More

    ನಡ್ಡಾ ಅಂಗಳಕ್ಕೆ ರೆಡ್ಡಿ ಚೆಂಡು !

    ವಿ.ಕೆ. ರವೀಂದ್ರ ಕೊಪ್ಪಳ

    ಕೊಪ್ಪಳ ಕ್ಷೇತ್ರದ ಟಿಕೆಟ್ ಗೊಂದಲ, ಪಕ್ಷ ಸಂಘಟನೆಯಲ್ಲಿನ ಲೋಪದೋಷಗಳ ನಡುವೆಯೇ ಮಾಜಿ ಸಚಿವ ಜನಾರ್ದನ ರೆಡ್ಡಿ ಜಿಲ್ಲೆ ಪ್ರವೇಶಿಸಿದ್ದು, ಬಿಜೆಪಿ ನಾಯಕರಲ್ಲಿ ತಳಮಳ ಹೆಚ್ಚಿಸಿದೆ. ಈ ವಿಷಯ ರಾಷ್ಟ್ರ ರಾಜಧಾನಿಗೂ ತಲುಪಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಡಿ.15ರಂದು ಜಿಲ್ಲೆಗೆ ಆಗಮಿಸುವ ಕಾರಣ ಉತ್ತರ ಕಂಡುಕೊಳ್ಳಲು ಕಮಲ ನಾಯಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

    ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಮಲ ಅರಳಿದ್ದು, ಕೆಲವೇ ತಿಂಗಳಲ್ಲಿ ಬರುವ ಚುನಾವಣೆಗೆ ಯಾರಿಗೆ ಟಿಕೆಟ್ ಎಂಬ ಚರ್ಚೆಗಳಷ್ಟೇ ಈವರೆಗೆ ಜನ್ಮ ತಳೆದಿದ್ದವು. ವಾರದ ಹಿಂದೆ ಹಿಂದುತ್ವ ಲಾಭ ಪಡೆಯಲೆಂದು ಅಚ್ಚುಕಟ್ಟಾಗಿ ನಡೆಸಿದ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮದಿಂದ ಜಿಲ್ಲೆಯ ರಾಜಕೀಯ ಚಿತ್ರಣವೇ ಬೆಳಗಾಗುವುದರಲ್ಲಿ ತಿರುವು ಮುರುವಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ನೆಲೆಯೂರಲು ಮುಂದಾಗಿದ್ದು, ರಾಜಕೀಯ ಪ್ರವೇಶದ ಮಾತನಾಡಿರುವುದು ಶಾಸಕ ಪರಣ್ಣ ಮುನವಳ್ಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರನ್ನು ಭೇಟಿ ಮಾಡಿದ್ದು, ಟಿಕೆಟ್ ವಿಷಯವಾಗಿ ಚರ್ಚಿಸಿದ್ದಾರೆನ್ನಲಾಗಿದೆ.

    ಮತ್ತೊಂದೆಡೆ ಜನಾರ್ದನ ರೆಡ್ಡಿ ಪರೋಕ್ಷವಾಗಿ ಚುನಾವಣೆಗೆ ಸ್ಪರ್ಧಿಸುವ ಗುಟ್ಟು ಬಿಟ್ಟು ಕೊಟ್ಟಿದ್ದರೂ ಬಿಜೆಪಿ ಬಿಟ್ಟು ತೆರಳುವುದಿಲ್ಲ ಎಂದಿದ್ದಾರೆ. ಹೊಸದಾಗಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ರಚನೆಗೆ ಆಪ್ತರನ್ನು ದೆಹಲಿಗೆ ಕಳಿಸಿದ್ದು, ತನ್ನನ್ನು ನಿರ್ಲಕ್ಷಿಸಿರುವ ಬಿಜೆಪಿಗೆ ಸೆಡ್ಡು ಹೊಡೆಯಲು ಅಖಾಡ ರಚಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರೆಡ್ಡಿ ಮಾಸ್ಟರ್ ಪ್ಲಾೃನ್ ಏನೆಂಬುದು ಊಹೆಗೆ ನಿಲುಕದಂತಾಗಿದ್ದು, ಎಲ್ಲರನ್ನು ಅಡಕತ್ತರಿಗೆ ಸಿಲುಕಿಸಿದೆ. ಗೊಂದಲಗಳಿಗೆ ಉತ್ತರಿಸಬೇಕಾದ ರಾಜ್ಯ, ರಾಷ್ಟ್ರೀಯ ಬಿಜೆಪಿ ಹೈಕಮಾಂಡ್ ಮೌನವಹಿಸಿದೆ. ಇದರಿಂದ ಜಿಲ್ಲೆಯ ನಾಯಕರ ಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದ್ದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

    ಇದೆಲ್ಲ ಬೆಳವಣಿಗೆಗಳ ನಡುವೆಯೇ ರಾಜ್ಯ ವಿಧಾಸಭೆ ಚುನಾವಣೆ ದೃಷ್ಟಿಯಿಂದ ಸಂಘಟನೆ ಬಲಗೊಳಿಸಲು ಬಿಜೆಪಿ ನಿರ್ಧರಿಸಿದೆ. 34 ರಾಜಕೀಯ ಜಿಲ್ಲೆಗಳಲ್ಲಿ ಪಕ್ಷದ ಸ್ವಂತ ಕಚೇರಿ ಆರಂಭಕ್ಕೆ ಶುಭ ಮುಹೂರ್ತ ನಿಗದಿಗೊಳಿಸಿದೆ. ಆರಂಭಿಕವಾಗಿ ಡಿ.15ರಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ 10 ಜಿಲ್ಲೆಗಳಲ್ಲಿ ಜಿಲ್ಲಾ ಕಚೇರಿಗಳಿಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಈ ಮೊದಲು ಬಾಗಲಕೋಟೆಯಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು. ಸದ್ಯ ಬದಲಾವಣೆಯಾಗಿದ್ದು, ಕೊಪ್ಪಳದಿಂದಲೇ ವರ್ಚುವಲ್ ವೇದಿಕೆ ಮೂಲಕ ಎಲ್ಲ ಜಿಲ್ಲಾ ಕಚೇರಿಗಳಿಗೆ ನಡ್ಡಾ ಚಾಲನೆ ನೀಡಲಿದ್ದಾರೆ. ಹೀಗಾಗಿ ಜಿಲ್ಲೆಯ ಕಮಲ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ರೆಡ್ಡಿ ಬಗ್ಗೆ ಪಕ್ಷದ ನಿಲುವು ಹಾಗೂ ತಮ್ಮ ಮುಂದಿನ ಟಿಕೆಟ್ ಭವಿಷ್ಯದ ಬಗ್ಗೆ ಉತ್ತರ ಕಂಡುಕೊಳ್ಳಲು ದಿನಗಣನೆ ಆರಂಭಿಸಿದ್ದಾರೆ.

    ಟಿಕೆಟ್ ಆಕಾಂಕ್ಷಿಗಳ ಟೆನ್ಶನ್: ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಯಾರೆಂಬುದು ಸ್ವತಃ ಪಕ್ಷದ ಪದಾಧಿಕಾರಿಗಳಲ್ಲೇ ಗೊಂದಲವಿದೆ. ಸಂಸದ ಸಂಗಣ್ಣ ಕರಡಿ, ಸಿ.ವಿ.ಚಂದ್ರಶೇಖರ್ ಆದಿಯಾಗಿ ಹಲವರ ಹೆಸರುಗಳು ಚರ್ಚೆಯಲ್ಲಿವೆ. ಇನ್ನೆರಡು ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾವಣೆ ಕೂಗು ಸಂಘ ಪರಿವಾರ ಹಾಗೂ ಪಕ್ಷದ ಕಾರ್ಯಕರ್ತರಿಂದ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಆಕಾಂಕ್ಷಿಗಳ ಪಟ್ಟಿಯೂ ದಿನ ಕಳೆದಂತೆ ಉದ್ದವಾಗುತ್ತಿದ್ದು, ಅಭ್ಯರ್ಥಿ ಯಾರೆಂದು ಕಾರ್ಯಕರ್ತರು ಗೊಂದಲಕ್ಕೆ ಸಿಲುಕುವಂತಾಗಿದೆ. ನಡ್ಡಾ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಆಕಾಂಕ್ಷಿಗಳು ಭವಿಷ್ಯದ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳಲು ವೇದಿಕೆ ಕಲ್ಪಿಸಿದಂತಾಗಿದೆ.

    ನಡೆಯುವುದೇ ಅಚ್ಚರಿ ?: ರಾಜಕೀಯದಲ್ಲಿ ಹಲವು ಅಚ್ಚರಿ ಪ್ರಯೋಗಗಳಿಗೆ ಹೆಸರಾಗಿರುವ ಬಿಜೆಪಿ ಹೈಕಮಾಂಡ್ ಜಿಲ್ಲೆಯ ರಾಜಕಾರಣದಲ್ಲೂ ಭವಿಷ್ಯದ ದೃಷ್ಟಿಯಿಂದ ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆ ಇದೆ. ಬಿಜೆಪಿ ಟಿಕೆಟ್‌ಗೆ ಬೇಡಿಕೆ ಇಟ್ಟಿರುವ ಸಂಸದ ಸಂಗಣ್ಣ ಕರಡಿ, ಪಂಚಮಸಾಲಿ 2ಎ ಬೇಡಿಕೆಗೂ ಬೆಂಬಲವಾಗಿದ್ದಾರೆ. ಎರಡನ್ನೂ ಸುಖಾಂತ್ಯಗೊಳಿಸಲು ಕಮಲ ಹೈಕಮಾಂಡ್ ಯೋಜಿಸಿದ್ದು, ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಸಂಗಣ್ಣ ಕರಡಿಗೆ ಕೇಂದ್ರ ಖಾತೆಯೊಂದರ ರಾಜ್ಯ ಸಚಿವ ಸ್ಥಾನ ನೀಡಲಿದ್ದು, ಹೊಸದೊಂದು ಸಂದೇಶ ರವಾನೆಗೆ ವೇದಿಕೆ ಬಳಕೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಈ ಬಗ್ಗೆ ಕಾರ್ಯಕರ್ತರಿಗೆ ಸೂಚನೆಯೊಂದನ್ನು ನೀಡಿದ್ದು, ಎಷ್ಟು ಕಾರ್ಯಸಾಧು ಎಂಬ ಕುತೂಹಲ ಸೃಷ್ಟಿಸಿದೆ.

    ಸಂಘಟನೆಯೂ ಅಷ್ಟಕ್ಕಷ್ಟೆ: ಇನ್ನು ಕಾರ್ಯಕರ್ತರ ಪಕ್ಷವೆಂದು ಹೇಳಿಕೊಳ್ಳುವ ಜಿಲ್ಲಾ ಬಿಜೆಪಿಯಲ್ಲಿ ಕಾರ್ಯಕರ್ತರೇ ನಾಯಕರ ನಡೆ ಕಂಡು ಗೋಜಿಗೆ ಸಿಲುಕಿದ್ದಾರೆ. ರಾಜ್ಯ, ರಾಷ್ಟ್ರೀಯ ನಾಯಕರಿಂದ ಬರುವ ಸೂಚನೆ ಪಾಲಿಸುವುದು ಬಿಟ್ಟರೆ ನಾಯಕರು, ಪ್ರಮುಖ ಪದಾಧಿಕಾರಿಗಳ ಪೈಕಿ ಕೆಲವರು ಹೆಚ್ಚಾಗಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತಿಲ್ಲ. ವಿಪಕ್ಷಗಳ ಟೀಕೆಗೆ ಉತ್ತರ ಕೊಡುವ ಬದಲು ಕೆಲವರು ಅವರೊಂದಿಗೆ ಹೊಂದಾಣಿಕೆ ರಾಜಕೀಯ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಪಕ್ಷದಲ್ಲೇ ಇರುವ ನಾಯಕರ ಪರಸ್ಪರ ಮುನಿಸಿನ ನೇರ ಪರಿಣಾಮ ಪಕ್ಷ ಹಾಗೂ ಕಾರ್ಯಕರ್ತರ ಮೇಲಾಗುತ್ತಿದೆ. ನಡ್ಡಾ ಭೇಟಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವುದಾ? ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts