More

    ಖಾಸಗಿ ಶಾಲೆಗಳಲ್ಲಿ ಶಿಸ್ತಿಗೆ ಹೆಚ್ಚಿನ ಒತ್ತು

    ಕುಶಾಲನಗರ: ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಆಡಳಿತ ಮಂಡಳಿ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುವ ಮೂಲಕ ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮೆಚ್ಚುಗೆ ವ್ಯಕ್ತಪಡಿಸಿದರು.

    ಕುಶಾಲನಗರದ ರೈತ ಭವನದಲ್ಲಿ ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ದೊರೆಯುತ್ತಿದೆ. ಉತ್ತಮ ಫಲಿತಾಂಶವೂ ಖಾಸಗಿ ಶಾಲೆಗಳಲ್ಲೇ ಬರುತ್ತಿದೆ ಎಂದು ಶ್ಲಾಘಿಸಿದರು.

    ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸಲು ಪಾಲಕರು ಇಷ್ಟ ಪಡುವುದು ಸಾಮಾನ್ಯವಾಗಿದೆ. ಈ ಶಾಲೆಗಳಲ್ಲಿ ಕಲಿತ ಮಕ್ಕಳಲ್ಲಿ ಸಮಯ ಪಾಲನೆ, ಶಿಸ್ತು ಮೂಡುವುದರ ಜತೆಗೆ ಗುಣಮಟ್ಟದ ಶಿಕ್ಷಣ ಸಿಗುವುದರಿಂದ ಪ್ರಜ್ಞಾವಂತ ನಾಗರಿಕರ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದರು.

    ಎಂಎಲ್ಸಿ ಸುಜಾಕುಶಾಲಪ್ಪ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಿದರೂ ಜೀವನಕ್ಕೆ ಬೇಕಾದ ಮಾರ್ಗದರ್ಶನ ದೊರೆಯುತ್ತದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಹೆಚ್ಚು ಗಮನಿಸುವ ಮೂಲಕ ದುಶ್ಚಟಗಳಿಗೆ ದಾಸರಾಗುವುದನ್ನು ತಪ್ಪಿಸಬೇಕು ಎಂದು ಹೇಳಿದರು.
    ಎಂಎಲ್ಸಿ ಬೋಜೇಗೌಡ, ಪೊನ್ನಂಪೇಟೆ ಅರಣ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ.ಕುಶಾಲಪ್ಪ ಮಾತನಾಡಿದರು. ಕಿರುಕೊಡ್ಲಿ ಮಠದ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲು ಮಠದ ಶ್ರೀ ಮಹಾಂತ ಸ್ವಾಮೀಜಿ, ಒಕ್ಕೂಟದ ಅಧ್ಯಕ್ಷ ಕೊಳೆರ ಝುರು ಗಣಪತಿ, ಉಪಾಧ್ಯಕ್ಷ ಎಂ.ಟಿ.ದಾಮೋದರ, ಕಾರ್ಯದರ್ಶಿ ತಿಮ್ಮಯ್ಯ, ಪೊನ್ನಚ್ಚನ ಮೋಹನ್, ಕಾನೂನು ಸಲಹೆಗಾರ ಎಸ್.ಪೂವಯ್ಯ, ಖಾಸಗಿ ಶಾಲೆಗಳ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts