More

    ಶ್ರೀನಿವಾಸ ಪ್ರಸಾದ್ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ: ಅಭಿಮಾನಿಗಳಿಂದ ಅಶ್ರುತರ್ಪಣ

    ಮೈಸೂರು: ಹಿರಿಯ ರಾಜಕಾರಣಿ, ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಅಂತಿಮ ದರ್ಶನಕ್ಕೆ ಮಂಗಳವಾರ ಜನಸಾಗರವೇ ಹರಿದುಬಂತು. ಮೈಸೂರು, ಚಾಮರಾಜನಗರ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಅವರ ಅಭಿಮಾನಿಗಳು, ಸಾರ್ವಜನಿಕರು ಅಶ್ರುತರ್ಪಣ ಸಲ್ಲಿಸಿದರು.


    ಪ್ರಸಾದ್ ಅವರ ವ್ಯಕ್ತಿತ್ವ, ನಡೆ-ನುಡಿ, ರಾಜಕೀಯ ಏಳುಬೀಳು, ಅಭಿವೃದ್ಧಿ ಕೆಲಸ-ಕಾರ್ಯಗಳ ಸ್ಮರಣೆ ಮಾಡಿಕೊಂಡ ಜನರು ಕಂಬನಿ ಮಿಡಿದರು.
    ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಸುಕಿನಲ್ಲಿ ಪ್ರಸಾದ್ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಅವರ ಮನೆಗೆ ತರಲಾಗಿತ್ತು.

    ಬಳಿಕ ಪ್ರಸಾದ್ ಅವರು ಹುಟ್ಟಿ ಬೆಳೆದ ಅಶೋಕಪುರಂನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಮರುದಿನ ಮಂಗಳವಾರ ಮಧ್ಯಾಹ್ನ 12ರ ವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬರೋಬ್ಬರಿ 20 ಗಂಟೆ ಕಾಲ ಸಹಸ್ರಾರು ಜನರು ಇಲ್ಲಿಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.


    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಿಮ ದರ್ಶನ ಪಡೆದ ಬಳಿಕ ಸಾರ್ವಜನಿಕರ ದರ್ಶನವನ್ನು ಸ್ಥಗಿತಗೊಳಿಸಿ ಅಂತಿಮ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು. ಪಾರ್ಥಿವ ಶರೀರ ಕೊಂಡೊಯ್ಯುವ ವಾಹನ ಸಜ್ಜುಗೊಳಿಸಲಾಯಿತು.

    mysore


    ವಿಶೇಷವಾಗಿ ಅಲಂಕರಿಸಲಾಗಿದ್ದ ಈ ವಾಹನದಲ್ಲಿ ಮಧ್ಯಾಹ್ನ 12.07ಕ್ಕೆ ಅಂತಿಮ ಯಾತ್ರೆ ಆರಂಭಗೊಂಡಿತು. ಪ್ರಸಾದ್ ಅವರು ಬಾಲ್ಯವನ್ನು ಕಳೆದ ಇಲ್ಲಿನ ಬೀದಿಗಳಲ್ಲೇ ಅವರ ಕೊನೆಯ ಪಯಣವೂ ನಡೆಯಿತು. ಚಿರನಿದ್ರೆಗೆ ಜಾರಿರುವ ತಮ್ಮ ನಾಯಕನನ್ನು ಕಂಡು ಅಲ್ಲಿನ ಸಾರ್ವಜನಿಕರು, ಸಂಬಂಧಿಕರು, ಅಭಿಮಾನಿಗಳು, ಹಿತೈಷಿಗಳು ಕಣ್ಣೀರು ಹಾಕಿದರು.


    ಅಶೋಕಪುರಂ 1ನೇ ಕ್ರಾಸ್ ಮೂಲಕ ಸಾಗಿದ ಶವ ಯಾತ್ರೆಯು 2ನೇ ಕ್ರಾಸ್‌ನಲ್ಲಿರುವ ಪ್ರಸಾದ್ ಅವರ ಹುಟ್ಟಿದ ಮನೆಯಲ್ಲಿ ಸಹೋದರಿ ಕುಟುಂಬದವರು ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಅಶೋಕಪುರಂ ರಸ್ತೆಯ ಬದಿ ನಿಂತಿದ್ದ ಜನರು ತಮ್ಮ ಊರಿನ ಮನೆಯ ಮಗನಿಗೆ ಗೌರವವನ್ನು ಸಲ್ಲಿಸಿ ವಿದಾಯ ಪೂರ್ವಕವಾಗಿ ಕಳುಹಿಸಿಕೊಟ್ಟರು.


    6ನೇ ಕ್ರಾಸ್ ಚಿಕ್ಕ ಗರಡಿ ಬಳಿ ಆರ್‌ಎಸ್‌ಎಸ್ ಮುಖಂಡ ಮ.ವೆಂಕಟರಾಮ್ ಮಾಲಾರ್ಪಣೆ ಮಾಡಿದರು. 11ನೇ ಮತ್ತು 12ನೇ ಕ್ರಾಸ್‌ನಲ್ಲಿ ಪುಷ್ಪ ನಮನ ಸಲ್ಲಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಹಿರಿಯ-ಕಿರಿಯರು ನಿಂತು ಅಂತಿಮ ದರ್ಶನ ಪಡೆದರು. ಬಳಿಕ ಅಶೋಕಪುರಂ ಮುಖ್ಯರಸ್ತೆಯಲ್ಲಿ ಸಾಗಿದ ಮೆರವಣಿಗೆಯು 13ನೇ ಕ್ರಾಸ್‌ನ ಬಿ.ಬಸವಲಿಂಗಪ್ಪ ವೃತ್ತ, ರೇಷ್ಮೆ ಕಾರ್ಖಾನೆಯ ವೃತ್ತದಲ್ಲಿ ಮಾನಂದವಾಡಿ ಹೆದ್ದಾರಿಯನ್ನು ಸೇರಿತು.


    ಅಲ್ಲಿಂದ ಬೇಸ್ ಪಿಯು ಕಾಲೇಜಿನ ಪಕ್ಕದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಶೈಕ್ಷಣಿಕ ಮತ್ತು ಹಾಗೂ ಸಾಂಸ್ಕೃತಿಕ ಟ್ರಸ್ಟ್ ಆವರಣದಲ್ಲಿ ಪ್ರಸಾದ್ ಅವರ ಅಂತಿಮಯಾತ್ರೆ ಅಂತ್ಯಗೊಂಡಿತು. ಇದಕ್ಕೆ ನೂರಾರು ಅಭಿಮಾನಿಗಳು, ಬೆಂಬಲಿಗರು ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts