಲೆಯಲ್ಲಿ 12 ತೋಟಗಾರಿಕೆ ಬೆಳೆಗಳಿವೆ. ಮೊದಲು ದಾಳಿಂಬೆ ಬೆಳೆಯುವಲ್ಲಿ ಕೊಪ್ಪಳ ಜಿಲ್ಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಸದ್ಯ 700 ಹೆಕ್ಟೇರ್ ಪ್ರದೇಶದಲ್ಲಿ ಪೇರಲ ಬೆಳೆಯಲಾಗುತ್ತಿದೆ. ಒಂದು ಜಿಲ್ಲೆ ಒಂದು ಬೆಳೆ ಯೋಜನೆಯನ್ವಯ ನಮ್ಮ ಜಿಲ್ಲೆಗೆ ಪೇರಲ ಆಯ್ಕೆಯಾಗಿದೆ. ಸದ್ಯ ಕೊಪ್ಪಳ ಪೇರಲ ಹೆಸರಿನ ಬ್ರ್ಯಾಂಡ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಅದರ ಮೌಲ್ಯವರ್ಧನೆ ಮಾಡಬೇಕು. ರೈತರು ಸಂಸ್ಕರಣಾ ಘಟಕ ಆರಂಭಿಸಬಹುದು. ಸರ್ಕಾರದಿಂದ 10 ಲಕ್ಷ ರೂ. ಧನಸಹಾಯ ನೀಡಲಾಗುವುದು. ಕಾರ್ಯಾಗಾರ ಬಳಿಕ ಪ್ರತಿ ವಾರ ಯೋಜನೆ ಬಗ್ಗೆ ಆಸಕ್ತ ರೈತರಿಗೆ ಮಾಹಿತಿ, ತರಬೇತಿ ನೀಡಲಾಗುವುದು ಎಂದರು.

    ಕಾರ್ಯಕ್ರಮದಲ್ಲಿ ಸಚಿವರು ರೈತರೊಂದಿಗೆ ಸಂವಾದ ನಡೆಸಿದರು. ತಾಂತ್ರಿಕತೆ ಬಗ್ಗೆ ವಿವಿಧ ವಿಜ್ಞಾನಿಗಳು ರೈತರೊಂದಿಗೆ ಮಾಹಿತಿ ಹಂಚಿಕೊಂಡರು. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಕೆಡಿಪಿ ಸದಸ್ಯ ಅಮರೇಶ ಕರಡಿ, ಕೃಷಿ ವಿವಿ ನಾಮನಿರ್ದೆಶಿತ ಸದಸ್ಯ ಎಂ.ಬಿ.ಪಾಟೀಲ್, ಡಿಸಿ ಎಸ್.ವಿಕಾಸ್ ಕಿಶೋರ್, ವೆಂಕಟೇಶ ಕೃಷ್ಣ, ಪುಷ್ಪಾ ಸೇರಿ ರೈತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts