More

  ಖಾಕಿ ಜಾಲತಾಣಕ್ಕೆ 36 ಸಾವಿರ ಹಿಂಬಾಲಕರು!

  | ಜಗದೀಶ ಹೊಂಬಳಿ ಬೆಳಗಾವಿ

  ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಮಹಿಳೆ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಕಮೀಷನರೇಟ್ ಘಟಕ ತೆರೆದಿರುವ ಸಾಮಾಜಿಕ ಜಾಲತಾಣಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಸಂಚಾರ ಉಲ್ಲಂಘನೆ, ಅಪರಾಧ ಪ್ರಕರಣ ಸೇರಿ ಅಕ್ರಮ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಪೊಲೀಸರು ಒಂದೂವರೆ ವರ್ಷದ ಹಿಂದೆ ಜಾರಿಗೆ ತಂದಿರುವ ವಾಟ್ಸ್‌ಆಪ್, ಫೇಸ್‌ಬುಕ್ ಹಾಗೂ ಟ್ವಿಟರ್‌ಗಳ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲಾಖೆಯ ಫೇಸ್‌ಬುಕ್‌ಗೆ ಇದುವರೆಗೂ ಸುಮಾರು 36 ಸಾವಿರ ಫಾಲೋವರ್ಸ್‌ಗಳಾಗಿದ್ದಾರೆ.

  ದಿನವೂ ದೂರು: ಪ್ರತಿನಿತ್ಯ ವಾಟ್ಸ್‌ಆಪ್ ಮೂಲಕ 15-20 ದೂರುಗಳು ದಾಖಲಾಗುತ್ತಿವೆ. ಟ್ವಿಟರ್ ಮೂಲಕ ದಿನವೂ 2-3 ಜನರಿಂದ ದೂರು ಸಲ್ಲಿಕೆಯಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ಆಯಕ್ತರ ಕಚೇರಿ ಸಿಬ್ಬಂದಿ, ಆಯಾ ಠಾಣಾಧಿಕಾರಿಗಳ ಕಚೇರಿಗೆ ಸಲ್ಲಿಸುತ್ತಿದ್ದಾರೆೆ. ಆ ಮೂಲಕ ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ.

  ಯಾವುದೇ ದೂರಿದ್ದರೂ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಬರುವುದಕ್ಕೆ ಹಿಂಜರಿಯುತ್ತಾರೆ. ಸಾರ್ವಜನಿಕರಿಗೆ ಇರುವ ಸಮಸ್ಯೆ ನಿವಾರಿಸಲೆಂದೇ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದೇವೆ. ಈ ಮೂಲಕ ಪೊಲೀಸ್ ಇಲಾಖೆಯನ್ನು ಜನಹ್ನೇಹಿ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

  ಸಾಮಾಜಿಕ ಜಾಲತಾಣಗಳ ಮೂಲಕ ದಾಖಲಾಗುತ್ತಿರುವ ದೂರುಗಳಲ್ಲಿ ಶೇ. 50ರಷ್ಟು ದೂರುಗಳು ಸಂಚಾರ ಉಲ್ಲಂಘನೆ ಪ್ರಕರಣಗಳೇ ಇರುತ್ತವೆ. ನಂತರದ ಸ್ಥಾನದಲ್ಲಿ ಜೂಜಾಟ, ಅಕ್ರಮ ಚಟುವಟಿಕೆಗಳ ಕುರಿತಂತೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ.

  ದೂರು ಸಲ್ಲಿಸುವವರಿಗೂ ಜಾಗೃತಿ

  ವಾಟ್ಸ್‌ಆಪ್‌ಗೆ ಕರೆ ಮಾಡಿ ದೂರು ಸಲ್ಲಿಸುವ ಸಾರ್ವಜನಿಕರಿಗೆ ಇಲಾಖೆ ಸಿಬ್ಬಂದಿ ಸೈಬರ್ ಕ್ರೈಂ ನಿಯಂತ್ರಿಸುವ ಕುರಿತು ಜಾಗೃತಿ ಮೂಡಿಸುತ್ತಾರೆ. ಜತೆಗೆ ವೈಯಕ್ತಿಕ ರಕ್ಷಣೆ ಕುರಿತಂತೆ ಅರಿವು ಮೂಡಿಸುತ್ತಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ದಾಖಲಾಗುತ್ತಿರುವ ದೂರು, ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಪೊಲೀಸ್ ಇಲಾಖೆ ತನ್ನ ಕಾರ್ಯವೈಖರಿಯಲ್ಲೂ ಬದಲಾವಣೆ ಮಾಡಿಕೊಳ್ಳುತ್ತಿದೆ. ವಾಟ್ಸ್‌ಆಪ್ ಮತ್ತು ಫೇಸ್‌ಬುಕ್ ಪೇಜ್‌ಗಳಲ್ಲಿ ದಾಖಲಾಗುತ್ತಿರುವ ಪ್ರತಿಕ್ರಿಯೆಗಳು, ದೂರುಗಳು ಪರಿಣಾಮಕಾರಿ ಬದಲಾವಣೆಗೆ ಕಾರಣವಾಗುತ್ತಿವೆ. ತುರ್ತು ಸಂದರ್ಭದಲ್ಲಿ ದೂರು, ಸಲಹೆ ನೀಡಿದ ವ್ಯಕ್ತಿಗಳಿಗೆ ವೈಯಕ್ತಿವಾಗಿಯೂ ಸಂದೇಶ ಕಳುಹಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಸುತ್ತಲಿನ ಪ್ರದೇಶದ ಸಮಸ್ಯೆ ಅಥವಾ ದೂರುಗಳನ್ನು ನೀಡುವುದಾದರೆ ವಾಟ್ಸ್‌ಆಪ್ 9483931100 ಸಂಖ್ಯೆ ಬಳಸಬಹುದು ಎಂದು ಬೆಳಗಾವಿ ನಗರ ಪೊಲೀಸರು ತಿಳಿಸಿದ್ದಾರೆ.

  ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಹಾಗೂ ಅಪರಾಧ ಪ್ರಕರಣ ತಡೆಗಟ್ಟಲು ಸಾಮಾಜಿಕ ಮಾಧ್ಯಮಗಳೂ ಸಹಕಾರಿ ಆಗುತ್ತಿವೆ. ಇಲಾಖೆಯ ಫೇಸ್‌ಬುಕ್, ವಾಟ್ಸ್‌ಆಪ್‌ಗಳಿಗೆ ಜನರು ದೂರು ನೀಡುತ್ತಿದ್ದಾರೆ. ಸಂಗ್ರಹವಾಗುವ ದೂರುಗಳನ್ನು ಆಯಾ ಠಾಣೆಗಳ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಇಲಾಖೆ ತೆರೆದಿರುವ ಫೇಸ್‌ಬುಕ್‌ನ ಫಾಲೋವರ್ಸ್‌ಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಇದು ಅಪರಾಧ ಪ್ರಕರಣ ತಡೆಗೂ ಸಹಕಾರಿಯಾಗಲಿದೆ.
  | ಬಿ.ಎಸ್. ಲೋಕೇಶಕುಮಾರ ಪೊಲೀಸ್ ಆಯುಕ್ತ, ಬೆಳಗಾವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts