More

    ಪರಿಶಿಷ್ಟರಿಗೆ ಮೀಸಲಾತಿ ಹಕ್ಕು, ಉಳಿದವರಿಗೆ ಬೇಡಿಕೆ ಎಂದ ಛಲವಾದಿ ನಾರಾಯಣಸ್ವಾಮಿ

    ಕೋಲಾರ: ಪರಿಶಿಷ್ಟರಿಗೆ ಮಾತ್ರವೇ ಮೀಸಲಾತಿ ಸಂವಿಧಾನಬದ್ಧ ಹಕ್ಕು, ಉಳಿದವರಿಗೆ ಬೇಡಿಕೆಯಷ್ಟೇ. ಮೀಸಲು ಹೋರಾಟಗಾರರು 2ಎ ಮೀಸಲಾತಿ ಕೊಡುತ್ತೀರಾ, ಇಲ್ಲವೇ ಇಳಿದು ಹೋಗುತ್ತೀರಾ ಎಂದು ಸರ್ಕಾರಕ್ಕೆ ಬೆದರಿಕೆ ಹಾಕುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

    ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಪರಿಶಿಷ್ಟರಿಗೆ ಸಂವಿಧಾನ ಗ್ರಂಥವಿದ್ದಂತೆ. ಅದರ ರಕ್ಷಣೆಗಾಗಿ ಹೋರಾಡಬೇಕು. ಬೇರೆಯವರು ತಮ್ಮ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಪರಿಶಿಷ್ಟರಿಗೆ ಸಂವಿಧಾನದತ್ತವಾಗಿ ಮೀಸಲಾತಿ ಬಂದಿದ್ದರೆ ಉಳಿದವರಿಗೆ ಬಂದ ಮೀಸಲಾತಿ ಶಾಸನವನ್ನು ತಿದ್ದಿ ಅನುಕೂಲ ಪಡೆದಿದ್ದು, ಅವರದ್ದು ಬೇಡಿಕೆಯಷ್ಟೇ. ಸರ್ಕಾರ ಒಪ್ಪಬಹುದು ಅಥವಾ ಬಿಡಬಹುದು ಎಂದು ಪ್ರತಿಪಾದಿಸಿದರು.

    ಯಾವ ಜಾತಿಯೂ ಮೀಸಲಾತಿಯಿಂದ ಹೊರಗಿಲ್ಲ. 2ಎ ಮೀಸಲಾತಿ ಕೇಳುತ್ತಿರುವವರು ಆರ್ಥಿಕವಾಗಿ ಹಿಂದುಳಿದಿದ್ದೇವೆಂದು ಶೇ.10ರಲ್ಲಿ ಮೀಸಲು ಕೇಳಬಹುದು. ಅದು ಬಿಟ್ಟು ಮೀಸಲು ನೀಡದಿದ್ದಲ್ಲಿ ಅಧಿಕಾರದಿಂದ ಕೆಳಗಿಳಿಸುವುದಾಗಿ ಸರ್ಕಾರವನ್ನು ಬೆದರಿಸುವ ನಡವಳಿಕೆ ಸರಿಯಲ್ಲ. ಇದನ್ನು ಯಾವ ಕಾರಣಕ್ಕೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲವೆಂದು ಬೇಸರಿಸಿದರು.

    18 ವರ್ಷಗಳಿಂದ ಸದಾಶಿವ ಆಯೋಗದ ವರದಿಯೇ ಅನುಷ್ಠಾನಗೊಂಡಿಲ್ಲ. ಬಳ್ಳಾರಿಯಿಂದ ವಾಕಿಂಗ್ ಬಂದಿದ್ದಾರೆಂಬ ಕಾರಣಕ್ಕೆ ಮೀಸಲಾತಿ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುವುದಲ್ಲ. ನ್ಯಾಯಬದ್ಧ ಬೇಡಿಕೆ ಇದ್ದರೆ ಸರ್ಕಾರ ಒಪ್ಪುತ್ತದೆ ಎಂದರು.

    ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಒಳಗಿರುವ ಅಣ್ಣತಮ್ಮಂದಿರನ್ನು ಹೊರಗೆ ತರಬೇಕು. ಬೇರೆ ಪಕ್ಷದಲ್ಲಿರುವವರನ್ನು ಬಿಜೆಪಿಗೆ ಕರೆದುಕೊಳ್ಳಿ, ಅವರವರ ಯೋಗ್ಯತೆಗೆ ಅನುಸಾರ ಪಕ್ಷದ ಕೆಲಸ, ಸ್ಥಾನಮಾನ ಸಿಗುತ್ತದೆ. ಯಾರನ್ನೂ ಕಡೆಗಣಿಸುವುದಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುತ್ತದೆ. ಬಾಚಿ ತಬ್ಬಿಕೊಳ್ಳುವ ಮನೋಭಾವವನ್ನು ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕೆಂದರು.

    ಇಡೀ ದೇಶದಲ್ಲಿ ಎಸ್ಸಿ ಸಮುದಾಯ ಬಿಜೆಪಿ ಕಡೆ ಮುಖ ಮಾಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 4 ಕ್ಷೇತ್ರಗಳನ್ನಾದರೂ ಗೆಲ್ಲಬೇಕು. ಪ.ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪಕ್ಷದ ಕಾರ್ಯಕರ್ತರು ಸಂಘಟನೆ ಬಲಿಷ್ಠಗೊಳಿಸಬೇಕು ಎಂದರು.

    ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಜಿಲ್ಲೆಯಲ್ಲಿ ಎಸ್ಸಿ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಛಲವಾದಿ ನಾರಾಯಣಸ್ವಾಮಿ ಮೋರ್ಚಾ ಅಧ್ಯಕ್ಷರಾದ ನಂತರ ತಂಡ ಕಟ್ಟಿಕೊಂಡು ರಾಜ್ಯದಾದ್ಯಂತ ಪ್ರವಾಸ ಮಾಡಿ ಸಮುದಾಯದ ಜನರನ್ನು ಪಕ್ಷಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಬದ್ಧತೆಯಿಂದ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕೆಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ, ಜಿಪಂ ಸದಸ್ಯೆ ಅಧ್ಯಕ್ಷೆ ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಂಬರೀಷ್, ಬಾಬಿ ಸುರೇಶ್, ರಾಜ್ಯ ಉಪಾಧ್ಯಕ್ಷೆ ಶ್ರೀದೇವಿ, ಮುಖಂಡ ನಾಗರಾಜ್ ಇತರರಿದ್ದರು.

    ಸಿದ್ದರಾಮಯ್ಯ ಕಡ್ಲೆಪುರಿ ತಿನ್ನುತ್ತಿದ್ದರಾ?: ಪರಿಶಿಷ್ಟರಲ್ಲೂ ಗೊಂದಲ ಶುರುವಾಗಿದೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಸಿ 7 ವರ್ಷಗಳಾಗಿದೆ. ಈಗ ವರದಿ ಒಪ್ಪಲೇಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಿಎಂ ಆಗಿದ್ದಾಗ ಕಡ್ಲೆಪುರಿ ತಿನ್ನುತ್ತಿದ್ದರಾ ಎಂದು ಛೇಡಿಸಿದ ಛಲವಾದಿ ನಾರಾಯಣಸ್ವಾಮಿ, ತಾರ್ಕಿಕ ಅಂತ್ಯ ಬಿಜೆಪಿ ಸರ್ಕಾರದಲ್ಲೇ ಕಾಣಲಿದೆ ಎಂದರು.

    ಕೇಂದ್ರ, ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಪದಾಧಿಕಾರಿಗಳು ಸಂಘಟನೆಗೆ ಸಮಯ ನೀಡಿ ತಾಪಂ, ಜಿಪಂ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು.
    ಅಂಬರೀಷ್, ಜಿಲ್ಲಾಧ್ಯಕ್ಷ ಎಸ್ಸಿ ಮೋರ್ಚಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts