More

    ಹಾಲಪ್ಪ ಮನಬಂದಂತೆ ಮಾತನಾಡಬಾರದು – ಮಾಜಿ ಸಚಿವ ಬಸವರಾಜ ರಾಯರಡ್ಡಿ ಸಲಹೆ

    ಕೊಪ್ಪಳ: ಕೃಷ್ಣಾ ಮೇಲ್ದಂಡೆ ಯೋಜನೆ ಎರಡನೇ ಹಂತದ ಕಾಮಗಾರಿಗಳನ್ನು ಕೈಗೊಳ್ಳಲು ಕಾನೂನಾತ್ಮಕ ಅಡ್ಡಿಗಳಿವೆ. ನೀರು ಹಂಚಿಕೆ ಪ್ರಶ್ನಿಸಿ ಆಂಧ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೀಗಿರುವಾಗ ನೀರಾವರಿ ಮಾಡುತ್ತೇನೆಂದು ನಿತ್ಯ ಹೇಳಿಕೆ ನೀಡುತ್ತಿದ್ದಾರೆ. ಮಂತ್ರಿಯಾಗಿದ್ದುಕೊಂಡು ತಳಬುಡವಿಲ್ಲದೆ ಹೇಳಿಕೆ ನೀಡುವುದು ಸರಿಯಲ್ಲವೆಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಟೀಕಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀರಾವರಿ ಎಂಬುದು ಕೇವಲ ಒಬ್ಬ ಶಾಸಕ, ಮಂತ್ರಿ ಮಾಡುವ ಕೆಲಸವಲ್ಲ. ಸರ್ಕಾರ ಮಾಡಬೇಕು. ಕೃಷ್ಣಾ ನೀರಾವರಿ ಹಂಚಿಕೆಗೆ ಆಯೋಗ ರಚಿಸುವ ಹಂತದಿಂದ ಸರ್ವಪಕ್ಷ ನಿಯೋಗ ಕೊಂಡೊಯ್ದು ಕೇಂದ್ರ ಸರ್ಕಾರ ಒಪ್ಪಿಸುವವರೆಗೆ ಬಿಜೆಪಿ ವಿರೋಧಿಸುತ್ತಲೇ ಬಂದಿದೆ. ಬ್ರಿಜೀಶ್ ಕುಮಾರ್ ಆಯೋಗದಲ್ಲಿ 166 ಟಿಎಂಸಿ ನೀರು ಹಂಚಿಕೆಯಾದರೂ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಆಂಧ್ರ ಸರ್ಕಾರ ನೀರು ಹಂಚಿಕೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಮೊದಲು ಅರ್ಜಿ ವಜಾ ಆಗಬೇಕು. ಬಳಿಕ ಕೇಂದ್ರ ಸರ್ಕಾರ ನೀರು ಹಂಚಿಕೆ ಗೆಜೆಟ್ ಹೊರಡಿಸಿದ ಬಳಿಕ ಹಂಚಿಕೆಯಾದ ನೀರು ಬಳಸಲು ಅವಕಾಶವಿದೆ. ಇದಕ್ಕೆ ಆಲಮಟ್ಟಿ ಜಲಾಶಯವನ್ನು 5 ಮೀಟರ್ ಎತ್ತರಿಸಬೇಕು ಎಂದರು.

    2013ರಲ್ಲಿ ಕಲಾಲಬಂಡಿಯಲ್ಲಿ ಅಂದಿನ ಸಿಎಂ ಜಗದೀಶ ಶೆಟ್ಟರ್ ಯೋಜನೆಗೆ ಅಡಿಗಲ್ಲು ಹಾಕಿದರು. ಈ ಕಾರಣಗಳಿಗಾಗಿ ನಾನು ವಿರೋಧಿಸಿದೆ. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಅನುದಾನ ಬಿಡುಗಡೆ ಮಾಡಿ ಕೆಲಸ ಮಾಡಿದೆ. ನಂತರ 2018ರಲ್ಲಿ ಕೊಪ್ಪಳ ತಾಲೂಕಿನ 9 ಹಾಗೂ ಯಲಬುರ್ಗಾ ತಾಲೂಕಿನ 11 ಕೆರೆ ತುಂಬಿಸಲು 295 ಕೋಟಿ ರೂ. ಕಾಂಗ್ರೆಸ್ ಸರ್ಕಾರ ನೀಡಿದೆ. ಬಳಿಕ ವಿಜಯಪುರ, ಬಾಗಲಕೋಟೆ ಹಾಗೂ ಯಲಬುರ್ಗಾ, ಕುಷ್ಟಗಿ ತಾಲೂಕಿನ 77 ಕೆರೆ ತುಂಬಿಸಲು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಟೆಂಡರ್ ಕರೆಯಲಾಗಿದೆ. ಕಾಮಗಾರಿ ನಡೆಯುತ್ತಿದೆ. ಆದರೆ, ಎಲ್ಲವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಸಚಿವ ಹಾಲಪ್ಪ ಹೇಳುತ್ತಿದ್ದಾರೆ ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ್ ಮುಖಂಡರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು ಇತರರಿದ್ದರು.

    ಜಾತಿ ವಾದಿಯಲ್ಲ: ಹಿಜಾಬ್ ವಿಷಯವಾಗಿ ಕೋರ್ಟ್ ನೀಡಿದ ತೀರ್ಪು ಸ್ವಾಗತಿಸುತ್ತೇವೆ. ಜಾತ್ರೆ ಸೇರಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದು ಸಮುದಾಯ, ಧರ್ಮದವರಿಗೆ ನಿರ್ಬಂಧ ಸಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಜಾತಿವಾದಿಯಲ್ಲ. ಸಿಎಂ ಆಗಿರುವ ಕಾರಣ ಏನೂ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾತ್ಯತೀತ ನಿಲುವಿಗೆ ಬದ್ಧರಾಗಿದ್ದಲ್ಲಿ ರಾಜೀನಾಮೆ ನೀಡಿ ಹೊರಬರಲಿ ಎಂದು ರಾಯರಡ್ಡಿ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts