More

    ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಬಿಜೆಪಿ ಹೇಳಿದ ಸ್ವರ್ಗ ಇದೇನಾ?

    ಕೋಲಾರ: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ಬಿಜೆಪಿಯವರು ಹೇಳಿದ್ದ ಸ್ವರ್ಗ ಇದೇನಾ, ಕರೊನಾ ವೇಳೆ ನರಕ ತೋರಿಸಿರುವ ಸರ್ಕಾರಕ್ಕೆ ಮಾನವೀಯತೆ, ಹೃದಯ ಇಲ್ಲ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ವಾಗ್ದಾಳಿ ನಡೆಸಿದರು.

    ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕರೊನಾ ನಿರ್ವಹಣೆಗೆ ಸ್ಪಷ್ಟತೆ ಇಲ್ಲದೆ ಸುಪ್ರೀಂಕೋರ್ಟ್, ಪ್ರತಿಪಕ್ಷಗಳಿಂದ ಹೇಳಿಸಿಕೊಳ್ಳುವಂತಾಗಿದೆ. ಬಡವರು, ರೈತರ, ಕಾರ್ಮಿಕರ ಪರ ಕೆಲಸ ಮಾಡುವಾಗ ಹೃದಯ ವೈಶಾಲ್ಯತೆ ಮುಖ್ಯ. ಕರೊನಾ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಿಲ್ಲ ಎಂದು ಟೀಕಿಸಿದರು.

    ಯುಪಿಎ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ವಿಧೇಯಕವನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಿತು. ಸಬೂಬು ಹೇಳಿ ಜನರ ದಿಕ್ಕು ತಪ್ಪಿಸದೆ ಜನರ ರಕ್ಷಣೆಗೆ ಹೋಗುವಂತೆ ಹಾಗೂ ಆಕ್ಸಿಜನ್ ವಿಚಾರದಲ್ಲೂ ಸುಪ್ರಿಂಕೋರ್ಟ್ ಮಧ್ಯಪ್ರವೇಶಿಸಿತು. ಈಗ ಕರೊನಾದಿಂದ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಜವಾಬ್ದಾರಿಯಿಂದ ಕೇಂದ್ರ ನುಣುಚಿಕೊಂಡು ರಾಜ್ಯಗಳಿಗೆ ಹೇರಿದೆ ಎಂದು ಆಪಾದಿಸಿದರು.

    ಡೆತ್ ಆಡಿಟ್ ಮಾಡಿಸಿ: ಸರ್ಕಾರದ ವೆಬ್‌ಸೈಟ್‌ನಲ್ಲಿನ ಅಂಕಿ-ಅಂಶ, ಪಕ್ಷ ಸಂಗ್ರಹಿಸಿರುವ ಮಾಹಿತಿಯಂತೆ 3.27 ಲಕ್ಷ ಮಂದಿ ಕರೊನಾದಿಂದ ಮೃತಪಟ್ಟಿದ್ದಾರೆ. ಸರ್ಕಾರ 33,033 ಮಂದಿ ಮರಣಹೊಂದಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದು, ಸಾವಿನ ಪ್ರಕರಣಗಳ ಡೆತ್ ಆಡಿಟ್ ಮಾಡಿಸಿ ಎಂದು ಒತ್ತಾಯಿಸಿದರು.

    ಕರೊನಾ ಸಂಕಷ್ಟದ ಸಂದರ್ಭದಲ್ಲಿ ಪಕ್ಷ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದೆ. ಸಹಾಯಹಸ್ತ ಕಾರ್ಯಕ್ರಮದಡಿ ಜು.30ರವರೆಗೆ ಕರೊನಾ ಸಂತ್ರಸ್ತರ ಮನೆ ಮನೆಗೆ ತೆರಳಿ ಸಾಂತ್ವನ ಹೇಳುವ ಜತೆಗೆ ಪಟ್ಟಿ ಸಿದ್ಧಪಡಿಸಿ ಪರಿಹಾರ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಜಿಪಂ, ತಾಪಂ ಚುನಾವಣೆಯಲ್ಲಿ ಆಯಾ ಶಾಸಕರಿಗೆ ಜವಾಬ್ದಾರಿ ನೀಡಿದ್ದು, ಶಾಸಕರಿಲ್ಲದ ಕಡೆ ಕೆ.ಎಚ್.ಮುನಿಯಪ್ಪ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಜಿಪಂನ 33 ಸ್ಥಾನಗಳ ಪೈಕಿ 25 ಸ್ಥಾನ ಗೆಲ್ಲುತ್ತೇವೆ. ಮಾಜಿ ಶಾಸಕ ವರ್ತೂರು ಪ್ರಕಾಶ್‌ಗೂ ನಮಗೂ ಸಂಬಂಧವಿಲ್ಲ ಎಂದರು.

    ಪಕ್ಷದ ವಕ್ತಾರರಾದ ದಳಸನೂರು ಗೋಪಾಲಕೃಷ್ಣ, ಎಲ್.ಎ.ಮಂಜುನಾಥ್, ಸ್ಟ್ಯಾಂಡ್ಲಿ, ಕೆಪಿಸಿಸಿ ಮಾಧ್ಯಮ ವಿಭಾಗದ ಬೆಂಗಳೂರು ಸಂಯೋಜಕ ಅನಿಲ್, ಕಿಸಾನ್‌ಖೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್ಸಿ ಘಟಕದ ಅಧ್ಯಕ್ಷ ಕೆ. ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯ್‌ಶಂಕರ್ ಇತರರಿದ್ದರು.

     

    ಪಕ್ಷದಲ್ಲಿ ಒಡಕು-ಬಿರುಕು ಇಲ್ಲ. ಚುನಾವಣೆಗೆ ಮುನ್ನವೇ ಸಿಎಂ ಘೋಷಣೆ ಮಾಡಿರುವ ಉದಾಹರಣೆ ಕಾಂಗ್ರೆಸ್ ಇತಿಹಾಸದಲ್ಲಿಲ್ಲ. ಮುಂದಿನ ಸಿಎಂ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯಗಳನ್ನೂ ಹೇಳದಂತೆ ಸೂಚನೆ ನೀಡಲಾಗಿದ್ದು, ಎಲ್ಲರೂ ಒಂದು ತಂಡವಾಗಿ ಹೋಗಲು ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳಲಾಗುವುದು.
    ವಿ.ಆರ್.ಸುದರ್ಶನ್, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts