ಗಡಿಯಲ್ಲಿ ಕೇರಳಿಗರ ಪ್ರತಿಭಟನೆ

2 Min Read
ಗಡಿಯಲ್ಲಿ ಕೇರಳಿಗರ ಪ್ರತಿಭಟನೆ

ಮಂಜೇಶ್ವರ/ಉಳ್ಳಾಲ (ದ.ಕ.): ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಖಂಡಿಸಿ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಕಾಸರಗೋಡಿಗರ ಸಹಿತ ಕೇರಳಿಗರು ಸೋಮವಾರ ಪ್ರತಿಭಟನೆ ನಡೆಸಿದರು.

ದಕ್ಷಿಣ ಕನ್ನಡಕ್ಕೆ ಹೋಗುವ ಭಾಗದ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕೇರಳದಿಂದ ಬಂದವರನ್ನು ತಪಾಸಣೆಗೆ ಒಳಪಡಿಸಿದರು. ಇದಕ್ಕೆ ಕೇರಳ ರಾಜ್ಯದವರು ವಿರೋಧ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಕೇರಳದ ವಾಹನಗಳಿಗೆ ತಡೆ ಹಿನ್ನೆಲೆಯಲ್ಲಿ ಕೇರಳಕ್ಕೂ ಕರ್ನಾಟಕದ ವಾಹನ ಪ್ರವೇಶಿಸಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು. ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಕರ್ನಾಟಕದ ಎಲ್ಲ ವಾಹನಗಳು ಕೇರಳ ಪ್ರವೇಶಿಸಲಾಗದೆ ಸಾಲುಗಟ್ಟಿ ನಿಂತಿದ್ದವು. ಮುಖಂಡರಾದ ಹರ್ಷಾದ್ ವರ್ಕಾಡಿ, ಎ.ಕೆ.ಎಂ.ಅಶ್ರಫ್ ಸಹಿತ ಅನೇಕರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಆದೇಶ ವಿರುದ್ಧ ಪಿಐಎಲ್: ಕೇರಳ-ಕರ್ನಾಟಕದ ಗಡಿ ಮುಚ್ಚಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಿರುವ ದ.ಕ.ಜಿಲ್ಲಾಡಳಿತದ ಆದೇಶ ಪ್ರಶ್ನಿಸಿ ಕೆಪಿಸಿಸಿ ಕಾರ್ಯದರ್ಶಿ ಬಿ.ಸುಬ್ಬಯ್ಯ ರೈ ತಮ್ಮ ವಕೀಲ ರವಿಶಂಕರ್ ಮೂಲಕ ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಲಾಕ್‌ಡೌನ್ ಸಂದರ್ಭ ತಲಪಾಡಿ ಗಡಿ ಮುಚ್ಚಿದಾಗ ಅಂದಿನ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಹರ್ಷಾದ್ ವರ್ಕಾಡಿ ಹಾಗೂ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಯಡಿಯೂರಪ್ಪಗೆ ಬಿಜೆಪಿ ಪತ್ರ: ದ.ಕ ಜಿಲ್ಲೆ ಪ್ರವೇಶಿಸಲು ಕೋವಿಡ್ ತಪಾಸಣಾ ವರದಿ ಕಡ್ಡಾಯಗೊಳಿಸಿದ ದ.ಕ.ಜಿಲ್ಲಾಡಳಿತದ ನಿಲುವಿಗೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆದೇಶವನ್ನು ಮರುಪರಿಶೀಲಿಸುವಂತೆ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಸ್ಪಷ್ಟ ಚಿತ್ರಣಕ್ಕೆ ಶಾಸಕ ಖಾದರ್ ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳು ದಿನನಿದತ್ಯದ ವಹಿವಾಟಿನಲ್ಲಿ ಪರಸ್ಪರ ಬೆಸೆದುಕೊಂಡಿದೆ. ಕೋವಿಡ್ ಆರಂಭವಾದ ದಿನದಿಂದಲೂ ಗಡಿ ವಿಚಾರದಲ್ಲಿ ದ.ಕ ಜಿಲ್ಲಾಡಳಿತ ತೆಗೆದುಕೊಳ್ಳುತ್ತಿರುವ ನಿರ್ಧಾರದಿಂದ ಜನಸಾಮಾನ್ಯರು ಸಂಕಷ್ಟ ಪಡುವಂತಾಗಿದೆ. ಗಡಿ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ. ಗಡಿ ಗೊಂದಲ ನಿವಾರಿಸಲು ಕಾಸರಗೋಡು ಜಿಲ್ಲಾಡಳಿತಗೊಂದಿಗೆ ಸಭೆ ನಡೆಸಿ, ನಿರ್ಧಾರಕ್ಕೆ ಬರಬೇಕು. ಇಲ್ಲದಿದ್ದರೆ ಮಂಜೇಶ್ವರ, ಕುಂಬಳೆ, ಕಾಸರಗೋಡು ಭಾಗ ದಿಂದ ಬರುವವರಿಗೆ ಕನಿಷ್ಠ ರಿಯಾಯಿತಿಯನ್ನಾದರೂ ನೀಡಬೇಕು. ಆ ಭಾಗದಲ್ಲಿ ಕೋವಿಡ್ ಪ್ರಮಾಣ ಕಡಿಮೆ ಇದೆ ಎಂದರು.

See also  ನಿರಾಶ್ರಿತರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ
Share This Article