More

    ವಿರಾಟ್ ಕೊಹ್ಲಿ ಏಕದಿನ ನಾಯಕತ್ವವೂ 2023ರ ವಿಶ್ವಕಪ್‌ವರೆಗೆ ಸುರಕ್ಷಿತವಲ್ಲ!

    ನವದೆಹಲಿ: ಟೆಸ್ಟ್ ಮತ್ತು ಸೀಮಿತ ಓವರ್ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಇತ್ತೀಚೆಗೆ ಬಿಸಿಬಿಸಿ ಸುದ್ದಿ ಹರಿದಾಡಿತ್ತು. ಇದರ ನಡುವೆ ವಿರಾಟ್ ಕೊಹ್ಲಿ, ಮುಂಬರುವ ಚುಟುಕು ಕ್ರಿಕೆಟ್ ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ಗುರುವಾರ ಶುಕ್ರವಾರ ದಿಢೀರ್ ಪ್ರಕಟಿಸಿದ್ದಾರೆ. 2023ರಲ್ಲಿ ತವರಿನಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್‌ವರೆಗೆ 50 ಓವರ್‌ಗಳ ತಂಡದ ನಾಯಕತ್ವವನ್ನು ಕಾಯ್ದುಕೊಳ್ಳುವುದು ಇದರ ಹಿಂದಿರುವ ತಂತ್ರವಾಗಿದೆ ಎಂದೂ ವಿಶ್ಲೇಷಿಸಲಾಗಿದೆ. ಆದರೂ 2023ರ ವಿಶ್ವಕಪ್‌ವರೆಗೂ ಕೊಹ್ಲಿ ಏಕದಿನ ನಾಯಕತ್ವ ಸುರಕ್ಷಿತವೆನಿಸಿಲ್ಲ ಎನ್ನಲಾಗಿದೆ.

    ಅಕ್ಟೋಬರ್-ನವೆಂಬರ್‌ನಲ್ಲಿ ಯುಎಇಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರಶಸ್ತಿ ಜಯಿಸದಿದ್ದರೆ ತಮ್ಮನ್ನು ಸೀಮಿತ ಓವರ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗುತ್ತದೆ ಎಂಬ ಬಗ್ಗೆ ಕೊಹ್ಲಿಗೆ ಮೊದಲೇ ಸುಳಿವು ಸಿಕ್ಕಿತ್ತು. ಇದರಿಂದಾಗಿ ಅವರು ಟೆಸ್ಟ್ ಜತೆಗೆ ಕನಿಷ್ಠ ಏಕದಿನ ತಂಡದ ನಾಯಕತ್ವವನ್ನೂ ಉಳಿಸುವ ದೃಷ್ಟಿಯಿಂದ ಟಿ20 ವಿಶ್ವಕಪ್‌ಗೆ ಮೊದಲೇ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಕಾರ್ಯದೊತ್ತಡ ತಗ್ಗಿಸುವ ಮತ್ತು ಬ್ಯಾಟಿಂಗ್‌ನತ್ತ ಗಮನಹರಿಸುವ ಕಾರಣಗಳನ್ನು ಕೊಹ್ಲಿ ನೀಡಿದ್ದರೂ, 2023ರ ವಿಶ್ವಕಪ್‌ವರೆಗೆ ಏಕದಿನ ತಂಡದ ನಾಯಕತ್ವ ಉಳಿಸಿಕೊಳ್ಳುವುದು ಅವರ ನಿರ್ಧಾರದ ಹಿಂದಿನ ಪ್ರಮುಖ ಕಾರಣ ಎನ್ನಲಾಗುತ್ತಿದೆ. ನಾನಂತೂ ಏಕದಿನ ನಾಯಕತ್ವ ಬಿಡಲ್ಲ, ಬೇಕಿದ್ದರೆ ನೀವೇ ತೆಗೆಯಿರಿ ಎಂಬ ಸಂದೇಶವೂ ಇದರಲ್ಲಿದೆ ಎನ್ನಲಾಗುತ್ತಿದೆ. ಇದರ ಹೊರತಾಗಿಯೂ, 2023ರ ವಿಶ್ವಕಪ್‌ವರೆಗೂ ಕೊಹ್ಲಿಯನ್ನು ಏಕದಿನ ತಂಡದ ನಾಯಕರಾಗಿ ಮುಂದುವರಿಸಲು ಬಿಸಿಸಿಐ ವಲಯದಲ್ಲಿ ಒಲವು ಇಲ್ಲ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲದಿದ್ದರೆ ಕೊಹ್ಲಿ ಏಕದಿನ ತಂಡದ ನಾಯಕತ್ವವನ್ನೂ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

    ಕೊಹ್ಲಿ ಟಿ20 ಪದತ್ಯಾಗದ ಬಗ್ಗೆ ಬಿಸಿಸಿಐ ಹೊರಡಿಸಿರುವ ಪ್ರಕಟಣೆಯಲ್ಲೂ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ, ಚುಟುಕು ಕ್ರಿಕೆಟ್ ನಾಯಕರಾಗಿ ಸಲ್ಲಿಸಿದ ಸೇವೆಗೆ ಅಭಿನಂದನೆ ತಿಳಿಸಿದ್ದಾರೆ. ಆದರೆ, 2023ರ ವಿಶ್ವಕಪ್‌ವರೆಗೂ ಅವರು ಏಕದಿನ ನಾಯಕರಾಗಿ ಮುಂದುವರಿಯುವ ಬಗ್ಗೆ ಚಕಾರ ಎತ್ತಿಲ್ಲ.

    2023ರ ವಿಶ್ವಕಪ್ ತವರಿನಲ್ಲೇ ನಡೆಯಲಿದ್ದು, 2011ರ ಸಾಧನೆ ಪುನರಾವರ್ತಿಸಲು ಬಿಸಿಸಿಐ ಬಯಸಿದೆ. ಹೀಗಾಗಿ ಒಂದು ವೇಳೆ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಏಕದಿನ ನಾಯಕತ್ವ ಕಾಯ್ದರೂ, ರೋಹಿತ್ ಸಾರಥ್ಯದಲ್ಲಿ ಟಿ20 ತಂಡ ಭರ್ಜರಿ ನಿರ್ವಹಣೆ ತೋರಲಾರಂಭಿಸಿದರೆ ಆಗ 2022ರಲ್ಲೇ ಏಕದಿನ ನಾಯಕತ್ವವೂ ಬದಲಾಗಬಹುದು.

    ಭಾರತ ಟಿ20 ತಂಡದ ಉಪನಾಯಕತ್ವಕ್ಕೆ ತ್ರಿಕೋನ ಸ್ಪರ್ಧೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts