More

    ಕೋಳಿ ತ್ಯಾಜ್ಯಕ್ಕೆ ಕುದೂರು ಜನತೆ ಹೈರಾಣ

    ಕುದೂರು: 
    ಮಾಗಡಿ ತಾಲೂಕು ಕುದೂರು ಗ್ರಾಮದ 1ನೇ ವಾರ್ಡಿನ ತುಮಕೂರು ಮುಖ್ಯರಸ್ತೆ ಪಕ್ಕ ಕೋಳಿ ತ್ಯಾಜ್ಯ ಸುರಿಯುತ್ತಿದ್ದು, ದುರ್ವಾಸನೆಯಿಂದ ಓಡಾಡುವುದೇ ಕಷ್ಟವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

    ಕೋಳಿ ತ್ಯಾಜ್ಯ ತಂದು ಸುರಿಯುವುದರಿಂದ ಬೀದಿ ನಾಯಿಗಳು ತ್ಯಾಜ್ಯವನ್ನೆಲ್ಲ ಎಳೆದಾಡಿ ರಸ್ತೆಯಲ್ಲಿ ಬಿಡುತ್ತಿವೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದ್ದರೆ, ಇನ್ನೊಂದೆಡೆ ನಾಯಿಗಳ ದಾಳಿಯೂ ಭಯ ಮೂಡಿಸಿದೆ.
    ಕುದೂರು ಗ್ರಾಪಂ 1ನೇ ವಾರ್ಡ್‌ನ ಕೆಲ ಪ್ರದೇಶಗಳಲ್ಲಿ ಮಾತ್ರ ಬೀದಿ ದೀಪ ಅಳವಡಿಸಲಾಗಿದೆ. ತುಮಕೂರು ರಸ್ತೆ ಬಳಿ ಇರುವ ಬಡಾವಣೆಯಲ್ಲಿ ಬೀದಿ ದೀಪ ಹಾಕದ ಕಾರಣಕ್ಕೆ ಇಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ.

    ಪಾದಚಾರಿಗಳಿಗೆ ನಿತ್ಯ ನರಕ: ವಾರ್ಡಿನಲ್ಲಿ ಕೋಳಿ ತ್ಯಾಜ್ಯದ ದುರ್ನಾತದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಜನ ಸಂಚಾರ ವಿರಳವಾಗಿದೆ. ಆದರೆ, ಮಕ್ಕಳು ಶಾಲೆಗೆ ಹೋಗಿ, ಬರಲು ಈ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದ್ದು, ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.

    ತ್ಯಾಜ್ಯ ಸುರಿದರೆ ತಕ್ಕಪಾಠ: ಕೋಳಿ ಅಂಗಡಿ ಯವರು ತ್ಯಾಜ್ಯ ತಂದು ಸುರಿಯುತ್ತಿರುವ ಕಾರಣ ರೋಸಿಹೋಗಿರುವ 1ನೇ ವಾರ್ಡ್ ನಿವಾಸಿಗಳು, ಈ ಬಗ್ಗೆ ಸಾಕಷ್ಟು ಬಾರಿ ಕುದೂರು ಗ್ರಾಪಂ ಗಮನಕ್ಕೆ ತಂದಿದ್ದಾರೆ. ಆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಇದರಿಂದಾಗಿ ವಾರ್ಡ್ ನಿವಾಸಿಗಳು ತ್ಯಾಜ್ಯ ವಿಲೇವಾರಿ ಮಾಡುವವರಿಗೆ ತಕ್ಕಪಾಠ ಕಲಿಸಲು ಮುಂದಾಗಿದ್ದು, ಆಗುವ ಅನಾಹುತಗಳಿಗೆ ಕೋಳಿ ಅಂಗಡಿ ಮಾಲೀಕರೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸುತ್ತಿದ್ದಾರೆ.

    1ನೇ ವಾರ್ಡಿನ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲಾಗುವುದು. ಕೋಳಿ ತ್ಯಾಜ್ಯ ಸುರಿಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸುತ್ತೇನೆ.
    ಕೆ.ಟಿ. ವೆಂಕಟೇಶ್ ಗ್ರಾಪಂ ಅಧ್ಯಕ್ಷ, ಕುದೂರು

    1ನೇ ವಾರ್ಡಿನಲ್ಲಿ ಕೋಳಿ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಗ್ರಾಪಂ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಲಾಗಿದೆ. ಸಮಸ್ಯೆ ಪರಿಹರಿಸಬೇಕಾದ, ಅಭಿವೃದ್ಧಿ ಮಾಡಬೇಕಾದ ವಾರ್ಡ್ ಸದಸ್ಯರು ಕೋಳಿ ರಾಜಕೀಯ ಮಾಡುತ್ತಿದ್ದಾರೆ.
    ರೇಣುಕಾ 1ನೇ ವಾರ್ಡ್ ನಿವಾಸಿ. ಕುದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts