More

    ಕಿತ್ತೂರು ಕೋಟೆಯೊಳಗೆ ಸ್ವಚ್ಛತೆ ಮಾಯ!

    ಚನ್ನಮ್ಮ ಕಿತ್ತೂರು: ವೀರರಾಣಿ ಚನ್ನಮ್ಮಳ ಐತಿಹಾಸಿಕ ಕೋಟೆ ಪ್ರಾಣಿ, ಸರಿಸೃಪಗಳ ವಾಸಸ್ಥಾನವಾಗಲಾರಂಭಿಸಿದ್ದು, ಪ್ರವಾಸಿಗರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಕೋಟೆ ಆವರಣ ಸಾಕಷ್ಟು ಹುಲ್ಲು, ಗಿಡಗಂಟಿಗಳಿಂದ ಆವರಿಸಿದ್ದು, ಮುಳ್ಳು ಹಂದಿ, ಹಾವು ಕಾಣಿಸಿಕೊಂಡು ಜನರನ್ನು ಭೀತಿಗೊಳಗಾಗಿದ್ದಾರೆ.

    ಕೋಟೆ ಆವರಣದಲ್ಲಿ ಸಾಕಷ್ಟು ಗಿಡಗಂಟಿ ಬೆಳೆದಿದ್ದು, ಸರಿಯಾಗಿ ನಿರ್ವಹಣೆಯಾಗದೆ ಮಳೆಗಾಲದದಲ್ಲಿ ಕಸ ಬೆಳೆದು ನಿಂತಿದೆ. ನೆಪ ಮಾತ್ರಕ್ಕೆ ಅಲ್ಲಲ್ಲಿ ಸ್ವಚ್ಛತೆ ಕಾಪಾಡಿದ್ದು, ಕೋಟೆಯ ಒಳಗೆ ಹಾಗೂ ಅರ್ಧ ಭಾಗದಷ್ಟು ತೋಟದ ಜಾಗ ಕಾಡಿನಂತೆ ಭಾಸವಾಗುತ್ತಿದೆ. ಕೋಟೆಯು ಮೂರು ಸುತ್ತಿನಿಂದ ಕೂಡಿದ್ದು, ಕೋಟೆಯ ಆವರಣದಲ್ಲಿ ಕಾಡು ಪ್ರಾಣಿಗಳು ಪ್ರತ್ಯಕ್ಷ ಆಗುತ್ತಿವೆ. ಕತ್ತಲಾಗುತ್ತಿದಂತೆ ಪ್ರಾಣಿಗಳು ನಿರಾತಂಕವಾಗಿ ಸಂಚರಿಸುತ್ತಿವೆ. ಕೋಟೆ ಸುತ್ತ ಕೂಡ ಗಿಡಗಂಟಿ ಬೆಳೆದಿದೆ. ಕೋಟೆ ಆವರಣದ ಪಾದಚಾರಿ ರಸ್ತೆ ಪಕ್ಕದ ಹಾಸುಹುಲ್ಲಿನಲ್ಲಿ ಕೊಳಕುಮಂಡಲ ಹಾವು ಹಗಲು, ರಾತ್ರಿ ಸಂಚರಿಸುತ್ತಿವೆ. 3 ಅಡಿ ಉದ್ದದ ಎರಡು ಕೊಳಕುಮಂಡಲ ಹಾವು ಹಾಗೂ ಮರಿಗಳು ಕಾಣಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದೆಲ್ಲ ಅಧಿಕಾರಿಗಳ ಗಮನಕ್ಕೆ ಬಂದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.

    ಕತ್ತಲಲ್ಲಿ ವಾಕಿಂಗ್: ಬೆಳಗಿನ ಜಾವ ಹಾಗೂ ಸಂಜೆ ಸಮಯದಲ್ಲಿ ಸಾರ್ವಜನಿಕರು ವಾಯುವಿಹಾರಕ್ಕೆ ಬರುತ್ತಾರೆ. ಆ ಸಮಯದಲ್ಲಿ ಕೋಟೆ ಆವರಣದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಕೂಡ ನಿರ್ವಹಣೆಯಾಗುತ್ತಿಲ್ಲ. ಕುಟುಂಬ ಸಮೇತ ಕಾಲಕಳೆಯಲೆಂದು ಹಾಸು ಹುಲ್ಲಿನಲ್ಲಿ ಕುಳಿತು ಉಪಾಹಾರ ಸೇವಿಸುತ್ತ ಕುಳಿತುಕೊಳ್ಳುವ ಜನರು, ಮಕ್ಕಳನ್ನು ಆಟವಾಡಲು ಬಿಟ್ಟಿರುತ್ತಾರೆ. ಹಾವು ಕಚ್ಚಿದರೆ ಅಪಾಯ ಕಟ್ಟಿಟ್ಟ ಬುತ್ತಿ.

    ಸಂಬಂಧಪಟ್ಟ ಅಧಿಕಾರಿಗಳು ಕೋಟೆ ಆವರಣದಲ್ಲಿ ಸ್ವಚ್ಛತೆ ಕಾಪಾಡಿ, ಹಾವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಕ್ರಮ ಕೈಗೊಳ್ಳಬೇಕು. ಕೋಟೆ ಆವರಣದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಿ ಕೋಟೆಗೆ ಬರುವ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ಸೂಚಿಸುವ ಲಕಗಳನ್ನು ಅಳವಡಿಸಬೇಕು. ಜನರನ್ನು ಅಪಾಯದಿಂದ ಕಾಪಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಕಿತ್ತೂರು ಕೋಟೆ ಆವರಣದಲ್ಲಿ ಬೆಳೆದಿರುವ ಗಿಡಗಂಟಿ ತಕ್ಷಣ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗುವುದು. ಕೋಟೆಯಲ್ಲಿ ಸ್ವಚ್ಛತೆ ಕೈಗೊಳ್ಳಲು ಕ್ರಮವಹಿಸಲಾಗುವುದು.
    | ರವೀಂದ್ರ ಹಾದಿಮನಿ, ತಹಸೀಲ್ದಾರ್ ಕಿತ್ತೂರು

    ಕಿತ್ತೂರು ಕೋಟೆ ಸ್ವಚ್ಛತೆ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಇಲ್ಲಿಯವರೆಗೆ ಕೋಟೆಯಲ್ಲಿ ಯಾವ ಅಭಿವೃದ್ಧಿ ಕೆಲಸವೂ ಆಗಿಲ್ಲ.
    | ಎಂ.ಎಂ.ಜಕಾತಿ, ಪಪಂ ಸದಸ್ಯರು

    | ನಾಗರಾಜ ಜೋರಾಪುರ ಚನ್ನಮ್ಮ ಕಿತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts