More

    ಲೋಕಲ್ ಫೈಟ್‌ಗೆ ಮುಹೂರ್ತ ನಿಗದಿ; ಕೊಪ್ಪಳ ಜಿಲ್ಲೆಯ 149 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ

    ಕೊಪ್ಪಳ: ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಜಿಲ್ಲೆಯ 149 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.

    ಜಿಲ್ಲೆಯ 153 ಗ್ರಾಪಂಗಳ ಪೈಕಿ, ಅವಧಿ ಮುಗಿದ 149 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಮೊದಲನೇ ಹಂತದಲ್ಲಿ ಕೊಪ್ಪಳ ತಾಲೂಕಿನ 38, ಯಲಬುರ್ಗಾ ತಾಲೂಕಿನ 20 ಮತ್ತು ಕುಕನೂರು ತಾಲೂಕಿನ 15 ಸೇರಿ 73 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಡಿ.7ಕ್ಕೆ ಮೊದಲ ಹಂತದ ಚುನಾವಣೆ ಹಾಗೂ ಡಿ.11ಕ್ಕೆ ಜಿಲ್ಲಾ ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದಾರೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನ. ಡಿ.12ರಂದು ನಾಮಪತ್ರ ಪರಿಶೀಲನೆ, ಡಿ.14 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನ ಅಗತ್ಯವಿದ್ದಲ್ಲಿ ಡಿ.22ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.

    ಎರಡನೇ ಹಂತದಲ್ಲಿ ಕುಷ್ಟಗಿ ತಾಲೂಕಿನ 36, ಕಾರಟಗಿ ತಾಲೂಕಿನ 11, ಕನಕಗಿರಿ ತಾಲೂಕಿನ 11, ಗಂಗಾವತಿ ತಾಲೂಕಿನ 18 ಸೇರಿ 76 ಗ್ರಾಪಂಗಳಿಗೆ ಚುನಾವಣೆ ನಡೆಯುವುದು. ದ್ವಿತೀಯ ಹಂತದಲ್ಲಿ ನಾಮಪತ್ರ ಸಲ್ಲಿಸಲು ಡಿ.16 ಕೊನೆಯ ದಿನ. ಡಿ.17ರಂದು ನಾಮಪತ್ರ ಪರಿಶೀಲನೆ, ಉಮೇದುವಾರಿಕೆ ಹಿಂಪಡೆಯಲು ಡಿ.19 ಕೊನೆಯ ದಿನ. ಡಿ.27ರಂದು ಮತದಾನ ನಡೆಯಲಿದೆ. ಎರಡೂ ಹಂತದ ಮತದಾನ ಪೂರ್ಣಗೊಂಡ ನಂತರ ಡಿ.30ರಂದು ಮತ ಎಣಿಕೆ ನಡೆಯಲಿದೆ.

    8,28,890 ಮತದಾರರು: ಜಿಲ್ಲೆಯ 7 ತಾಲೂಕುಗಳ 149 ಗ್ರಾಪಂಗಳಲ್ಲಿ 8,28,890 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಇವರಲ್ಲಿ 4,14,746 ಪುರುಷ, 4,14,121 ಮಹಿಳೆ ಮತ್ತು ಇತರ 23 ಮತದಾರರಿದ್ದಾರೆ.

    ಮಾರ್ಗಸೂಚಿ ಅನುಸರಿಸಲು ಸೂಚನೆ: ಕೋವಿಡ್-19 ಹಿನ್ನೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮಾರ್ಗಸೂಚಿ ರಚಿಸಿದ್ದು, ಕಡ್ಡಾಯವಾಗಿ ಪಾಲಿಸಲು ಸೂಚಿಸಿದೆ. ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ 1,000ಕ್ಕೆ ಮಿತಿಗೊಳಿಸಲಾಗಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸುವ ಮುನ್ನ ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತ ಚಲಾಯಿಸಬೇಕು. ಕರೊನಾ ಸೋಂಕಿತರು ಹಾಗೂ ಶಂಕಿತರು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸಂಬಂಧಿಸಿದ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts