More

    ಒಗ್ಗಟ್ಟಿನ ಮಂತ್ರ ಜಪಿಸಿದ ಎಂ.ಬಿ.ಪಾಟೀಲ್: ಲಿಂಗಾಯತರೆಲ್ಲ ಒಂದೇ, ಹೋರಾಟ ಮುಂದುವರಿಸೋಣ

    ಕೊಪ್ಪಳ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಆರಂಭಿಸುವ ಮೂಲಕ ಕಳೆದ ಚುನಾವಣೆಯಲ್ಲಿ ಪೆಟ್ಟು ತಿಂದಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಎಲ್ಲ ಲಿಂಗಾಯತ ಒಳ ಪಂಗಡಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

    ಸೋಮವಾರ ನಗರಕ್ಕೆ ಭೇಟಿ ನೀಡಿದ್ದ ಪಾಟೀಲ್, ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಹಾಗೂ ಎಲ್ಲ ಲಿಂಗಾಯತ ಒಳಪಂಗಡಗಳ ಮುಖಂಡರ ಸಭೆ ನಡೆಸಿ ಒಗ್ಗಟ್ಟಿನಿಂದ ಮುಂದೆ ಸಾಗೋಣ ಎಂಬ ಮಾತುಗಳನ್ನಾಡಿದ್ದಾರೆ. ವೀರಶೈವ ಮಹಾಸಭಾ ಹಾಗೂ ಲಿಂಗಾಯತ ಮಹಾಸಭಾ ಉದ್ದೇಶ ಒಂದೇ ಆಗಿದೆ. ಕಳೆದ ಬಾರಿ ನಾವು ವೀರಶೈವರನ್ನು ಅರ್ಥೈಸುವಲ್ಲಿ ಅಥವಾ ಅವರಿಗೆ ವಿಷಯವನ್ನು ಮನವರಿಕೆ ಮಾಡಿಕೊಡುವಲ್ಲಿ ಎಡವಿದ್ದೇವೆನ್ನಿಸುತ್ತಿದೆ. ಸದ್ಯ ಚುನಾವಣೆ ವರ್ಷವಾಗಿರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದು ಒಳಿತಲ್ಲ. ಮುಂದಿನ ದಿನಗಳಲ್ಲಿ ನಮ್ಮ ಪ್ರಯತ್ನ ಮುಂದುವರಿಸೋಣ. ಸಮಾಜಕ್ಕೆ ದೊರೆಯಬೇಕಾಗಿರುವ ಮೀಸಲಾತಿ ಸೌಲಭ್ಯ ಪಡೆಯೋಣ. ಪಂಚಪೀಠಾಧೀಶರು, ವಿರಕ್ತ ಮಠದವರು, ವೀರಶೈವರು, ಲಿಂಗಾಯತರು ಸೇರಿ ಎಲ್ಲರೂ ಒಗ್ಗೂಡಿಕೊಂಡು ಪ್ರತ್ಯೇಕ ಧರ್ಮಕ್ಕಾಗಿ ಹೋರಾಡೋಣ ಎಂಬ ಸಂದೇಶ ಸಾರಿದರು.

    ಪ್ರತ್ಯೇಕ ಧರ್ಮಕ್ಕೆ ನೀಡಬೇಕಾದ ಹೆಸರಿನ ಬಗ್ಗೆ ನಮ್ಮ ನಮ್ಮಲ್ಲೇ ಗೊಂದಲಗಳಿವೆ. ಯಾವುದು ಸರಿ? ಯಾವುದು ಸೂಕ್ತ ? ಯಾವ ಹೆಸರನ್ನು ನೀಡಬೇಕು, ಈ ಹಿಂದೆ ನೀಡಿದ ಹೆಸರುಗಳು ತಿರಸ್ಕಾರಗೊಂಡಿದ್ದು ಯಾಕೆ ಎಂಬುದನ್ನು ಕೂಲಂಕಷವಾಗಿ ಚರ್ಚಿಸಿ ಹೆಸರು ಅಂತಿಮಗೊಳಿಸೋಣ ಎಂದು ಮುಖಂಡರಲ್ಲಿ ಮನವಿ ಮಾಡಿದರು. ಲಿಂಗಾಯತರೆಲ್ಲ ಒಂದೇ. ಪಕ್ಷ ಬೇಧ ಮರೆತು ನಮ್ಮ ಹೋರಾಟ ಮುಂದುವರಿಸೋಣ ಎಂದು ಪದೇಪದೇ ಹೇಳುವ ಮೂಲಕ ಕಳೆದ ಬಾರಿಯಾದ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

    ನಿವೃತ್ತ ಶಿಕ್ಷಕ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿದರು. ಶಾಸಕ ಅಮರೇಗೌಡ ಬಯ್ಯಪುರ, ಮಾಜಿ ಸಂಸದ ಶಿವರಾಮೇಗೌಡ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ್, ಮುಖಂಡರಾದ ಬಸವರಾಜ ಮಳಿಮಠ, ರುದ್ರಮುನಿ ಗಾಳಿ, ದಾನಪ್ಪ ಶೆಟ್ಟರ್, ಗುರುರಾಜ ಹಲಿಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts