More

    ಕೊಲ್ಲೂರು ದೇವಳದ ನಿವೇಶನಗಳ ಸರ್ವೇ ನಡೆಸಿ ಅತಿಕ್ರಮಣ ತೆರವು, ಇಲಾಖೆ ಉಪ ಆಯುಕ್ತ ಜಯಪ್ರಕಾಶ್ ಸೂಚನೆ

    ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಸಂಬಂಧಪಟ್ಟಂತೆ ಐದು ಗ್ರಾಮಗಳಲ್ಲಿ 25 ನಿವೇಶನಗಳಿವೆ. ಕೆಲವೆಡೆ ದೇವಳದ ಜಾಗ ಅತಿಕ್ರಮಣಗೊಂಡ ದೂರುಗಳಿವೆ. ಎಲ್ಲ ನಿವೇಶನಗಳ ಸರ್ವೇ ನಡೆಸಿ, ಅತಿಕ್ರಮಣವಾಗಿದ್ದರೆ ತೆರವಿಗೆ ಕ್ರಮ ಕೈಗೊಳ್ಳುವಂತೆ ಧಾರ್ಮಿಕ ದತ್ತಿ ಇಲಾಖೆ ಉಪ ಆಯುಕ್ತ ಜಯಪ್ರಕಾಶ್ ಸೂಚಿಸಿದರು.

    ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸಭಾಂಗಣದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್, ಪೊಲೀಸ್, ಕಂದಾಯ, ಅರಣ್ಯ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಹಾಗೂ ದೇವಳದ ಸಿಬ್ಬಂದಿಯ ಸಭೆಯಲ್ಲಿ ಈ ನಿರ್ದೇಶನ ನೀಡಿದ್ದಾರೆ.

    ಶೀಘ್ರ ದೇವಳದ ಎಲ್ಲ ಜಮೀನನ್ನು ಕಂದಾಯ, ಅರಣ್ಯ, ಪೊಲೀಸ್ ಹಾಗೂ ಸಂಬಂಧಪಟ್ಟ ಖಾಸಗಿ ವ್ಯಕ್ತಿಗಳ ಸಮ್ಮುಖ ಸರ್ವೇ ಮಾಡಬೇಕು. ನಿವೇಶನದಲ್ಲಿ ತಾಂತ್ರಿಕ ದೋಷ ಕಂಡುಬಂದು ಪಹಣಿ, ಎಂಎಫ್‌ಬಿ ನಕ್ಷೆಗೆ ತಾಳೆಯಾಗದಿದ್ದರೆ ತಿದ್ದುಪಡಿ ಸಂಬಂಧ ಡಿಡಿಎಲ್‌ಆರ್‌ಗೆ ಪ್ರಸ್ತಾವನೆ ಸಲ್ಲಿಸಬೇಕು. ಕೆಲ ದೇವಾಲಯಗಳಿಗೆ ಸಂಬಂಧಪಟ್ಟ ನಿವೇಶನದ ಪಹಣಿಯಲ್ಲಿ ಸರ್ಕಾರಿ ಎಂದು ನಮೂದಾಗಿದೆ. ಅದನ್ನು ಧಾರ್ಮಿಕ ದತ್ತಿ ಇಲಾಖೆಯ ಹೆಸರಿನಲ್ಲಿ ಪಹಣಿ ಮಾಡಿಸುವಂತೆಯೂ ಸೂಚಿಸಿದರು.

    ಮೇಲ್ಮನವಿ ಸಲ್ಲಿಸಲು ಸೂಚನೆ: ದೇವಳಕ್ಕೆ ಸಂಬಂಧಪಟ್ಟ ಸರ್ವೇ ನಂಬ್ರ 43-7ರಲ್ಲಿ ಒಂದು ಅಂಗಡಿಕೋಣೆ ಬಗ್ಗೆ 2014ರಲ್ಲಿ ನ್ಯಾಯಾಲಯದಲ್ಲಿ ದೇವಸ್ಥಾನದ ವಿರುದ್ಧ ತೀರ್ಪು ಬಂದಿತ್ತು. ಆದರೆ ದೇವಳದಿಂದ ಅಪೀಲು ಸಲ್ಲಿಸಿಲ್ಲ. ಹೀಗಾಗಿ ಆಸ್ತಿ ಕೈ ತಪ್ಪಿದೆ ಎಂಬ ವ್ಯಕ್ತಿಯೊಬ್ಬರ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಜಯಪ್ರಕಾಶ್, ಸರ್ಕಾರಿ ವಕೀಲರನ್ನು ನಿಯೋಜಿಸಿ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಕೋರ್ಟ್ ತೀರ್ಪು ಬಳಿಕ ತನಿಖೆ ಚುರುಕು
    ದೇವಳದಲ್ಲಿ 4 ವರ್ಷ ಹಿಂದಿನ ಚಿನ್ನಾಭರಣ ಕಳವು ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಉಪ ಆಯುಕ್ತರು, ಆರೋಪಿಗಳಿಂದ 800 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನೂ 400 ಗ್ರಾಂ ಚಿನ್ನ ವಶ ಬಾಕಿಯಿದೆ. ನ್ಯಾಯಾಲಯ ತೀರ್ಪಿನ ಬಳಿಕ ತನಿಖೆ ಚುರುಕುಗೊಳಿಸಲಾಗುವುದು. ಪ್ರಕರಣದಲ್ಲಿ ಭಾಗಿಯಾದ ದೇವಳದ ಎಲ್ಲ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ ಎಂದರು.

    ಬೆಂಗಳೂರಿನಿಂದ ನಿಯಂತ್ರಣ
    ಕೊಲ್ಲೂರು ದೇವಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ಇಲ್ಲಿನ ಎಲ್ಲ ವಿದ್ಯಮಾನಗಳನ್ನು ವೀಕ್ಷಿಸುವ ಚಿಂತನೆಯಿದೆ ಎಂದು ಜಯಪ್ರಕಾಶ್ ತಿಳಿಸಿದರು. ಇಲ್ಲಿನ ಮೂಲಸೌಕರ್ಯಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು. ದೇವಳದ ಧಾರ್ಮಿಕ ಕಾರ್ಯಗಳಿಗೆ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ದೇವರ ದರ್ಶನದ ಕಾಲಾವಕಾಶ ವಿಸ್ತರಿಸುವ ಚಿಂತನೆಯೂ ಇದೆ ಎಂದರು.

    ದೇವಳದಲ್ಲಿ ಕೋಟ್ಯಂತರ ರೂ. ಅನುದಾನದಲ್ಲಿ ಮಾಡಲಾಗಿರುವ ಒಳಚರಂಡಿ ಕಾಮಗಾರಿ ಕಳಪೆ ಎಂಬ ದೂರು ಬಂದಿದೆ. ಶೀಘ್ರ ಗುತ್ತಿಗೆದಾರರಿಂದಲೇ ಸರಿಪಡಿಸಬೇಕು. ಸೌಪರ್ಣಿಕಾ ನದಿ ಶುಚಿತ್ವ ಕಾಪಾಡುವಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ವಸತಿಗೃಹ, ಹೊಟೇಲ್‌ಗಳ ತ್ಯಾಜ್ಯವನ್ನು ನದಿಗೆ ಬಿಡಬಾರದು.
    – ಜಯಪ್ರಕಾಶ್, ಉಪ ಆಯುಕ್ತ, ಧಾರ್ಮಿಕ ದತ್ತಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts