More

    ಜ್ಞಾನ ವರ್ಧಿಸುವ ಪಂಚಶ್ರೀ ಔಷಧ ವನ

    ಸುಬ್ರಹ್ಮಣ್ಯ: ಔಷಧೀಯ ಗುಣಗಳುಳ್ಳ ಸಸ್ಯ ಪ್ರಬೇಧಗಳ ಜ್ಞಾನ ವರ್ಧನೆಗೆ ಮರ್ಕಂಜದಲ್ಲಿ ನಿರ್ಮಿತವಾದ ಪಂಚಶ್ರೀ ಔಷಧೀಯ ವನ ಗಮನ ಸೆಳೆಯುತ್ತಿದೆ. 1.5 ಎಕರೆ ಪ್ರದೇಶದಲ್ಲಿ 12.90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತವಾದ ನಂದನವನವು ಅಪೂರ್ವ ಸಸ್ಯಲೋಕದ ಜ್ಞಾನ ನೀಡುತ್ತದೆ.

    ನಶಿಸಿ ಹೋಗುತ್ತಿರುವ ಔಷಧೀಯ ಸಸ್ಯಗಳ ಸಂಗ್ರವಿರುವ ಈ ವನ ಆಧುನಿಕರಿಗೆ ಶುಶ್ರೂಷೆಯ ಬಗ್ಗೆ ತಿಳಿಸುವ ಆರೋಗ್ಯ ಸಂಜೀವಿನಿ.ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸಲು ಹನಿ ನೀರಾವರಿ ವ್ಯವಸ್ಥೆ, ಮಕ್ಕಳಿಗೆ ಹಾಗೂ ಹಿರಿಯರಿಗೆ ವಿಶ್ರಾಂತಿಗೆ ಕಲ್ಲಿನ ಬೆಂಚು, ಸ್ವಾಗತ ಗೋಪುರ, ವಿಶ್ರಾಂತಿ ಗೃಹ ಇಲ್ಲಿದೆ.

    160 ಬಗೆಯ ಔಷಧೀಯ ಗಿಡಗಳು: ಸುಳ್ಯದ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಮರ್ಕಂಜ ಸರ್ಕಾರಿ ಪ್ರೌಢಶಾಲೆ ಸ್ಥಳದಲ್ಲಿ ಗ್ರಾಪಂ ಸಹಭಾಗಿತ್ವದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುದಾನದಲ್ಲಿ ವನವನ್ನು ನಿರ್ಮಿಸಲಾಗಿದೆ. ವನದಲ್ಲಿ 200 ಜಾತಿಯ ಗಿಡಗಳಿವೆ. ಇದರಲ್ಲಿ 160 ಔಷಧೀಯ ಗುಣಗಳುಳ್ಳ ಸಸ್ಯಗಳಿವೆ. ಸುಮಾರು 40 ಬಗೆಯ ಇತರ ಗಿಡಗಳು ಇಲ್ಲಿವೆ. ವಿವಿಧ ಜಾತಿಯ ಹಣ್ಣಿನ, ಹೂವಿನ ಗಿಡಗಳನ್ನು ನೆಡಲಾಗಿದೆ.

    ಜ್ಞಾನಕ್ಕೆ ಪೂರಕ: ಪ್ರತಿ ಸಸ್ಯಗಳ ಎದುರು ನಾಮ ಫಲಕ ಅಳವಡಿಸಲಾಗಿದ್ದು, ಸಸ್ಯದ ವೈಜ್ಞಾನಿಕ ಹೆಸರು ಮತ್ತು ಔಷಧೀಯ ಗುಣ, ಉಪಯೋಗವನ್ನು ನಮೂದಿಸಲಾಗಿದೆ. ಯಾವ ರೋಗಕ್ಕೆ ಸಸ್ಯದ ಔಷಧ ಬಳಕೆಯಾಗುತ್ತದೆ ಎಂಬ ವಿವರಗಳನ್ನು ಅನಾವರಣಗೊಳಿಸಲಾಗಿದೆ.

    5 ದೈವೀ ವನಗಳ ರಚನೆ: ಪಂಚಶ್ರೀ ಔಷಧಿ ವನದಲ್ಲಿ ನವಗೃಹ ವನ, ರಾಶಿ ವನ, ಶಿವ ಪಂಚಾಕ್ಷರಿ ವನ, ನಂದನ ವನ, ಸಪ್ತರ್ಷಿ ವನ ಎಂಬ 5 ದೈವೀ ವನಗಳನ್ನು ನಿರ್ಮಿಸಲಾಗಿದೆ. ರಾಶಿ ವನದಲ್ಲಿ 12 ರಾಶಿಗಳಿಗೆ ಹೊಂದಿಕೆಯಾಗುವ ಗಿಡಗಳನ್ನು ನೆಡಲಾಗಿದೆ. ಇಲ್ಲಿ 12 ರಾಶಿಯವರಿಗೆ ಹೊಂದುವ ಗಿಡಗಳನ್ನು ಬೆಳೆಯಲಾಗಿದೆ. ಅವುಗಳ ಹೆಸರು ಮತ್ತು ಯಾವ ರಾಶಿಯವರಿಗೆ ಹೊಂದುವ ಗಿಡ ಎಂಬ ವಿವರಣೆ ನೀಡಲಾಗಿದೆ.

    ಅಮೂಲ್ಯ ಸಸ್ಯ ಭಂಡಾರ: ಉತ್ತರಣೆ, ಅತ್ತಿ, ಮುತ್ತುಗ, ಅಶ್ವತ್ಥ, ಎಕ್ಕ, ಖದೀರ, ದರ್ಬೆ, ಶಮಿ, ದೂರ್ವ, ಗರಿಕೆ, ಬೋರೆ ಹಣ್ಣು, ವತ್ತೂರ, ತುಳಸಿ, ಆವಿಸ, ನಿಂಬೆ, ರಾಗಿ, ನೇರಳೆ, ಆಲ, ಚಂದನ, ಕದಂಬ, ಮಂದಾರ, ಚೂತ, ಕರವೀರ, ಬಿಲ್ವಪತ್ರೆ, ಅಶೋಕ, ನೇರಳೆ, ನಾಗಸಂಪಿಗೆ, ಸರ್ಪಗಂಧಿ, ನೆಲ ನೆಲ್ಲಿ ಸಸಿಗಳನ್ನು ಬೆಳೆಯಲಾಗಿದೆ. ದೈವೀ ವನಗಳಂತೆ ನಿತ್ಯಹರಿದ್ವರ್ಣ ವನವನ್ನು ನಿರ್ಮಿಸಲಾಗಿದೆ. ಇದರಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡು ಬರುವ ಸಸಿಗಳನ್ನು ನೆಡಲಾಗಿದೆ. ಕಾಡಿನಲ್ಲಿ ಬೆಳೆಯುವ ಹಲಸು, ಮಾವು, ನೇರಳೆ, ನಕ್ಷತ್ರ ಹಣ್ಣು, ಬಿರಿಂಡಾ ಹುಳಿ, ಮಂತು ಹುಳಿ, ಓಟೆ ಹುಳಿ, ಹೆಬ್ಬಲಸು, ಬಾದಾಮಿ, ಸೀತಾಅಶೋಕ, ಸುರಹೊನ್ನೆ, ಅಂಟುವಾಳ, ಹೊಳೆ ದಾಸವಾಳ, ನೆಲ್ಲಿ, ರಂಬುಟಾನ್, ಅಬ್ಲುಕ, ರೆಂಜೆ ಹಣ್ಣಿನ ಮರಗಳನ್ನು ನೆಡಲಾಗಿದೆ.

    ಅಳಿವಿನ ಅಂಚಿನಲ್ಲಿರುವ ಔಷಧ ಸಸ್ಯಗಳ ರಕ್ಷಣೆಗೆ ವನ ಪೂರಕವಾಗಿದೆ. ಔಷಧೀಯ ಸಸ್ಯಗಳ ಬಗ್ಗೆ ತಿಳಿಯಲು ಈ ವನ ಸಹಕಾರಿ. ಮುಂದಿನ ದಿನಗಳಲ್ಲಿ ಇಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಕಾವಲುಗಾರರ ಕುಠೀರ ನಿರ್ಮಾಣದ ಯೋಜನೆ ಇದೆ
    ಗಣೇಶ್ ತಂತ್ರಿ
    ವಲಯಾರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಲಯ ಸುಳ್ಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts