More

    ಕೊಂಕಣ ರೈಲ್ವೆಗೆ ಬಂತು ಆರ್-260 ಹಳಿ!

    ವೇಣುವಿನೋದ್ ಕೆ.ಎಸ್ ಮಂಗಳೂರು
    ರೈಲು ಹಳಿಗಳ ಸುಧಾರಣೆಗೆ ಭಾರತೀಯ ರೈಲ್ವೇ ಮುಂದಾಗಿದ್ದು, ಅದರ ಅಂಗವಾಗಿ ಕೊಂಕಣ ರೈಲ್ವೆ ಮಂಗಳೂರಿನ ತೋಕೂರಿನಿಂದ ಉಡುಪಿವರೆಗೆ ಉತ್ಕೃಷ್ಟ ದರ್ಜೆಯ ಆರ್-260 ರೈಲ್ ಪ್ಯಾನಲ್ ಹಳಿಗಳನ್ನು ಅಳವಡಿಸುವ ಯೋಜನೆ ಕೈಗೆತ್ತಿಕೊಂಡಿದೆ.

    ಈಗಾಗಲೇ ಈ ವಿಶೇಷ ಹಳಿಗಳನ್ನು ರೈಲ್ವೇ ಹಳಿಗಳ ಪಕ್ಕದಲ್ಲೇ ಇಳಿಸಲಾಗಿದೆ. ಆಯ್ದ ಕಡೆಗಳಲ್ಲಿ ನೂತನ ಕಾಂಕ್ರೀಟ್ ಸ್ಲೀಪರ್‌ಗಳನ್ನೂ ಪೇರಿಸಿಡಲಾಗಿದೆ. ಅದರ ಅಳವಡಿಕೆ ನಡೆಯಬೇಕಿದ್ದು ರೈಲ್ವೆ ಮಂಡಳಿಯ ಅನುಮತಿಗಾಗಿ ಕಾಯಲಾಗುತ್ತಿದೆ. 15 ಕೋಟಿ ರೂ. ವೆಚ್ಚದಲ್ಲಿ ಈ ಭಾಗದ ಟ್ರಾಕ್ ಸುಧಾರಣೆ ನಡೆಸಲಾಗುವುದು. ಪುಣೆಯ ಸಿ.ಡಿ.ಗುಪ್ತಾ ಕಂಪನಿಗೆ ಈ ಕಾಮಗಾರಿ ಗುತ್ತಿಗೆ ನೀಡಲಾಗಿದೆ.

    ಆರ್-260 ಎನ್ನುವುದು ವರ್ಷದ ಹಿಂದೆಯಷ್ಟೇ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ-ಸೈಲ್ ಕಂಪನಿ ಅಭಿವೃದ್ಧಿಪಡಿಸಿರುವ ವೆನೇಡಿಯಂ ಅಲಾಯ್ ಮಿಶ್ರಿತ ರೈಲ್ವೇ ಪ್ಯಾನಲ್ ಅಥವಾ ಹಳಿಯ ಹೆಸರು. ಇಂತಹ ಒಂದು ಹಳಿ 260 ಮೀಟರ್ ಉದ್ದ ಬರುತ್ತದೆ. ಅದಕ್ಕಾಗಿ ಆರ್-260 ಎಂಬ ಹೆಸರು ಇರಿಸಿದ್ದಾರೆ. ಸೈಲ್‌ನ ಭಿಲಾಯ್ ಸ್ಥಾವರದಲ್ಲಿ ಈ ರೀತಿಯ ಹಳಿ ಉತ್ಪಾದಿಸಿ ಭಾರತೀಯ ರೈಲ್ವೆಗೆ ಹಸ್ತಾಂತರಿಸಲಾಗುತ್ತದೆ.

    ಸುರಕ್ಷತೆಗೆ ಒತ್ತು: ಹೊಸ ಮಾದರಿಯ ರೈಲು ಹಳಿ ಅಳವಡಿಕೆಯಿಂದಾಗಿ ರೈಲು ಸಂಚಾರದಲ್ಲಿ ಸುರಕ್ಷತೆ ಹೆಚ್ಚಲಿದೆ. ರೈಲಿನ ಆಕ್ಸಿಲ್ ಲೋಡ್ ಸಾಮರ್ಥ್ಯವೂ ಪ್ರತಿ ಮೀಟರ್‌ಗೆ 52 ಕೆ.ಜಿಯಿಂದ 60 ಕೆ.ಜಿಗೆ ಏರಿಕೆಯಾಗಲಿದೆ ಎನ್ನುತ್ತಾರೆ ರೈಲ್ವೆ ಇಂಜಿನಿಯರುಗಳು. ಭಾರತೀಯ ರೈಲ್ವೆಯ ಹಳಿ ಸುಧಾರಣಾ ಕಾರ್ಯಕ್ರಮದಲ್ಲಿ ಪ್ಯಾನಲ್ ಬದಲಾವಣೆ ಪ್ರಮುಖ ಅಂಗ. ಹಳೆಯ ಪ್ಯಾನಲ್ 30 ಮೀಟರ್ ಇರುತ್ತಿತ್ತು, ಅವುಗಳನ್ನು ವೆಲ್ಡಿಂಗ್ ಮಾಡಿ ಜೋಡಿಸಿ ಅಳವಡಿಸುತ್ತಿದ್ದರು. ಹಾಗಾಗಿ ರೈಲು ಚಲಿಸುವಾಗ ಖಡಕ್ ಖಡಕ್ ಎಂಬ ಶಬ್ದ ಬರುತ್ತಿತ್ತು. ಈ ಹೊಸ ಪ್ಯಾನಲ್ ಅಳವಡಿಸಿದರೆ ಆ ರೀತಿಯ ಜರ್ಕ್ ಮತ್ತು ಶಬ್ದ ಇರುವುದಿಲ್ಲ.

    ಅಳವಡಿಕೆ ಹೇಗೆ?: ಪ್ರಸ್ತುತ ಈ ಕಾಮಗಾರಿ ಇನ್ನು ಒಂದೆರಡು ವಾರಗಳಲ್ಲಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ರೈಲು ಸಂಚರಿಸುವ ಹಳಿಗಳನ್ನೇ ತೆಗೆದು, ಹೊಸ ಹಳಿ, ಸ್ಲೀಪರ್ ಅಳವಡಿಸಲಾಗುವುದು. ಇದಕ್ಕಾಗಿ ಪ್ರತಿ ದಿನವೂ ವೇಳಾಪಟ್ಟಿ ನಿಗದಿಪಡಿಸಲಾಗುವುದು. ಪ್ರತಿದಿನ ಕನಿಷ್ಠ 3 ಗಂಟೆ ಕಾಲ ಹಳಿ ಬದಲಾವಣೆಗಾಗಿ ರೈಲು ಸಂಚಾರ ತಡೆಹಿಡಿಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರ್-260 ಹಳಿಗಳ ಅಳವಡಿಕೆ ಕಾರ್ಯ ಶೀಘ್ರ ಶುರುವಾಗಲಿದೆ. ಇದರಿಂದ ರೈಲಿನ ಸುರಕ್ಷತೆ ಹೆಚ್ಚಲಿದೆ. ಸದ್ಯ ತೋಕೂರು- ಉಡುಪಿ ಮಧ್ಯೆ ನಡೆಯಲಿದ್ದು, ಹಂತ ಹಂತವಾಗಿ ಇತರ ಕಡೆಗೂ ವಿಸ್ತರಣೆ ಮಾಡಲಾಗುವುದು. ನಾವು ಈಗಾಗಲೇ 100 ಕಿ.ಮೀ.ಗೆ ಆಗುವಷ್ಟು ಹಳಿ ಖರೀದಿಸಿದ್ದೇವೆ.
    ಬಾಳಾಸಾಹೇಬ್ ನಿಕಂ ಆರ್‌ಆರ್‌ಎಂ, ಕೊಂಕಣ ರೈಲ್ವೆ, ಕಾರವಾರ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts