More

    ಕೆಎಫ್‌ಡಿ ನಿಯಂತ್ರಣಕ್ಕೆ ಮುಂಜಾಗ್ರತೆ ಅವಶ್ಯ

    ಎನ್.ಆರ್.ಪುರ: ಮುಂಜಾಗ್ರತಾ ಕ್ರಮ ತೆಗೆದುಕೊಂಡಲ್ಲಿ ಮಂಗನ ಕಾಯಿಲೆ ನಿಯಂತ್ರಣ ಸಾಧ್ಯ ಎಂದು ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನಯ್ ಹೇಳಿದರು.
    ಅವರು ಶುಕ್ರವಾರ ಆರೋಗ್ಯ ಇಲಾಖೆ ಕಾನೂರು ಗ್ರಾಪಂ, ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆಶ್ರಯದಲ್ಲಿ ಏರ್ಪಡಿಸಿದ್ದ ಮಂಗನ ಕಾಯಿಲೆ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನಲ್ಲಿ ಕಂಡು ಬಂದ ಈ ಕಾಯಿಲೆಯು ನಂತರದ ದಿನಗಳಲ್ಲಿ ಮಲೆನಾಡಿನ ಬೇರೆ ಬೇರೆ ತಾಲೂಕುಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರನ್ನು ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೊಪ್ಪ, ಶೃಂಗೇರಿ ಮತ್ತು ತೀರ್ಥಹಳ್ಳಿ ಭಾಗಗಳಲ್ಲಿ ವ್ಯಾಪಕವಾಗಿ ಈ ಕಾಯಿಲೆ ಹರಡುತ್ತಿದ್ದು ಸಾರ್ವಜನಿಕರು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಅಪಾಯದಿಂದ ಪಾರಾಗಬೇಕು ಎಂದರು.
    ವಿದ್ಯಾರ್ಥಿಗಳು ಈ ಕಾಯಿಲೆಯ ರೋಗ ಲಕ್ಷಣಗಳು ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದು ಪಾಲಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸುವುದರ ಮೂಲಕ ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದರು.
    ಕಾಡಿನ ನಿಕಟ ಸಂಪರ್ಕದಲ್ಲಿರುವ ಕೂಲಿ ಕಾರ್ಮಿಕರಿಗೆ, ಕೃಷಿಕರಿಗೆ, ಜಾನುವಾರು ಸಾಕಣೆದಾರರಿಗೆ ರೋಗ ಬರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮ ಅವಶ್ಯಕ. ಕಾಡಿಗೆ ಅನಾವಶ್ಯಕವಾಗಿ ಹೋಗುವುದನ್ನು ನಿಲ್ಲಿಸುವುದು. ಕಾಡಿಗೆ ಹೋಗಿ ಬಂದ ಮೇಲೆ ಬಟ್ಟೆಯನ್ನು ಬಿಸಿ ನೀರಿನಲ್ಲಿ ತೊಳೆದು ಒಣಗಿಸುವುದು, ಬಿಸಿ ನೀರಿನಲ್ಲಿ ಸ್ನಾನ ಮಾಡುವುದು, ಜಾನುವಾರುಗಳ ಮೇಲೆ ಉಣ್ಣೆಗಳು ಕಂಡು ಬಂದಲ್ಲಿ ಅದನ್ನು ನಾಶಪಡಿಸುವುದು, ಆರೋಗ್ಯ ಇಲಾಖೆಯಿಂದ ನೀಡುವ ಉಣ್ಣೆ ನಿವಾರಕ ತೈಲವನ್ನು ಹಚ್ಚಿ ಕಾಡಿಗೆ ಹೋಗಬೇಕು. ಅಸಹಜವಾಗಿ ಮಂಗಗಳು ಸತ್ತಲ್ಲಿ ತಕ್ಷಣ ಆರೋಗ್ಯ ಇಲಾಖೆ, ಗ್ರಾಪಂ ಅಥವಾ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಇಲಾಖೆಯ ಜತೆ ಕೈಜೋಡಿಸಲು ತಿಳಿಸಿದರು.
    ಕಾರ್ಯಕ್ರಮದಲ್ಲಿ ಪಿಡಿಒ ಶ್ರೀನಿವಾಸ್, ಪಂಚಾಯಿತಿಯಿಂದ ತೆಗೆದುಕೊಂಡಿರುವ ಮುಂಜಾಗ್ರತೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕರಪತ್ರಗಳನ್ನು ವಿತರಿಸಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಲಾಯಿತು.
    ಮುಖ್ಯ ಶಿಕ್ಷಕಿ ಮಂಜುಳಾ, ಆಶಾ ಕಾರ್ಯಕರ್ತೆ ಮಂಜುಳಾ, ಸಮುದಾಯ ಆರೋಗ್ಯ ಅಧಿಕಾರಿ ತಿಪ್ಪೇಸ್ವಾಮಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts