More

    ಸಿಎಆರ್​ನಲ್ಲಿ ರಜೆಗೂ ಲಂಚವಂತೆ…!

    ಹುಬ್ಬಳ್ಳಿ: ಎರಡು ದಿನ ರಜೆಗೆ 500 ರೂಪಾಯಿ, ನಾಲ್ಕು ದಿನಕ್ಕೆ 1,000 ಲಂಚ, ವಾರಕ್ಕೆ 2,000 ರೂಪಾಯಿ ಲಂಚ, ವಿಐಪಿ, ಮೇಲಧಿಕಾರಿ ಗನ್ ಮ್ಯಾನ್ ನಿಯೋಜನೆಗೆ 20ರಿಂದ 30 ಸಾವಿರ ರೂಪಾಯಿ ವರೆಗೆ ಲಂಚ ಕೊಡಬೇಕು…

    ಇದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ವಿಭಾಗದ ಅಧಿಕಾರಿಗಳ ಲಂಚಾವತಾರದ ಜಲಕ್. ಸಿಎಆರ್​ನ ಕೆಲ ರಿಸರ್ವ್ ಪೊಲೀಸ್ ಇನ್​ಸ್ಪೆಕ್ಟರ್ (ಆರ್​ಪಿಐ)ಗಳ ಈ ಲಂಚಗುಳಿತನದಿಂದ ಸಿಬ್ಬಂದಿ ಬೇಸತ್ತು ಹೋಗಿದ್ದಾರೆ. ಈ ವಿಷಯ ಪೊಲೀಸ್ ಆಯುಕ್ತ ಲಾಭೂರಾಮ ಅವರಿಗೂ ತಲುಪಿದೆ.

    ಐದಾರು ದಿನಗಳ ಹಿಂದೆ ಈ ಕುರಿತು ಸಿಎಆರ್ ಸಿಬ್ಬಂದಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ವಿಷಯ ತಿಳಿದ ಕೂಡಲೆ ಪೊಲೀಸ್ ಆಯುಕ್ತರು ಸಿಎಆರ್ ಕಚೇರಿಗೆ ಧಾವಿಸಿ ಅಧಿಕಾರಿ- ಸಿಬ್ಬಂದಿಯ ತುರ್ತು ಸಭೆ ನಡೆಸಿದ್ದರು. ಆ ವೇಳೆ ‘ನಮ್ಮ ರಜೆ ನಮಗೆ ಕೊಡಲು ಆರ್​ಪಿಐ ಅಧಿಕಾರಿ ಲಂಚ ಕೇಳುತ್ತಾರೆ’ ಎಂದು ಕೆಲ ಸಿಬ್ಬಂದಿ ನೇರಾನೇರ ಆರೋಪಿಸಿದ್ದಾರೆ. ಹೌದೇನಪ್ಪ ಎಂದು ಪೊಲೀಸ್ ಆಯುಕ್ತರು ಅಧಿಕಾರಿಯನ್ನು ಪ್ರಶ್ನಿಸಿದಾಗ, ‘ಇಲ್ಲ ಸರ್, ಇಲ್ಲ ಸರ್’ ಎಂದು ತಡಬಡಾಯಿಸಿದ್ದಾರೆ ಎಂದು ಬಲ್ಲ ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.

    ಸಿಬ್ಬಂದಿಯ ಈ ಆರೋಪವನ್ನು ಪೊಲೀಸ್ ಆಯುಕ್ತರು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಿಎಆರ್ ಸಂಪೂರ್ಣ ಭ್ರಷ್ಟಮುಕ್ತವಾಗಬೇಕು ಎಂಬುದು ಸಿಬ್ಬಂದಿಯ ಕೋರಿಕೆ.

    ಕ್ವಾರ್ಟರ್ಸ್ ಹಂಚಿಕೆಯಲ್ಲೂ ಲಂಚ: ಪೊಲೀಸ್ ಕ್ವಾರ್ಟರ್ಸ್ ಹಂಚಿಕೆಯಲ್ಲೂ ಲಂಚದ ವಾಸನೆ ಇದೆ. ಅವಳಿ ನಗರದಲ್ಲಿ 800ಕ್ಕೂ ಅಧಿಕ ಕ್ವಾರ್ಟರ್ಸ್​ಗಳಿವೆ. ಒಂದು ಮನೆ ಆಯ್ಕೆ ಮಾಡಲು ಸಿಬ್ಬಂದಿಯಿಂದ 5ರಿಂದ 8 ಸಾವಿರ ರೂ. ಲಂಚ ಪಡೆಯುತ್ತಾರೆ. ಕಾರವಾರ ರಸ್ತೆಯ ಹೊಸ ಕ್ವಾರ್ಟರ್ಸ್​ನ ಡಬಲ್ ಬೆಡ್ ರೂಮ್ ಮನೆಗೆ 10ರಿಂದ 20 ಸಾವಿರ ರೂ.ವರೆಗೆ ಲಂಚ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    50 ಸಾವಿರ ರೂ.ಗೆ ಗನ್​ವ್ಯಾನ್ ನಿಯುಕ್ತಿ

    ನಗರದ ಗಣ್ಯರೊಬ್ಬರ ಬಳಿ ಇದ್ದ ಗನ್​ವ್ಯಾನ್ ಒಬ್ಬರು ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಆ ಜಾಗಕ್ಕೆ ಗನ್​ವ್ಯಾನ್ ಆಗಿ ನಿಯುಕ್ತಿಗೊಳಿಸಲು ಮೇಲಧಿಕಾರಿಯೊಬ್ಬರು ಬರೊಬ್ಬರಿ 50 ಸಾವಿರ ರೂಪಾಯಿ ಪಡೆದಿದ್ದಾರೆ. ಅಧಿಕಾರಿಗಳ ಗನ್​ವ್ಯಾನ್ ಆಗಲು 10ರಿಂದ 20 ಸಾವಿರ ರೂ. ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಬ್ಯಾಂಕ್ ಎಸ್ಕಾರ್ಟ್ ಭತ್ಯೆ ಗುಳುಂ

    ಎಸ್ಕಾರ್ಟ್ ಕರ್ತವ್ಯಕ್ಕೆ ಬರುವ ಸಿಬ್ಬಂದಿಗೆ ಬ್ಯಾಂಕ್​ನವರು ಭತ್ಯೆ ನೀಡುತ್ತಾರೆ. ಆರ್​ಎಸ್​ಐಗೆ 1,500 ರೂ., ಎಎಸ್​ಐಗೆ 1,000 ರೂ., ಕಾನ್​ಸ್ಟೇಬಲ್​ಗೆ 500 ರೂ. ಊಟದ ಭತ್ಯೆ ಕೊಡುತ್ತಾರೆ. ಈ ಹಣವನ್ನೂ ಬಿಡದ ಆರ್​ಪಿಐ ಒಬ್ಬರು ನೇರವಾಗಿ ಬ್ಯಾಂಕ್ ಅಧಿಕಾರಿ ಬಳಿ ಹೋಗಿ ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆಯೂ ಸಿಬ್ಬಂದಿ ಪೊಲೀಸ್ ಆಯುಕ್ತರ ಬಳಿ ದೂರಿದ್ದಾರೆ.

    ಸಿಎಆರ್ ಸಿಬ್ಬಂದಿ ಬಳಿ ರಜೆಗಾಗಿ ಲಂಚ ಪಡೆಯುವ ಆರೋಪ ಕುರಿತು ಪರಿಶೀಲಿಸುವಂತೆ ಸಿಎಆರ್ ಡಿಸಿಪಿ ಎಸ್.ಸಿ. ಯಾದವ ಅವರಿಗೆ ಸೂಚಿಸಿದ್ದೇನೆ. ಬ್ಯಾಂಕ್ ಎಸ್ಕಾರ್ಟ್​ಗೆ ನಿಯೋಜನೆಗೊಂಡ ಸಿಬ್ಬಂದಿಗೆ ಬ್ಯಾಂಕ್​ನವರು ನೀಡುವ ಭತ್ಯೆಯನ್ನೂ ಅಧಿಕಾರಿಗಳು ವಸೂಲಿ ಮಾಡಿದ ಕುರಿತು ವಿಚಾರಣೆ ನಡೆಸುತ್ತಿದ್ದೇನೆ. ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು.
    | ಲಾಭೂರಾಮ, ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts