More

    ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ 14 ನಿವೃತ್ತ ಯೋಧರಿಗೆ ಕೋಲಾರದಲ್ಲಿ ಅದ್ದೂರಿ ಸ್ವಾಗತ

    ಕೋಲಾರ: ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ಏಕಕಾಲಕ್ಕೆ ನಿವೃತ್ತಿ ಹೊಂದಿರುವ ಜಿಲ್ಲೆಯ 14 ಯೋಧರಿಗೆ ನಗರದಲ್ಲಿ ಸೋಮವಾರ ಅದ್ದೂರಿಯಾಗಿ ಸ್ವಾಗತಿಸಿ ಗೌರವಿಸಲಾಯಿತು.

    ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿರುವ ಯೋಧರು ನಿವೃತ್ತಿ ಬಳಿಕ ಕುಟುಂಬ ಸದಸ್ಯರೊಂದಿಗೆ ತಾಯ್ನಡಿಗೆ ವಾಪಸಾಗಿರುವ ಸಂದರ್ಭದಲ್ಲಿ ಜಿಲ್ಲೆಯ ನಿವೃತ್ತ ಯೋಧರ ಟ್ರಸ್ಟ್ ಹಾಗೂ ಟೀಮ್ ಯೋಧ ತಂಡದಿಂದ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಮೆರವಣಿಗೆ ಮೂಲಕ ಸರ್ವಜ್ಞ ಪಾರ್ಕ್ ಮುಂಭಾಗದ ನೀರಾವರಿ ಹೋರಾಟ ವೇದಿಕೆಗೆ ಕರೆತಂದು ಸನ್ಮಾನಿಸಲಾಯಿತು.

    ಯೋಧರನ್ನು ನೋಡಲು ಸೇರಿದ್ದ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಾಗೂ ನಾಗರಿಕರು ಗೌರವ ವಂದನೆ ಸಲ್ಲಿಸಿದರು. ಜಿಲ್ಲೆಯ ಯುವಕರಲ್ಲಿ ರಾಷ್ಟ್ರಭಕ್ತಿ ಮತ್ತು ರಾಷ್ಟ್ರಪ್ರೇಮ ಬೆಳೆಸಲು ವಿಶೇಷ ಶಿಬಿರಗಳನ್ನು ಆಯೋಜಿಸಬೇಕು, ಯುವಕರು ಭಾರತೀಯ ಸೇನೆಗೆ ಸೇರಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.

    ಪೊಲೀಸ್ ಅಧಿಕಾರಿ ವಂದೇಮಾತರಂ ಸೋಮಶೇಖರ್ ಮಾತನಾಡಿ, ಸೇನೆಯಲ್ಲಿರುವ ಒಗ್ಗಟ್ಟು, ಐಕ್ಯತೆ, ಶಿಸ್ತನ್ನು ಬೇರೆಲ್ಲೂ ಕಾಣಲಾಗದು. ಜಿಲ್ಲೆಯ ಯುವಕರು ಸೇನೆಗೆ ಸೇರಿ ಕೀರ್ತಿವಂತರಾಗಿದ್ದಾರೆ. 17 ವರ್ಷ ಸೇವೆ ಸಲ್ಲಿಸಿ ಮರಳಿರುವ ಸೈನಿಕರನ್ನು ಗೌರವಿಸುವ ಮೂಲಕ ಇಲ್ಲಿನ ಜನತೆ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

    ಜಿಲ್ಲೆಯ ಯುವಕರು ದೇಶಕ್ಕಾಗಿ ಸೇನೆಗೆ ಸೇರಬೇಕು, ನಿವೃತ್ತ ಯೋಧರು ಯುವಕರಿಗೆ ತರಬೇತಿ ನೀಡಬೇಕು, ನಮ್ಮ ಸೈನಿಕರನ್ನು ಗೌರವಿಸುವ ಮೂಲಕ ಜಿಲ್ಲೆಯ ಘನತೆ, ಗೌರವ ಹೆಚ್ಚಿಸಬೇಕು ಎಂದರು.

    ನಿವೃತ್ತ ಯೋಧ ಸುರೇಶ್‌ಬಾಬು ಮಾತನಾಡಿ, ದೇಶ ಸೇವೆ ಮಾಡಿದ್ದಕ್ಕೆ ನನ್ನ ಜಿಲ್ಲೆಯ ಜನತೆ ತೋರಿದ ಗೌರವಕ್ಕೆ ಋಣಿಯಾಗಿದ್ದೇನೆ. ಯುವಕರು ಸೇನೆಗೆ ಸೇರಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ನಾನು ನಿವೃತ್ತಿಯಾಗಿದ್ದರೂ ಯಾವುದೇ ಸಂದರ್ಭದಲ್ಲಿ ಕರೆದರೂ ದೇಶಕ್ಕಾಗಿ ಪ್ರಾಣ ತ್ಯಾಗಕ್ಕೆ ಸಿದ್ಧ ಎಂದು ಭಾವುಕರಾದರು.

    ನಿವೃತ್ತ ಯೋಧ ಟ್ರಸ್ಟ್ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷ ಕೃಷ್ಣಮೂರ್ತಿ, ನಿವೃತ್ತ ಯೋಧ ಕೃಷ್ಣೇಗೌಡ, ನಗರಸಭೆ ಸದಸ್ಯ ಮಂಜುನಾಥ್, ಬಿಜೆಪಿ ಯುವ ಮುಖಂಡ ಶ್ರೀನಾಥ್ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts