More

    ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ, ಕೈ ಜೋಡಿಸಿದ ಕಾಂಗ್ರೆಸ್ 

    ಕೊಪ್ಪಳ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರೈತರು, ಕನ್ನಡ, ಕಾರ್ಮಿಕ ಪರ ಸಂಘಟನೆಗಳು, ಆಮ್ ಆದ್ಮಿ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿರುವುದನ್ನು ವಿರೋಧಿಸಿ 10 ತಿಂಗಳಿನಿಂದ ಪ್ರತಿಭಟನೆ ನಡೆಸಿದರೂ, ಕೇಂದ್ರ ಸರ್ಕಾರ ಮೊಂಡುತನ ಬಿಡುತ್ತಿಲ್ಲ. ಯಾವುದೇ ಕ್ಷೇತ್ರ ನಶಿಸಿದರೂ ಬದುಕಬಹುದು. ಆದರೆ, ಕೃಷಿರಂಗ ಅಪಾಯಕ್ಕೆ ಸಿಲುಕಿದರೆ, ದೇಶವೇ ನಾಶವಾಗಲಿದೆ. ಇದನ್ನು ಪ್ರತಿಯೊಬ್ಬ ಭಾರತೀಯರು ಅರ್ಥ ಮಾಡಿಕೊಳ್ಳಬೇಕು. ಕೃಷಿಕರು ದೇಶದ ಬೆನ್ನೆಲುಬು ಆದರೆ ಬಿಜೆಪಿಗೆ ಕಾರ್ಪೋರೇಟ್ ಕಂಪನಿಗಳೇ ಬೆನ್ನೆಲುಬಾಗಿವೆ. ಈಗಾಗಲೇ ಸಾರ್ವನಿಕ ಆಸ್ತಿ ಮಾರಾಟ ಮಾಡಿದ್ದು, ಇದೀಗ ಕೃಷಿ ಭೂಮಿ ಮಾರಾಟ ಮಾಡಲು ಮುಂದಾಗಿದ್ದಾರೆ. ಅನ್ನ ಬೆಳೆದ ರೈತರನ್ನೇ ಜೀತಕ್ಕೆ ತಳ್ಳುವ ಹುನ್ನಾರ, ಮೂರು ಕರಾಳ ಕಾನೂನುಗಳಲ್ಲಿ ಅಡಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

    ನಗರದ ಬಸ್ ನಿಲ್ದಾಣ, ಅಶೋಕ ವೃತ್ತ, ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆದವು. ತಲೆ ಮೇಲೆ ಇಟ್ಟಿಗೆ ಹೊತ್ತು, ಎಮ್ಮೆ ಮೆರವಣಿಗೆ ಮಾಡುವ ಮೂಲಕ ಸಿಟ್ಟು ಪ್ರದರ್ಶಿಸಿದರು. ಗಂಜ್ ವೃತ್ತದಲ್ಲಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನೆಗೆ ಅಡ್ಡಿಪಡಿಸುತ್ತಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಇನ್ಸ್‌ಪೆಕ್ಟರ್ ಮಾರುತಿ ಗುಳ್ಳಾರಿ, ಸಿಪಿಐ ವಿಶ್ವನಾಥ ಹಿರೇಗೌಡರ್ ಪರಿಸ್ಥಿತಿ ನಿಭಾಯಿಸಿದರು.

    ಕೆಲವು ಅಂಗಡಿಗಳು ತೆರದಿದ್ದು ಕಂಡುಬಂತು. ಸಾರಿಗೆ ಸಂಚಾರ ಎಂದಿನಂತೆ ಇತ್ತು. ಮಧ್ಯಾಹ್ನದ ನಂತರ ಜನ ಜೀವನ ಯಥಾಸ್ಥಿತಿಗೆ ಬಂತು. ರೈತ ಮುಖಂಡರಾದ ನಜೀರ್‌ಸಾಬ್ ಮೂಲಿಮನಿ, ಭೀಮಸೇನ ಕಲಿಕೇರಿ, ಹನುಮಂತಪ್ಪ ಹೊಳೆಯಾಚೆ, ಇಸ್ಮಾಯಿಲ್ ನಾಲಬಂದ್, ಹೋರಾಟಗಾರರಾದ ಡಿ.ಎಚ್.ಪೂಜಾರ, ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ್, ಸುಂಕಪ್ಪ ಗದಗ, ಕಾಂಗ್ರೆಸ್ ಮುಖಂಡರಾದ ರಾಜಶೇಖರ್ ಹಿಟ್ನಾಳ್, ವಿಶ್ವನಾಥ ರಾಜು, ರುದ್ರೇಶ ಡ್ಯಾಗಿ, ರಮೇಶ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts