More

    ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಕೋಡಿಹಳ್ಳಿ ಒತ್ತಾಯ

    ಶಿವಮೊಗ್ಗ: ರಾಜ್ಯ ಸರ್ಕಾರ ಜಾರಿಯಲ್ಲಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆದು ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

    ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಷರತ್ತುರಹಿತವಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆದ ಮಾದರಿಯಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಅಧಿವೇಶನದಲ್ಲಿ ಹಿಂಪಡೆಯಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಹೋರಾಟ ನಡೆಸಿದ್ದಾಗ ಸಿದ್ದರಾಮಯ್ಯ ಕೂಡ ಬೆಂಬಲ ಸೂಚಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದರು. ಜತೆಗೆ ಪಕ್ಷದ ಪ್ರಣಾಳಿಕೆಯಲ್ಲೂ ಈ ಕುರಿತಾಗಿ ಭರವಸೆ ನೀಡಿದ್ದರು. ಆದರೆ ಇತ್ತೀಚೆಗೆ ಸಿದ್ದರಾಮಯ್ಯ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ನೀಡಿರುವ ಹೇಳಿಕೆ ಆತಂಕ ಮೂಡಿಸಿದೆ ಎಂದು ಕಿಡಿಕಾರಿದರು.
    ಕೃಷಿ ಕಾಯ್ದೆ ಜತೆಗೆ ರಾಜ್ಯದಲ್ಲಿ ಮೂರು ಕಾಯ್ದೆಗಳು ಅಸ್ತಿತ್ವದಲ್ಲಿವೆ. ಭೂ ಸುಧಾರಣಾ ಕಾಯ್ದೆ 1961ಕ್ಕೆ ತಿದ್ದುಪಡಿ ಮಾಡಿವುದು ಅತ್ಯಂತ ಅಪಾಯಕಾರಿ ಆಗಿದ್ದರೆ, ಇತ್ತ ಕೃಷಿ ಮಾರುಕಟ್ಟೆ ಕಾಯ್ದೆಗೆ ಬೈಪಾಸ್ ಬಿಲ್ ನೀಡಿರುವುದು ಆತಂಕ ಸೃಷ್ಟಿಸಿದ್ದು ಕೃಷಿ ಮಾರುಕಟ್ಟೆಗಳು ಜೀವ ಕಳೆದುಕೊಳ್ಳುವಂತಾಗಿವೆ ಎಂದು ದೂರಿದರು.
    19ರಂದು ಎಚ್.ಎಸ್.ರುದ್ರಪ್ಪ ಸ್ಮರಣೆ:
    ರೈತ ಮುಖಂಡ ಎಚ್.ಎಸ್.ರುದ್ರಪ್ಪ ಅವರ ಸಂಸ್ಮರಣೆ ಕಾರ್ಯಕ್ರಮ ಜು.19ರಂದು ಬೈಪಾಸ್ ರಸ್ತೆಯ ತೀರ್ಥಪ್ಪ ಕ್ಯಾಂಪ್‌ನಲ್ಲಿ ಆಚರಿಸಲಾಗುವುದು. ರುದ್ರಪ್ಪ ಅವರು ಎನ್.ಡಿ.ಸುಂದರೇಶ್ ಜತೆ ರೈತ ಸಂಘಟನೆ ಕಟ್ಟಿದವರು. ಮಂತ್ರಿಯಾಗಿ, ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದವರು. ಇಂದಿನ ಯುವ ಸಮೂಹಕ್ಕೆ ಅವರನ್ನು ಪರಿಚಯ ಮಾಡಿಕೊಡುವ ಉದ್ದೇಶವಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
    ಜಿಲ್ಲಾಧ್ಯಕ್ಷ ಸೈಯದ್ ಶಫೀವುಲ್ಲಾ, ಮುಖಂಡರಾದ ಭಕ್ತನಹಳ್ಳಿ ಭೈರೇಗೌಡ, ಉಮೇಶ್ ಪಾಟೀಲ್, ಹರೀಶ್, ಮಹೇಶ್, ಈಶ್ವರಪ್ಪ, ಶಿಕಾರಿಪುರ ರವಿ, ಆರಾಧ್ಯ ತುಮಕೂರು ಸುದ್ದಿಗೋಷ್ಠಿಯಲ್ಲಿದ್ದರು.

    ರಾಜ್ಯದಲ್ಲಿ ಮುಂಗಾರು ಬಹುತೇಕ ಕೈ ಕೊಟ್ಟಿದ್ದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೃಷಿ ಮತ್ತು ರೈತರ ಜೀವನೋಪಾಯಕ್ಕೆ ಆದ್ಯತೆ ನೀಡಬೇಕು. ಜುಲೈ ಆರಂಭವಾದರೂ ಮಳೆ ಇಲ್ಲ. ಬಿತ್ತನೆ ವೈಲ್ಯ ಕಂಡಿದೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಬದರ ಛಾಯೆ ಆವರಿಸಿದ್ದು ರಾಜ್ಯ ಸರ್ಕಾರ ಬರ ಎದುರಿಸಲು ವ್ಯಾಪಕ ಸಿದ್ಧತೆ ಮಾಡಿಕೊಳ್ಳಬೇಕು.
    ಕೋಡಿಹಳ್ಳಿ ಚಂದ್ರಶೇಖರ್
    ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts