More

    ಸಮುದ್ರ ಇಲ್ಲದ ಕಡೆಗೂ ತಾಜಾ ಮೀನು, 8 ಶಾಖ ನಿರೋಧಕ ವಾಹನ ಶೀಘ್ರ ಕಾರ್ಯಾರಂಭ

    – ಪ್ರಕಾಶ್ ಮಂಜೇಶ್ವರ ಮಂಗಳೂರು
    ಬೆಂಗಳೂರು ಸಹಿತ ಸಮುದ್ರ ಹತ್ತಿರ ಇಲ್ಲದ ಕರ್ನಾಟಕದ ಇತರ ಪ್ರದೇಶಗಳಿಗೆ ಇನ್ನು ಕರಾವಳಿಯ ಮಂಗಳೂರು ಮತ್ತು ಮಲ್ಪೆಯ ತಾಜಾ ಹಸಿ ಮೀನು ತಲುಪಲಿದೆ. ರಾಜ್ಯದ ವಿವಿಧೆಡೆ ಇರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ(ಕೆಎಫ್‌ಡಿಸಿ)ದ 21 ಹವಾನಿಯಂತ್ರಿತ ಮೀನು ಹಾಗೂ ಮೀನಿನ ಉತ್ಪನ್ನಗಳ ‘ಮತ್ಸೃದರ್ಶಿನಿ’ ಮಳಿಗೆಗಳಿಗೆ ತಾಜಾ ಮೀನು ತಲುಪಿಸಲು 8 ಶಾಖ ನಿರೋಧಕ ವಾಹನಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ.

    ನಾಲ್ಕು ಟನ್ ಮತ್ತು ಎರಡು ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಹೊಂದಿರುವ ತಲಾ ನಾಲ್ಕು ವಾಹನಗಳನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು 2020- 21ನೇ ರಾಷ್ಟ್ರೀಯ ಕೃಷಿ ಯೋಜನೆಯಡಿ ಸರ್ಕಾರದಿಂದ ಅನುಮೋದನೆ ದೊರೆತಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

    ಮತ್ಸೃದರ್ಶಿನಿ ವ್ಯವಹಾರ: ಕೆಎಫ್‌ಡಿಸಿ ರಾಜ್ಯದ ವಿವಿಧೆಡೆ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ ‘ಮತ್ಸೃದರ್ಶಿನಿ’ ಉಪಾಹಾರ ಗೃಹಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮೀನು ಹಾಗೂ ಮೀನಿನ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ. ಈ ವ್ಯವಹಾರದಿಂದ 2019- 20ನೇ ಸಾಲಿನಲ್ಲಿ ಮಳಿಗೆಗಳಿಂದ 11.68 ಕೋಟಿ ರೂ. ವ್ಯವಹಾರ ನಡೆದಿದೆ.

    ಬೆಂಗಳೂರು, ಮೈಸೂರು, ಹಾಸನ, ಮಡಿಕೇರಿ, ತುಮಕೂರು, ಕೋಲಾರ, ಶಿವಮೊಗ್ಗ ಸಹಿತ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಈ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆಗಳಿವೆ. ಕರೊನಾ ಲಾಕ್‌ಡೌನ್ ಅನ್‌ಲಾಕ್ ಬಳಿಕ ಖಾಸಗಿ ಸಂಸ್ಥೆಗಳು ಗಮನಾರ್ಹ ಸಂಖ್ಯೆಯಲ್ಲಿ ಕೆಎಫ್‌ಡಿಸಿ ಏಜೆನ್ಸಿ ಪಡೆದು ಮಳಿಗೆಗಳನ್ನು ತೆರೆಯುತ್ತಿವೆ. ಈ ತನಕ ನಿಗಮವು ಐಸ್ ತುಂಬಿದ ಲಾರಿಗಳಲ್ಲಿ ತನ್ನ ಮಳಿಗೆಗಳಿಗೆ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ತಲುಪಿಸುತ್ತಿದ್ದವು. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಮೀನನ್ನು ಪೂರೈಸಲು ಸಾಧ್ಯವಾಗುತ್ತಿತ್ತು. ಈಗ ಅಧಿಕ ಸಾಮರ್ಥ್ಯದ ಶಾಖ ನಿರೋಧಕ ಐಸೋಲೇಟೆಡ್ ವಾಹನಗಳು ಬರುತ್ತಿರುವುದರಿಂದ ಮೀನಿನ ಮಳಿಗೆಗಳಿಗೆ ಹೆಚ್ಚು ತಾಜಾತನದ ಮೀನುಗಳು ತಲುಪಲಿವೆ.

    ನಿಗಮಕ್ಕೆ ಅಧಿಕ ಸಾಮರ್ಥ್ಯದ ಅತ್ಯಾಧುನಿಕ ಶಾಖ ನಿರೋಧಕ ವಾಹನಗಳು ದೊರೆಯುತ್ತಿರುವುದರಿಂದ ಕರಾವಳಿಯ ಜನರು ಮಾತ್ರವಲ್ಲ, ರಾಜ್ಯದ ಇತರ ಪ್ರದೇಶದ ಜನರಿಗೆ ಕೂಡ ತಾಜಾ ಮೀನು ದೊರೆಯಲಿದೆ. ಬೆಂಗಳೂರು ಒಂದೇ ಕಡೆ 23 ಹವಾನಿಯಂತ್ರಿತ ಮಳಿಗೆಗಳಿದ್ದು, 35 ಅರ್ಜಿಗಳು ವಿಲೇವಾರಿ ಹಂತದಲ್ಲಿವೆ. ರಾಜ್ಯದಾದ್ಯಂತ ಮಾರುಕಟ್ಟೆ ವಿಸ್ತರಿಸಲು ಉತ್ತಮ ಅವಕಾಶಗಳಿವೆ.
    -ನಿತಿನ್ ಕುಮಾರ್, ಅಧ್ಯಕ್ಷರು, ಮೀನುಗಾರಿಕೆ ಅಭಿವೃದ್ಧಿ ನಿಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts