More

    ಇಂದು ಮುಂಬೈ-ಕೆಕೆಆರ್ ಹಣಾಹಣಿ ; ಪುಟಿದೇಳುವ ವಿಶ್ವಾಸದಲ್ಲಿ ರೋಹಿತ್ ಬಳಗ

    ಅಬುಧಾಬಿ: ನಾಯಕ ರೋಹಿತ್ ಶರ್ಮ ವಾಪಸಾತಿಯಿಂದ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-14ರ 2ನೇ ಭಾಗದ ತನ್ನ 2ನೇ ಹಣಾಹಣಿಯಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು ಗುರುವಾರ ಎದುರಿಸಲಿದೆ. ಆರ್‌ಸಿಬಿ ಎದುರು ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಕೆಕೆಆರ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಲೀಗ್ ಇತಿಹಾಸ ಗಮನಿಸಿದರೆ ಕೆಕೆಆರ್ ಎದುರು ಶೇಕಡ 78.57 ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್ ತಂಡ ಅರಬ್ ನೆಲದಲ್ಲಿ ಗೆಲುವಿನ ಹಳಿಗೇರುವ ತವಕದಲ್ಲಿದೆ. 2 ತಂಡಗಳ ಕಡೇ 13 ಮುಖಾಮುಖಿಯಲ್ಲಿ ಮುಂಬೈ ತಂಡವೇ 12 ಬಾರಿ ಗೆಲುವು ದಾಖಲಿಸಿದೆ. ಎರಡನೇ ಭಾಗದ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಎದುರು ಹೀನಾಯವಾಗಿ ಶರಣಾಗಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಾಪಸಾಗಿದ್ದಾರೆ.

    ಪುಟಿದೇಳುವ ವಿಶ್ವಾಸದಲ್ಲಿ ಮುಂಬೈ: ಸಿಎಸ್‌ಕೆ ಎದುರು ಬೌಲಿಂಗ್‌ನಲ್ಲಿ ಗಮನಸೆಳೆದರೂ ಬ್ಯಾಟಿಂಗ್‌ನಲ್ಲಿ ಗಣನೀಯ ವೈಫಲ್ಯ ಅನುಭವಿಸಿದ್ದ ಮುಂಬೈ ತಂಡ 20 ರನ್‌ಗಳಿಂದ ಸೋಲು ಕಂಡಿತ್ತು. ಲೀಗ್‌ನಲ್ಲಿ ಇದುವರೆಗೆ ಆಡಿರುವ 8 ಪಂದ್ಯಗಳಿಂದ ತಲಾ 4ರಲ್ಲಿ ಗೆಲುವು, ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಮೇಲೇರುವ ದೃಷ್ಟಿಯಿಂದ ಈ ಪಂದ್ಯ ಪ್ರಮುಖವಾಗಿದೆ. ಸೌರಭ್ ತಿವಾರಿ ಅಜೇಯ ಅರ್ಧಶತಕ ಹೊರತುಪಡಿಸಿ ಮುಂಬೈ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಹಿಂದಿನ ಪಂದ್ಯದಲ್ಲಿ ವಿಫಲರಾಗಿದ್ದರು. ಉಳಿದಿರುವ 6 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆದ್ದರೂ ಮುಂಬೈ ತಂಡದ ಪ್ಲೇಆ್ ಹಾದಿ ಸುಗಮವಾಗಲಿದೆ.

    ಆತ್ಮವಿಶ್ವಾಸದಲ್ಲಿ ಕೆಕೆಆರ್: ಆರ್‌ಸಿಬಿ ಎದುರು 9 ವಿಕೆಟ್ ಜಯ ದಾಖಲಿಸಿದ್ದ ಕೆಕೆಆರ್, ಮುಂಬೈ ಎದುರು ಮೊದಲ ಹಣಾಹಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಲೀಗ್‌ನಲ್ಲಿ ಮುಂಬೈ ಎದುರು ಅತಿಹೆಚ್ಚು ಸೋಲನುಭವಿಸಿರುವ ತಂಡ ಎಂಬ ಅನಾಪೇಕ್ಷಿತ ದಾಖಲೆಗೆ ತುತ್ತಾಗಿರುವ ಕೆಕೆಆರ್ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 3 ಜಯ, 5 ಸೋಲು ಕಂಡಿದ್ದು, ಉಳಿದ 6 ಪಂದ್ಯಗಳಲ್ಲೂ ಮಾಡು ಇಲ್ಲವೇ ಮಡಿ ಮಾದರಿಯಲ್ಲಿ ಹೋರಾಡಬೇಕಿದೆ. 2014ರಲ್ಲೂ ಇದೇ ಸ್ಥಿತಿಯಲ್ಲಿದ್ದ ಕೆಕೆಆರ್, ಸತತ 9 ಪಂದ್ಯಗಳನ್ನು ಜಯಿಸಿ ಪ್ರಶಸ್ತಿ ಜಯಿಸಿತ್ತು. ಸ್ಪಿನ್ನರ್ ವರುಣ್ ಚಕ್ರವರ್ತಿ, ವೇಗಿ ಆಂಡ್ರೆ ರಸೆಲ್ ಬೌಲಿಂಗ್‌ನಲ್ಲಿ ಆರ್‌ಸಿಬಿಗೆ ಕಡಿವಾಣ ಹಾಕಿದರೆ, ಶುಭಮಾನ್ ಗಿಲ್ ಹಾಗು ವೆಂಕಟೇಶ್ ಅಯ್ಯರ್ ಆರಂಭಿಕ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದಿತ್ತು. ಇದೀಗ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು ಸ್ಫೂರ್ತಿಯುತ ಹೋರಾಟಕ್ಕೆ ಕೆಕೆಆರ್ ಸನ್ನದ್ಧವಾಗಿದೆ.

    ಮುಖಾಮುಖಿ: 28, ಮುಂಬೈ ಇಂಡಿಯನ್ಸ್: 22, ಕೆಕೆಆರ್: 6
    ಹಿಂದಿನ ಹಣಾಹಣಿ: ಮುಂಬೈ ತಂಡಕ್ಕೆ 10 ರನ್ ಜಯ

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್

    ಟೀಮ್ ನ್ಯೂಸ್:
    ಮುಂಬೈ ಇಂಡಿಯನ್ಸ್: ಫಿಟ್ನೆಸ್ ಸಮಸ್ಯೆಯಿಂದಾಗಿ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮ ಹಾಗೂ ಹಾರ್ದಿಕ್ ಪಾಂಡ್ಯ ಈ ಪಂದ್ಯಕ್ಕೆ ಫಿಟ್ ಆಗಿದ್ದು, ತಂಡದಲ್ಲಿ ಕನಿಷ್ಠ ಎರಡು ಬದಲಾವಣೆ ಪಕ್ಕಾ ಆಗಿದೆ. ರೋಹಿತ್ ಬಂದರೆ ಅನ್ಮೋಲ್‌ಪ್ರೀತ್ ಸಿಂಗ್ ಹೊರಗುಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಸ್ಥಾನಗಿಟ್ಟಿಸಿಕೊಂಡರೆ, ಕೃನಾಲ್ ಪಾಂಡ್ಯಗೆ ಕೊಕ್ ನೀಡಬಹುದು.

    ಕೆಕೆಆರ್: ಆರ್‌ಸಿಬಿ ಎದುರು ಭರ್ಜರಿ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ಕೆಕೆಆರ್ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಆರಂಭಿಕ ವೆಂಕಟೇಶ್ ಅಯ್ಯರ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದು, ಮತ್ತೊಮ್ಮೆ ಇನಿಂಗ್ಸ್ ಆರಂಭಿಸಲಿದ್ದಾರೆ.

    * 50: ಶುಭಮಾನ್ ಗಿಲ್ ಪಾಲಿಗೆ 50ನೇ ಐಪಿಎಲ್ ಪಂದ್ಯ ಇದಾಗಲಿದೆ.

    * 18: ರೋಹಿತ್ ಶರ್ಮ ಇನ್ನು 18 ರನ್ ಪೇರಿಸಿದರೆ, ತಂಡವೊಂದರ ವಿರುದ್ಧ ಅತಿವೇಗವಾಗಿ ಸಾವಿರ ರನ್ ಪೇರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಕೆಕೆಆರ್ ಎದುರು ರೋಹಿತ್ ಶರ್ಮ, ಇದುವರೆಗೂ ಸರಾಸರಿ 49.10 ರಂತೆ 982 ರನ್ ಪೇರಿಸಿದ್ದು, ಸ್ಟ್ರೈಕ್ ರೇಟ್ 133.06 ಹೊಂದಿದ್ದಾರೆ.

    *13: ಮುಂಬೈ ಇಂಡಿಯನ್ಸ್ ತಂಡ ಕೆಕೆಆರ್ ಎದುರು ಆಡಿರುವ ಕಡೇ 13 ಪಂದ್ಯಗಳಲ್ಲಿ 12ರಲ್ಲಿ ಜಯ ದಾಖಲಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts