More

    ಅರಬ್ಬಿ ಸಮುದ್ರದ ನಡುವೆ ಇರುವ ದ್ವೀಪ ಕೂರ್ಮಗಡದಲ್ಲಿ ಜಾತ್ರಾ ಮಹೋತ್ಸವ

    ಕಾರವಾರ: ಅರಬ್ಬಿ ಸಮುದ್ರದ ನಡುವೆ ಇರುವ ದ್ವೀಪ ಕೂರ್ಮಗಡ ನೃಸಿಂಹ ದೇವರ ಜಾತ್ರಾ ಮಹೋತ್ಸವ ಶುಕ್ರವಾರ ಸುಸೂತ್ರವಾಗಿ, ಶ್ರದ್ಧಾ ಭಕ್ತಿಯಿಂದ ಜರುಗಿತು. ಆದರೆ, ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

    ಬೆಳಗ್ಗೆ ಕಡವಾಡದಿಂದ ನೃಸಿಂಹ ದೇವರನ್ನು ಪಲ್ಲಕ್ಕಿಯಲ್ಲಿ ಕರೆತಂದು ಕೋಡಿಬಾಗದಿಂದ ಅಲಂಕೃತ ದೋಣಿಯಲ್ಲಿ ಕೂರ್ಮಗಡಕ್ಕೆ ಕರೆದೊಯ್ಯಲಾಯಿತು. ನಂತರ ದೇವರನ್ನು ಪೀಠದ ಮೇಲೆ ಕೂಡ್ರಿಸಿ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಭಕ್ತರು ದೇವರ ದರ್ಶನ ಪಡೆದು, ಹಣ್ಣು ಕಾಯಿ ಮಾಡಿಸಿ, ಬಾಳೆ ಹಣ್ಣಿನ ಕೊನೆಗಳನ್ನು ಹರಕೆಯಾಗಿ ಒಪ್ಪಿಸಿದರು. ಸ್ಥಳದಲ್ಲೇ ಬಾಳೆಗೊನೆಗಳ ಲಿಲಾವು ನೆರವೇರಿತು.ಕಡವಾಡ ಭಾಗದ ಯುವಕರು ಮುಂದೆ ನಿಂತು ಈ ಎಲ್ಲ ಕಾರ್ಯ ನೆರವೇರಿಸಿದರು. ಶಾಸಕಿ ರೂಪಾಲಿ ನಾಯ್ಕ ತೆರಳಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

    ಭಾರಿ ಭದ್ರತೆ: 2019 ರ ಜ.21 ರಂದು ಜಾತ್ರೆಗೆ ತೆರಳಿ ವಾಪಸಾಗುತ್ತಿದ್ದ ಬೋಟ್ ಮಗುಚಿ ಬಿದ್ದ ಪರಿಣಾಮ 16 ಭಕ್ತರು ಸಮುದ್ರ ಪಾಲಾಗಿದ್ದರು. ಇನ್ನು 18 ಜನ ಸಾವನ್ನು ಅತಿ ಹತ್ತಿರದಿಂದ ಕಂಡು ಬಚಾವಾಗಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ಈ ವರ್ಷ ಬಿಗಿ ಭದ್ರತೆ ಆಯೋಜಿಸಲಾಗಿತ್ತು. ಬೈತಖೋಲ್​ನಿಂದ ಒಟ್ಟು 43 ಬೋಟ್​ಗಳಿಗೆ ಮಾತ್ರ ಜನರನ್ನು ಕೊಂಡೊಯ್ಯಲು ಪರವಾನಗಿ ನೀಡಲಾಗಿತ್ತು. ಎಲ್ಲರಿಗೂ ಲೈಫ್ ಜಾಕೆಟ್ ತೊಡಿಸಿ ದೋಣಿಯಲ್ಲಿ ಕರೆದೊಯ್ಯಲಾಯಿತು. ಬೈತಖೋಲ್ ಜಟ್ಟಿ ಹಾಗೂ ಕೂರ್ಮಗಡ ದ್ವೀಪ ಸೇರಿ ವಿವಿಧೆಡೆ 200 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಲೈಫ್ ಜಾಕೆಟ್ ಹಾಕದವರು ದೋಣಿಯಲ್ಲಿ ತೆರಳದಂತೆ ನೋಡಿಕೊಳ್ಳಲಾಯಿತು.

    ರಕ್ಷಣೆಯ ಜವಾಬ್ದಾರಿ ಹೊತ್ತ ಮೀನುಗಾರರು: ಮೀನುಗಾರ ಯುವಕರು ಹಾಗೂ ಮುಖಂಡರು, ಮುಂದೆ ನಿಂತು ಜನರನ್ನು ತಮ್ಮ ದೋಣಿಗಳಲ್ಲಿ ಉಚಿತವಾಗಿ ಕೂರ್ಮಗಡಕ್ಕೆ ಕರೆದೊಯ್ದು, ಕರೆತರುವ ಜವಾಬ್ದಾರಿ ವಹಿಸಿಕೊಂಡರು. ತಮಗಿಲ್ಲದಿದ್ದರೂ ಪ್ರವಾಸಿಗರಿಗೆ ಲೈಫ್ ಜಾಕೆಟ್ ನೀಡಿ ಸುರಕ್ಷತೆ ಬಗ್ಗೆ ಗಮನ ನೀಡಿದರು.

    ದೋಣಿಗಾಗಿ ನೂಕು ನುಗ್ಗಲು: ಕೂರ್ಮಗಡದಿಂದ ಮರಳುವಾಗ ಬೋಟ್ ಹತ್ತಲು ಜನರ ನೂಕು ನುಗ್ಗಲು ಉಂಟಾಯಿತು. ಲೈಫ್ ಜಾಕೆಟ್​ಗಳ ಸಂಖ್ಯೆ ಕಡಿಮೆ ಇದ್ದುದರಿಂದ ಜನ ಸ್ವಲ್ಪ ಕಾಯುವಂತಾಯಿತು. ದ್ವೀಪದಿಂದ 100 ಮೀಟರ್ ಆಚೆ ಬೋಟ್​ಗಳು ನಿಲ್ಲುತ್ತಿದ್ದವು. ಅದನ್ನು ಹತ್ತಲು ಸಣ್ಣ ದೋಣಿ ಅಥವಾ ಡಿಂಗಿ ಬಳಸಬೇಕಾಗಿತ್ತು. ಜನರನ್ನು ಕರೆದೊಯ್ಯಲು ಒಂದು ಡಿಂಗಿ ದಡಕ್ಕೆ ಬಂತು ಎಂದರೆ 20 ಕ್ಕೂ ಹೆಚ್ಚು ಜನರು ನುಗ್ಗಿ ಕುಳಿತುಕೊಳ್ಳುತ್ತಿದ್ದರು. ಪೊಲೀಸರು ಲೈಫ್ ಜಾಕೆಟ್ ಹಾಕದವರನ್ನು ಕಡ್ಡಾಯವಾಗಿ ಇಳಿಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಭಕ್ತರ ನಡುವೆ ವಾಗ್ವಾದಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts