More

    ಕೃಷಿ ಮೇಳ| ನೀರೀಗ ದೇವರ ತೀರ್ಥ, ಮಿತ ಬಳಕೆ ಅಗತ್ಯ: ಕೃಷಿಕರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

    ಕಳೆದ ವರ್ಷ ಪ್ರತಿ ಟನ್​ಗೆ 13 ಸಾವಿರ ರೂ. ಇದ್ದ ಜೋಳದ ಬೆಲೆ ಈ ಬಾರಿ 18ರಿಂದ 22 ಸಾವಿರ ರೂ. ತಲುಪಿದೆ. ಬೆಲೆ ಏರಿಕೆ ಆಯಿತು ಎನ್ನುವ ಕಾರಣಕ್ಕಾಗಿ ಮುಂದಿನ ವರ್ಷ ಹೆಚ್ಚಿನ ರೈತರು ಜೋಳ ಬೆಳೆಯುತ್ತಾರೆ. ಇದರಿಂದ ಬೇಡಿಕೆಗಿಂತಲೂ ಉತ್ಪಾದನೆ ಪ್ರಮಾಣ ಹೆಚ್ಚಾಗಿ ಬೆಲೆ ಕುಸಿಯುತ್ತದೆ. ಕೃಷಿಕರು ನಷ್ಟ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಬೇಡಿಕೆಗೆ ತಕ್ಕಷ್ಟೇ ಬೆಳೆ ಬೆಳೆಯುವಂತೆ ಜಾಗೃತಿ ಮೂಡಿಸಬೇಕು. ರೈತರೇ ಬೆಲೆ ನಿಯಂತ್ರಿಸುವ ವ್ಯವಸ್ಥೆ ರೂಪಿಸಬೇಕು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

    ಕೃಷಿಗೆ ಅತ್ಯಗತ್ಯ ನೀರನ್ನು ಯಾವುದೇ ಕಾರ್ಖಾನೆಯಲ್ಲಿಯೂ ತಯಾರಿಸಲು ಸಾಧ್ಯವಾಗುವುದಿಲ್ಲ. ದೇವರು ಕೊಟ್ಟಾಗಷ್ಟೇ ಮಳೆಯಾಗುತ್ತದೆ. ದೇವಸ್ಥಾನದಲ್ಲಿ ತೀರ್ಥ ನೀಡಿದಾಗ ಒಂದು ಹನಿಯೂ ಕೆಳಗೆ ಬೀಳದಂತೆ ಸೇವಿಸುವ ನಾವು ಕೃಷಿಯಲ್ಲಿಯೂ ಅದೇ ಮಾರ್ಗ ಅನುಸರಿಸಬೇಕು. ನೀರಿನ ಸಮರ್ಪಕ ಬಳಕೆ ಬಗ್ಗೆ ಕೃಷಿಕರು ಅರಿವು ಬೆಳೆಸಿಕೊಂಡರೆ ಅವರನ್ನು ಕಾಡುತ್ತಿರುವ ಮಧ್ಯವರ್ತಿಗಳ ಹಾವಳಿಯಿಂದಲೂ ತಪ್ಪಿಸಿಕೊಳ್ಳಬಹುದು ಎಂದರು.

    ಹೈನುಗಾರರನ್ನು ಬೆಲೆ ಏರಿಳಿತದಿಂದ ಪಾರು ಮಾಡಲು ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಬೆಲೆಯಾಗಿ 20 ರೂ. ನಿಗದಿಪಡಿಸಬೇಕು. 10 ರೂ. ಸಹಾಯಧನ ಸೇರಿ ರೈತರಿಗೆ ಪ್ರತಿ ಲೀಟರ್​ಗೆ 30 ರೂ. ದೊರೆಯುವಂತಾಗಲಿ ಎನ್ನುವ ಚಿಂತನೆ ನಡೆದಿದೆ. ಇಂದು ರಾಜ್ಯದ 14 ಹಾಲು ಒಕ್ಕೂಟಗಳ 10 ಲಕ್ಷ ರೈತರನ್ನು ಕೆಎಂಎಫ್ ಆರ್ಥಿಕ ಸಂಕಷ್ಟದಿಂದ ರಕ್ಷಿಸುತ್ತಿದೆ. ಬಿ.ಎಸ್.ಯಡಿಯೂರಪ್ಪ ಹೈನುಗಾರರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಿದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. ದೇಶದ ಒಟ್ಟು ಕೃಷಿ ಉತ್ಪಾದನೆಯ ಶೇ.27 ಆದಾಯ ಹೈನುಗಾರಿಕೆಯಿಂದಲೇ ಬರುತ್ತಿದೆ. ಕೆಎಂಎಫ್ ತನ್ನ 14 ಒಕ್ಕೂಟಗಳ ಮೂಲಕ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts