More

    ಪ್ರಜ್ಞಾವಂತನಾದರೂ ತಪ್ಪದ ನ್ಯೂನ್ಯತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಮತಾ ಎನ್.ಶೆಟ್ಟಿ ಅಭಿಮತ

    ಮಂಡ್ಯ: ಸಾಮಾಜಿಕ ಸ್ವಾಸ್ಥೃ ಕದಡುತ್ತಿರುವ ತ್ಯಾಜ್ಯ ವಿಲೇವಾರಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಮತಾ ಎನ್.ಶೆಟ್ಟಿ ಸಲಹೆ ನೀಡಿದರು.
    ನಗರದ ಡವರಿ ಕಾಲನಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬುಧವಾರ ಆಯೋಜಿಸಿದ್ದ ಜ್ಞಾನವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕವಾಗಿ ಜವಾಬ್ದಾರಿಯುತ ನಡವಳಿಕೆಗಳಿಂದ ಸಮುದಾಯದಲ್ಲಿ ಆಗುವ ಪಿಡುಗುಗಳನ್ನು ನಿರ್ಮೂಲನೆ ಮಾಡಬಹುದಾಗಿದೆ. ಇಂದು ಮನುಷ್ಯ ಎಷ್ಟೇ ಪ್ರಜ್ಞಾವಂತನಾದರೂ ಹಲವು ತಪ್ಪುಗಳಿಗೆ, ನ್ಯೂನತೆಗಳಿಗೆ ಒಳಗಾಗುತ್ತಿದ್ದಾನೆ ಎಂದು ಹೇಳಿದರು.
    ಆರೋಗ್ಯ, ಶಿಕ್ಷಣ, ಸುಶಿಕ್ಷಿತ ಮಹಿಳೆಯರಿಗೆ ತೀರಾ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿ ನಮ್ಮ ಸಂಸ್ಥೆಯು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹೀಗೆ ವಿವಿಧ ವಿಷಯಗಳ ಕುರಿತು ಅರಿವು ಮೂಡಿಸಿ ಮಹಿಳೆಯರನ್ನು ಸಮುದಾಯದ ಮುಖ್ಯವಾಹಿನಿಗೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಇಂದು ಆರ್ಥಿಕ ಅಪರಾಧಗಳು ಹೆಚ್ಚುತ್ತಿದ್ದು, ಈ ಅಪರಾಧಗಳನ್ನು ತಡೆಗಟ್ಟಲು ಹಣಕಾಸು ಶಿಸ್ತನ್ನು ರೂಢಿಸಿಕೊಳ್ಳಲು ಕಾಲಕ್ಕನುಗುಣವಾಗಿ ಮಹಿಳೆಯರಿಗೆ ತರಬೇತಿಯನ್ನು ನೀಡುತ್ತಿದ್ದೇವೆ. ಮಹಿಳೆಯರಿಂದ ಈ ಕಾರ್ಯಗಳು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.
    ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ(ಆರ್‌ಸಿಎಚ್) ಜಿಲ್ಲಾ ಅಧಿಕಾರಿ ಡಾ.ಅನಿಲ್‌ಕುಮಾರ್ ಮಾತನಾಡಿ, ವೈದ್ಯಕೀಯ ತ್ಯಾಜ್ಯ, ಎಲೆಕ್ಟ್ರಾನಿಕ್ಸ್ ತ್ಯಾಜ್ಯ ಮತ್ತು ದೈನಂದಿನ ಬದುಕಿನ ವಸ್ತುಗಳ ತ್ಯಾಜ್ಯದಿಂದಾಗಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹರಡುವಿಕೆಯೂ ಹೆಚ್ಚುತ್ತಿದ್ದು, ನಮ್ಮ ಇಲಾಖೆಯ ಆಶಾ ಕಾರ್ಯಕರ್ತೆಯರಿಂದ ಹಿಡಿದು ಬೇರೆ ಸ್ಥರದ ಸಿಬ್ಬಂದಿವರೆಗೂ ಕಾರ್ಯೋನ್ಮುಖರಾಗಿದ್ದೇವೆ. ನಾಗರೀಕರು ಜಾಗೃತಿ ಪಡೆಯದೇ ಬರೀ ಆರೋಗ್ಯ ಇಲಾಖೆ ಸಿಬ್ಬಂದಿಯಿಂದಲೇ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ರೋಗ ಬರುವ ಮುನ್ನ ಎಚ್ಚೆತ್ತುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯ ನಾಗೇಶ್ ವಹಿಸಿದ್ದರು. ಪರಿಸರ ಸಂಸ್ಥೆ ಕಾರ್ಯದರ್ಶಿ ಎಂ.ಪಿ. ಅರುಣಕುಮಾರಿ ಮಾತನಾಡಿದರು. ವಲಯ ಮೇಲ್ವಿಚಾರಕ ದಿನೇಶ್, ಸೇವಾ ಪ್ರತಿನಿಧಿ ರಮ್ಯಾ, ಆರ್.ಸಿ.ಎಫ್.ನ ಡಾ.ದಿವಾಕರ್, ಮನು ಉಪಸ್ಥಿತರಿದ್ದರು.
    ಶಿವಗಂಗಾ ಸಾಂಸ್ಕತಿಕ ಸಂಘದ ಅಧ್ಯಕ್ಷ ಸಂತೆಕಸಲಗೆರೆ ಬಸವರಾಜು ನೇತೃತ್ವದಲ್ಲಿ ತ್ಯಾಜ್ಯ ವಿಲೇವಾರಿ ಕುರಿತಾದ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಈ ಸಂದರ್ಭದಲ್ಲಿ ಸಾದರಪಡಿಸಲಾಯಿತು. ಕಲಾವಿದರಾದ ಶೇಖರ್ ಹನಿಯಂಬಾಡಿ, ಅನುಸೂಯ, ವನೇಶ್, ವೈರಮುಡಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts