More

    ಕೊಲ್ಲೂರು ಕ್ಷೇತ್ರ ನವರಾತ್ರಿ ಮಹೋತ್ಸವ

    ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವ ಅ.17 ರಿಂದ ಅ.25 ರವರೆಗೆ ನಡೆಯಲಿದೆ. 24ರಂದು ಸೋಮವಾರ ಮಹಾ ನವಮಿಯ ಪ್ರಯುಕ್ತ ಬೆಳಗ್ಗೆ 11.30 ಕ್ಕೆ ಚಂಡಿಕಾಯಾಗ ಹಾಗೂ ರಾತ್ರಿ 10.30ಕ್ಕೆ ರಥೋತ್ಸವ ಜರುಗಲಿದೆ.

    25ರಂದು ವಿಜಯದಶಮಿಯ ಪ್ರಯುಕ್ತ ಬೆಳಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಶ್ರೀ ಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ. ನವರಾತ್ರಿಯ ಉತ್ಸವ ಆಚರಣೆಯ ದಿನಗಳಲ್ಲಿ ದೇಶದ ವಿವಿಧ ಭಾಗದ ಕಲಾ ತಂಡಗಳಿಂದ ದೇವಳದ ಸ್ವರ್ಣಮುಖಿ ರಂಗಮಂದಿರದಲ್ಲಿ ಸೇವಾರೂಪವಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಬಾರಿ ಅವಕಾಶ ನೀಡಿಲ್ಲ.

    ನವರಾತ್ರಿ ಪ್ರಾರಂಭದ ದಿನದಿಂದ 8ನೇ ದಿನದ ವರೆಗೆ ಶ್ರೀ ಮೂಕಾಂಬಿಕಾ ದೇವಿಗೆ ಯೋಗಾನಿದ್ರಾ ದುರ್ಗಾ, ದೇವಜಾತಾ ದುರ್ಗಾ, ಮಹಿಷಾಸುರಮರ್ದಿನಿ ದುರ್ಗಾ, ಶೈಲಜಾ ದುರ್ಗಾ, ಧೂಮ್ರಾ ದುರ್ಗಾ, ಚಂಡ-ಮುಂಡ ದುರ್ಗಾ, ರಕ್ತಬೀಜ ದುರ್ಗಾ, ನಿಶುಂಭಾ ದುರ್ಗಾ ಪೂಜೆಗಳು ನಡೆಯುತ್ತವೆೆ. ಮೊದಲ ದಿನದಿಂದ ಪ್ರಾರಂಭವಾಗಿ 9ನೇ ದಿನದವರೆಗೂ ಪ್ರತಿ ದಿನ ಸಂಜೆ ಸುಹಾಸಿನಿ ಪೂಜೆ ನಡೆಯುತ್ತದೆ. 9ನೇ ದಿನ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ ಶತರುದ್ರಾಭೀಷೇಕ, ಕಲ್ಪೋಕ್ತ ಪೂಜೆ ಹಾಗೂ ಶುಂಭಾ ದುರ್ಗಾ ಪೂಜೆಗಳ ಜತೆಯಲ್ಲಿ ಚಂಡಿಕಾ ಯಾಗ ನಡೆಯುತ್ತದೆ.

    ಭಕ್ತರಿಗೆ ಅಗತ್ಯ ಸೌಲಭ್ಯ: ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಕೆ.ರಾಜು ವರ ನೇತೃತ್ವದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ರೀತಿಯ ಸೇವೆಗಳಿಗೂ ಅವಕಾಶ ನೀಡಲಾಗಿದೆ. ವಸತಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದಿನದ 24 ಗಂಟೆ ಉಚಿತ ತುರ್ತು ಆರೋಗ್ಯ ಚಿಕಿತ್ಸಾ ಕೇಂದ್ರದ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ದಿನ ದೇವಳದ ದಾಸೋಹ ಭವನದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಳ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದ್ದಾರೆ.

    ರಥೋತ್ಸವಕ್ಕೆ ಭಕ್ತರಿಗೆ ನಿರ್ಬಂಧ
    24ರಂದು ರಾತ್ರಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ಶ್ರೀ ದೇವಿಯ ವೈಭವದ ಪುಷ್ಪ ರಥೋತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಸಾವಿರಾರು ಭಕ್ತರು ಸೇರುವುದರಿಂದ ಪರಸ್ಪರ ಅಂತರ ಪಾಲನೆ ಕಷ್ಟವಾಗಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಸಂಜೆ 5 ಗಂಟೆಯ ಬಳಿಕ ಭಕ್ತರಿಗೆ ದೇವಸ್ಥಾನ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts