More

    ರಣಾಂಗಣವಾದ ಕೋಲಾರ ನಗರಸಭೆ ವಿಶೇಷ ಸಭೆ

    ಕೋಲಾರ: ನಗರದ ಅಂಬೇಡ್ಕರ್ ಭವನಕ್ಕೆ ಸುಣ್ಣ-ಬಣ್ಣ ಬಳಿಯಲು ನಗರಸಭೆಯಿಂದ 6 ಲಕ್ಷ ರೂ. ಅನುದಾನ ಒದಗಿಸುವ ವಿಚಾರದಲ್ಲಿ ಸದಸ್ಯರ ನಡುವೆ ತೀವ್ರ ವಾಗ್ವಾದ, ಪ್ರತಿಭಟನೆ, ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತುರ್ತು ಸಭೆ ಸಾಕ್ಷಿಯಾಯಿತು.

    ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಆರ್. ಶ್ವೇತಾ ಶಬರೀಶ್ ಅಧ್ಯಕ್ಷತೆಯಲ್ಲಿ ಗುರುವಾರ ಕರೆದಿದ್ದ ವಿಶೇಷ ಸಭೆಯಲ್ಲಿ ಅಂಬೇಡ್ಕರ್ ಭವನಕ್ಕೆ ಸುಣ್ಣ-ಬಣ್ಣ ಬಳಿಯಲು 6 ಲಕ್ಷ ರೂ. ಅನುದಾನ ಕೋರಿದ್ದರೂ ಕ್ರಿಯಾಯೋಜನೆಯಲ್ಲಿ ಕೈಬಿಡಲಾಗಿದೆ. ನಗರಸಭೆಯಿಂದ ಅನುದಾನ ನೀಡಿದರೆ ಕೌನ್ಸಿಲ್ ಸೂಪರ್‌ಸೀಡ್ ಆಗುತ್ತದೆಯೆಂದು ಬಿ.ಎಂ.ಮುಬಾರಕ್ ಹೇಳಿದ್ದಾಗಿ ಕಾಂಗ್ರೆಸ್‌ನ ಅಂಬರೀಷ್ ಆರೋಪಿಸಿದರು.

    ಆಕ್ಷೇಪಿಸಿದ ಮುಬಾರಕ್, ಭವನ ನಗರಸಭೆ ವ್ಯಾಪ್ತಿಯಲ್ಲಿಲ್ಲ. ಶೇ22.75ರ ಅನುದಾನ ಪ.ಜಾತಿಗೆ ಬಳಸಬೇಕು, ನಗರದ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ, ಪಿಯು ಮಕ್ಕಳಿಗೆ ಲ್ಯಾಪ್‌ಟಾಪ್ ಕೊಡಿಸಿ ಎಂದು ಸಲಹೆ ನೀಡುತ್ತಿದ್ದಂತೆ ಭವನ ನಗರಸಭೆ ವ್ಯಾಪ್ತಿಯೊಳಗಿಲ್ಲದಿದ್ದರೆ ಖಾತೆ ಕೊಟ್ಟಿದ್ದು ಹೇಗೆಂದು 7ನೇ ವಾರ್ಡ್‌ನ ಸುರೇಶ್‌ಬಾಬು ಪೌರಾಯುಕ್ತರನ್ನು ಪ್ರಶ್ನಿಸಿದರು.

    ಮುಬಾರಕ್ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ, ಅಂಬೇಡ್ಕರ್ ಅವರನ್ನು ಊರ ಹೊರಗೆ ಇಟ್ಟಿದ್ದಾರೆಂದು ಧಿಕ್ಕಾರ ಕೂಗಿ ಸಭೆಯ ಬಾವಿಗಿಳಿದು ಧರಣಿ ಕುಳಿತಾಗ ಅಪ್ಸರ್, ನಾಜಿಯಾ, ರಾಕೇಶ್ ಇನ್ನಿತರರು ಬೆಂಬಲಿಸಿದರು.

    ಈ ಮಧ್ಯೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಕುಳಿತುಕೊಳ್ಳಲು ಕೈ ತೋರಿಸಿ ಹೇಳಿದ್ದಕ್ಕೆ ಸಭೆ ರಣಾಂಗಣವಾಯಿತು. ಅಂಬರೀಷ್ ಶರ್ಟ್ ಬಿಚ್ಚಿ ನನಗೆ ಹೊಡೆಯೋಕೆ ಬರ‌್ತಿಯಾ ಎಂದು ಮೇಲೆರಗಲು ಪ್ರಯತ್ನಿಸಿದಾಗ ಸದಸ್ಯರು ತಡೆಯೊಡ್ಡಿ ದೂರ ಸರಿಸಿದರಲ್ಲದೆ ಉಪಾಧ್ಯಕ್ಷ ಪ್ರವೀಣ್ ಗೌಡ ಇತರರು ಪರಿಸ್ಥಿತಿ ತಿಳಿಗೊಳಿಸಿದರು.

    ಭವನ ನಗರಸಭೆ ವ್ಯಾಪ್ತಿಯೊಳಗಿದೆಯೆಂದು ಕಂದಾಯ ಅಧಿಕಾರಿ ಚಂದ್ರು ಸ್ಪಷ್ಟಪಡಿಸುತ್ತಿದ್ದಂತೆ ಮುಬಾರಕ್ ಸಭೆಗೆ ತಪ್ಪು ಮಾಹಿತಿ ನೀಡಿ ಭವನ ಅಭಿವೃದ್ಧಿಗೆ ಅಡ್ಡಿಪಡಿಸಿ ಬೆದರಿಸುತ್ತಿದ್ದಾರೆ, ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಬೇಕೆಂದು ಅಂಬರೀಷ್ ಆಗ್ರಹಿಸಿದರು.

    ಭವನ ಊರ ಹೊರಗಿದೆ ಎಂಬ ಹೇಳಿಕೆ ವಾಪಸ್ ಪಡೆದ ಮುಬಾರಕ್ ಸುಣ್ಣ-ಬಣ್ಣ ಬಳಿಯಲು ವಿರೋಧವಿಲ್ಲ, ಸಮಾಜ ಕಲ್ಯಾಣ ಇಲಾಖೆಯಲ್ಲಿನ ಅನುದಾನ ಬಳಸಲಿ ಎಂಬುದಷ್ಟೇ ನನ್ನ ಉದ್ದೇಶ, ಎಲ್ಲರೂ ಒಪ್ಪಿದರೆ ಹಣ ನೀಡಲಿ ಎಂದರು. ಕೆಲಸ ನಡೆಯಲಿ ಎಂದು ಸದಸ್ಯ ಮುರಳಿ ಸಲಹೆ ನೀಡಿದರು. ಈ ಮಧ್ಯೆ ಸದಸ್ಯೆ ನಾರಾಯಣಮ್ಮ ಮತ್ತು ಅಂಬರೀಷ್ ನಡುವೆ ಏಕವಚನ ಪದ ಪ್ರಯೋಗದಿಂದ ವಾಗ್ವಾದ ನಡೆಯಿತು.

    ತರಾಟೆ: ನನ್ನ ವಾರ್ಡ್‌ಗೆ 100 ಮೀಟರ್ ಪೈಪ್‌ಲೈನ್ ಇಲ್ಲ, ಯಾರ ಅನುಮತಿ ಪಡೆದು 12 ಕಾಮಗಾರಿಗಳಿಗೆ ಟೆಂಡರ್ ಕರೆದಿದ್ದೀರಿ, ಅವಶ್ಯಕತೆ ಇಲ್ಲದ ಕಡೆ ಪೈಪ್‌ಲೈನ್ ಹಾಕಿ ಕಮಿಷನ್ ಹೊಡೆಯೋ ಉದ್ದೇಶ, ಎಲ್ಲಿ ಕಮಿಷನ್ ಸಿಗುತ್ತದೋ ಆ ಕೆಲಸ ತೆಗೆದುಕೊಂಡಿದ್ದೀರೆಂದು ರಾಕೇಶ್ ಅಜೆಂಡಾ ಪ್ರತಿ ತೂರಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸದಸ್ಯರಿಂದ ಪಟ್ಟಿ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲು ಪಟ್ಟು ಹಿಡಿದರು.

    ಸದಸ್ಯರು ಮಾತು ಮಾತಿಗೆ ಕಮಿಷನ್ ಎನ್ನುತ್ತಿದ್ದಾರೆ, ಯಾರಿಗೆ ಎಷ್ಟು ಕಮಿಷನ್ ಹೋಗುತ್ತಿದೆಯೆಂದು ದಾಖಲೆ ತೋರಿಸಿ ಎಂದು ನಾಮಿನಿ ಸದಸ್ಯ ಶ್ರೀನಾಥ್ ಟಾಂಗ್ ನೀಡಿದರು.

    ನಮ್ದೂ ಸಮಸ್ಯೆ ಕೇಳ್ರಿ..: ಎರಡು ಗಂಟೆ ನಡೆದ ಗದ್ದಲಕ್ಕೆ ರೋಸಿಹೋದ ಸದಸ್ಯೆ ಅಪೂರ್ವಾ ಬರೀ ಗಲಾಟೆ ಮಾಡಿಕೊಂಡಿದ್ದರೆ ಅಭಿವೃದ್ಧಿ ಯಾವಾಗ? ನಮ್ಮ ವಾರ್ಡ್‌ಗಳಲ್ಲೂ ನೀರಿನ ಸಮಸ್ಯೆ ಇದೆ, ಅದನ್ನೂ ಕೇಳಿ ಎಂದಾಗ ಇತರ ಸದಸ್ಯೆಯರು ಧ್ವನಿಗೂಡಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪರಿಷ್ಕರಣೆ, ನಗರಸಭೆ ಅಧ್ಯಕ್ಷರ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಹೂಡಿರುವ ದಾವೆಗೆ ಪೌರಾಯುಕ್ತ, ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳನ್ನು ಪಾರ್ಟಿ ಮಾಡಿರುವುದರಿಂದ ನಗರಸಭೆ ಪರ ವಾದಿಸಲು ವಕೀಲರನ್ನು ನೇಮಿಸಿಕೊಳ್ಳುವ ಬಗ್ಗೆ ಪೌರಾಯುಕ್ತ ಶ್ರೀಕಾಂತ್ ಪ್ರಸ್ತಾಪಕ್ಕೆ ಸಭೆ ಅನುಮೋದನೆ ನೀಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts